
ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಚಿಕ್ಕ ವಯಸ್ಸಿನಲ್ಲಿಯೇ ಆಕರ್ಷಕ ಆಟದಿಂದ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಇದೀಗ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಕೂಡ ವೈಭವ್ ಆಟಕ್ಕೆ ಮಾರು ಹೋಗಿದ್ದಾರೆ. ವೈಭವ್ ವಯಸ್ಸಿನ ಬಗ್ಗೆ ಆಗಾಗ್ಗೆ ಏಳುವ ಚರ್ಚೆಯನ್ನು ಬ್ರೆಟ್ ಲೀ ಅನಗತ್ಯ ಎಂದು ತಳ್ಳಿಹಾಕಿದ್ದಾರೆ.
ವೈಭವ್ ನಂಬಲಸಾಧ್ಯವಾದ ಆಟಗಾರ. ಭಾರತದ ಹೊರಗಿನ ಪ್ರತಿಯೊಬ್ಬರೂ, ಅವನಿಗೆ ನಿಜವಾಗಿಯೂ 15 ವರ್ಷವೇ? ಎಂದು ಕೇಳುತ್ತಾರೆ. ಆದರೆ, ಅವನ ವಯಸ್ಸು ಎಷ್ಟಾದರೂ ಪರವಾಗಿಲ್ಲ. ಈ ಹುಡುಗನಿಗೆ ಕ್ರಿಕೆಟ್ ಆಡಲು ಚೆನ್ನಾಗಿ ಗೊತ್ತಿದೆ ಎಂದು ಬ್ರೆಟ್ ಲೀ ಸ್ಪಷ್ಟಪಡಿಸಿದ್ದಾರೆ. ವೈಭವ್ 15 ವರ್ಷದವನಾಗಿದ್ದರೆ ಅದು ಅದ್ಭುತ, ಒಂದು ವೇಳೆ 17 ಅಥವಾ 18 ವರ್ಷದವನಾಗಿದ್ದರೂ, ಅದು ಅವನ ಆಟದ ಸಾಮರ್ಥ್ಯವನ್ನು ಬದಲಿಸುವುದಿಲ್ಲ ಎಂದು ಲೀ ಅಭಿಪ್ರಾಯಪಟ್ಟಿದ್ದಾರೆ. ಆತನ ವಯಸ್ಸೆಷ್ಟೇ ಇದ್ದರೂ, ಕ್ರಿಕೆಟ್ ಆಡುವ ಅದ್ಭುತ ಸಾಮರ್ಥ್ಯ ಆತನಲ್ಲಿದೆ ಎಂಬುದಷ್ಟೇ ಮುಖ್ಯ ಎಂದು ಲೀ ಹೇಳಿದ್ದಾರೆ.
ಬ್ರೆಟ್ ಲೀ ವೈಭವ್ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ವೇಗದ ಬೌಲರ್‌ಗಳ ವಿರುದ್ಧ ಆತ ಪ್ರದರ್ಶಿಸುವ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ. ಐಪಿಎಲ್ 2026ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ವೈಭವ್ ಗಳಿಸಿದ 97 ರನ್‌ಗಳ ಇನ್ನಿಂಗ್ಸ್ ಲೀ ಅವರಿಗೆ ಭಾರಿ ಮೆಚ್ಚುಗೆ ತಂದಿದೆ. ಆ ಪಂದ್ಯದಲ್ಲಿ ವೇಗದ ಬೌಲರ್‌ಗಳು ನಿರಂತರವಾಗಿ ಬೌನ್ಸರ್‌ಗಳನ್ನು ಹಾಕುತ್ತಿದ್ದರೂ, ವೈಭವ್ ತಮ್ಮ ಶೈಲಿಯನ್ನು ಬದಲಿಸದೆ ಅದ್ಭುತವಾಗಿ ಆಡಿದರು ಎಂದು ಲೀ ನೆನಪಿಸಿಕೊಂಡಿದ್ದಾರೆ. ವೈಭವ್ ಕೇವಲ ಬಲದ ಆಧಾರದ ಮೇಲೆ ದೊಡ್ಡ ಹೊಡೆತಗಳನ್ನು ಆಡುವುದಿಲ್ಲ, ಸರಿಯಾದ ಕ್ರಿಕೆಟಿಂಗ್ ಶಾಟ್‌ಗಳ ಮೂಲಕವೂ ವೇಗವಾಗಿ ರನ್ ಗಳಿಸುತ್ತಾರೆ ಎಂದು ಲೀ ವಿವರಿಸಿದ್ದಾರೆ.
ಬ್ರೆಟ್ ಲೀ ವೈಭವ್ ಸೂರ್ಯವಂಶಿಗೆ ಒಂದು ಪ್ರಮುಖ ಸಲಹೆಯನ್ನೂ ನೀಡಿದ್ದಾರೆ. ಈ ವಯಸ್ಸಿನಲ್ಲಿ ಸಿಗುವ ಅತಿಯಾದ ಪ್ರಚಾರ ಮತ್ತು ನಿರೀಕ್ಷೆಗಳನ್ನು ನಿಭಾಯಿಸುವುದು ಯುವ ಬ್ಯಾಟ್ಸ್‌ಮನ್‌ಗೆ ದೊಡ್ಡ ಸವಾಲು ಎಂದಿದ್ದಾರೆ. ವೈಭವ್ ಅವರ ಬ್ಯಾಟಿಂಗ್ ಅಥವಾ ಫಾರ್ಮ್ ಬಗ್ಗೆ ನನಗೆ ಚಿಂತೆಯಿಲ್ಲ, ಆದರೆ ಅವರು ತಮ್ಮ ಮನಸ್ಸನ್ನು ಮತ್ತು ಹೆಚ್ಚುತ್ತಿರುವ ಖ್ಯಾತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಲಿಯಬೇಕು. ತಂಡದ ಮ್ಯಾನೇಜ್‌ಮೆಂಟ್ ಮತ್ತು ಸುತ್ತಮುತ್ತಲಿನ ಜನರು ವೈಭವ್ ಮೇಲೆ ಹೆಚ್ಚು ಒತ್ತಡ ಹೇರಬಾರದು, ಬದಲಿಗೆ ಅವರಿಗೆ ಮಗುವಿನಂತೆ ತಮ್ಮ ಜೀವನವನ್ನು ಆನಂದಿಸಲು ಅವಕಾಶ ನೀಡಬೇಕು ಎಂದು ಲೀ ಹೇಳಿದ್ದಾರೆ.
ತಮ್ಮ ಆಟದ ದಿನಗಳಲ್ಲಿ ವೈಭವ್ ವಿರುದ್ಧ ಬೌಲಿಂಗ್ ಮಾಡಿದ್ದರೆ ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಬ್ರೆಟ್ ಲೀ ಸ್ಪಷ್ಟ ಉತ್ತರ ನೀಡಿದ್ದಾರೆ. ಮೊದಲು ವೈಭವ್ ಅವರ ಬ್ಯಾಟಿಂಗ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ, ನಂತರ ಅವರ ದೇಹವನ್ನು ಗುರಿಯಾಗಿಸಿಕೊಂಡು ಬೌನ್ಸರ್‌ಗಳನ್ನು ಹಾಕುತ್ತಿದ್ದೆ. ಆ ಎಸೆತಕ್ಕೆ ವೈಭವ್ ಸಿಕ್ಸ್ ಬಾರಿಸಿದ್ದರೂ, ಹಿಂಜರಿಯದೆ ಮುಂದಿನ ಎಸೆತದಲ್ಲೂ ಅವರ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದೆ ಎಂದು ಲೀ ಹೇಳಿದ್ದಾರೆ. ಐಪಿಎಲ್‌ನಲ್ಲಿನ ಅದ್ಭುತ ಪ್ರದರ್ಶನದ ನಂತರ ವೈಭವ್ ಭಾರತೀಯ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದರು. ಇಂಗ್ಲೆಂಡ್ ವಿರುದ್ಧ ಹೆಚ್ಚು ಯಶಸ್ಸು ಕಾಣದಿದ್ದರೂ, ಜಿಂಬಾಬ್ವೆ ಪ್ರವಾಸದಲ್ಲಿ ಉತ್ತಮವಾಗಿ ಆಡಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.