
ಬಾರ್ಬಡೊಸ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಭಾರತ 7 ರನ್ ರೋಚಕ ಜಯ ಸಾಧಿಸಿದೆ. ಈ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ವಿರಾಟ್ ಕೊಹ್ಲಿ, ಅಚ್ಚರಿಯ ರೀತಿಯಲ್ಲಿ ತಮ್ಮ ಅಂತಾರಾಷ್ಟ್ರೀಯ ಟಿ20 ವೃತ್ತಿಬದುಕಿಗೆ ವಿದಾಯ ಘೋಷಿಸಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿರಾಟ್ ಕೊಹ್ಲಿ, " ಇದು ನನ್ನ ಪಾಲಿನ ಕೊನೆಯ ಟಿ20 ವಿಶ್ವಕಪ್. ಇದನ್ನು ನಾವು ಸಾಧಿಸಬೇಕೆಂದು ಸಾಕಷ್ಟು ಸಮಯದಿಂದ ಕಾಯುತ್ತಿದ್ದೆವು. ಇದು ಭಾರತ ಪರ ನಾನಾಡಿದ ಕೊನೆಯ ಟಿ20 ಪಂದ್ಯ. ನಾವು ಕಪ್ ಗೆಲ್ಲಬೇಕೆಂದು ಬಯಸಿದ್ದೆವು. ಅದೇ ರೀತಿ ನನ್ನ ನಿವೃತ್ತಿ ವಿಚಾರ ಗುಟ್ಟಾಗಿಯೇನೂ ಉಳಿದಿಲ್ಲ. ಒಂದು ವೇಳೆ ನಾವು ಟ್ರೋಫಿ ಗೆಲ್ಲದಿದ್ದರೂ ಇಂದೇ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸುತ್ತಿದ್ದೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾರತ ಟಿ20 ವಿಶ್ವಕಪ್ ಸಾಮ್ರಾಟ; ದಶಕದ ಬಳಿಕ ಒಲಿದ ಐಸಿಸಿ ಟ್ರೋಫಿ
"ಮುಂದಿನ ತಲೆಮಾರಿನ ಕ್ರಿಕೆಟಿಗರು ಟಿ20 ಕ್ರಿಕೆಟ್‌ನಲ್ಲಿ ಮುಂದುವರೆಯಲು ಇದು ಸಕಾಲ. ಐಸಿಸಿ ಟೂರ್ನಮೆಂಟ್ ಗೆಲ್ಲಬೇಕು ಎನ್ನುವುದು ಸಾಕಷ್ಟು ನಮ್ಮ ಸಮಯದ ಕನಸಾಗಿತ್ತು. ರೋಹಿತ್ ಶರ್ಮಾ 9 ಟಿ20 ವಿಶ್ವಕಪ್ ಆಡಿದ್ದಾರೆ. ನಾನು 6 ಟಿ20 ವಿಶ್ವಕಪ್ ಆಡಿದ್ದೇನೆ. ರೋಹಿತ್ ಶರ್ಮಾ ಟಿ20 ವಿಶ್ವಕಪ್ ಗೆಲ್ಲಲು ಅರ್ಹವಾದ ವ್ಯಕ್ತಿಯಾಗಿದ್ದಾರೆ. ಇದೊಂದು ಅವಿಸ್ಮರಣೀಯ ಕ್ಷಣ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ 7 ಪಂದ್ಯಗಳನ್ನಾಡಿ ಕೇವಲ 75 ರನ್ ಗಳಿಸಿದ್ದರು. ಆದರೆ ಇದೀಗ ಫೈನಲ್ ಪಂದ್ಯದಲ್ಲಿ 76 ರನ್ ಸಿಡಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ ತಮ್ಮ ಅಂತರಾಷ್ಟ್ರೀಯ ಟಿ20 ವೃತ್ತಿಬದುಕಿನ ಕೊನೆಯ ಪಂದ್ಯದಲ್ಲಿ 59 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 76 ರನ್ ಸಿಡಿಸಿದರು. ಈ ಮೂಲಕ ತಮ್ಮ ಕೊನೆಯ ಟಿ20 ಪಂದ್ಯದಲ್ಲಿ ಪಂದ್ಯಶ್ರೇಷ್ಠ ಜತೆಗೆ ಗೆಲುವಿನ ರೂವಾರಿ ಎನಿಸಿಕೊಂಡು ನಿವೃತ್ತಿ ಘೋಷಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.