ಭಾರತ ಟಿ20 ವಿಶ್ವಕಪ್ ಸಾಮ್ರಾಟ; ದಶಕದ ಬಳಿಕ ಒಲಿದ ಐಸಿಸಿ ಟ್ರೋಫಿ

By Naveen Kodase  |  First Published Jun 29, 2024, 11:33 PM IST

ರೋಹಿತ್ ಶರ್ಮಾ ಅದ್ಭುತ ನಾಯಕತ್ವ, ಜಸ್ಪ್ರೀತ್ ಬುಮ್ರಾ ಮಾರಕ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ಎದುರು 7 ರನ್ ರೋಚಕ ಜಯ ಸಾಧಿಸಿದೆ. ದಶಕದ ಬಳಿಕ ಭಾರತ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ.


ಬಾರ್ಬಡೊಸ್: ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಟ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ರೋಚಕವಾಗಿ ಮಣಿಸಿದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕ್ರಿಕೆಟ್‌ ಜಗತ್ತಿನ ಅತಿದೊಡ್ಡ ಚೋಕರ್ಸ್ ಎಂದು ಟೀಕೆಗೆ ಗುರಿಯಾಗಿದ್ದ ದಕ್ಷಿಣ ಆಫ್ರಿಕಾ ತಂಡ ಮತ್ತೊಮ್ಮೆ ಪ್ರಶಸ್ತಿಯ ಹೊಸ್ತಿಲಿಗೆ ಬಂದು ಎಡವಿತು. ಇನ್ನು ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸಿದ್ದ ಭಾರತ ತಂಡಕ್ಕೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಒಲಿದಿದೆ. ಮಹೇಂದ್ರ ಸಿಂಗ್ ಧೋನಿ ಬಳಿಕ ಐಸಿಸಿ ಟ್ರೋಫಿ ಗೆದ್ದ ಮೊದಲ ನಾಯಕ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಗೆಲ್ಲಲು 177 ರನ್‌ ಸವಾಲಿನ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೀಜಾ ಹೆಂಡ್ರಿಕ್ಸ್‌ 4 ರನ್ ಗಳಿಸಿ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಇದರ ಬೆನ್ನಲ್ಲೇ ನಾಯಕ ಏಯ್ಡನ್ ಮಾರ್ಕ್‌ರಮ್ ಕೇವಲ 4 ರನ್‌ಗಳಿಸಿ ಆರ್ಶದೀಪ್ ಸಿಂಗ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

The wait of 17 years comes to an end 🇮🇳

India win their second trophy 🏆 pic.twitter.com/wz36sxYAhw

— ICC (@ICC)

Tap to resize

Latest Videos

undefined

ಸ್ಟಬ್ಸ್‌-ಡಿ ಕಾಕ್ ಆಸರೆ: ಕೇವಲ 12 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೂರನೇ ವಿಕೆಟ್‌ಗೆ ಕ್ವಿಂಟನ್ ಡಿ ಕಾಕ್ ಹಾಗೂ ಟ್ರಿಸ್ಟಿನ್ ಸ್ಟಬ್ಸ್‌ ಕೇವಲ 38 ಎಸೆತಗಳಲ್ಲಿ 58 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಟಬ್ಸ್‌ 21 ಎಸೆತಗಳನ್ನು ಎದುರಿಸಿ 31 ರನ್ ಸಿಡಿಸಿ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಆಟವಾಡಿದ ಕ್ವಿಂಟನ್ ಡಿ ಕಾಕ್ 31 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 39 ರನ್ ಬಾರಿಸಿ ಆರ್ಶದೀಪ್‌ಗೆ ಎರಡನೇ ಬಲಿಯಾದರು.

ಗುಡುಗಿದ ಕ್ಲಾಸೇನ್: ಸ್ಟಬ್ಸ್‌ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಹೆನ್ರಿಚ್ ಕ್ಲಾಸೇನ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಆರಂಭದಿಂದಲೇ ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಮೇಲೆ ಕ್ಲಾಸೇನ್ ಸವಾರಿ ಮಾಡಿದರು. ಅದರಲ್ಲೂ 15ನೇ ಓವರ್‌ ಎಸೆತದ ಅಕ್ಷರ್ ಪಟೇಲ್ ಒಂದೇ ಓವರ್‌ನಲ್ಲಿ ಕ್ಲಾಸೇನ್ ತಲಾ 2 ಸಿಕ್ಸರ್ ಹಾಗೂ ಬೌಂಡರಿ ಸಹಿತ 24 ರನ್ ಬಾರಿಸಿ ಪಂದ್ಯ ದಕ್ಷಿಣ ಆಫ್ರಿಕಾ ಪರ ವಾಲುವಂತೆ ಮಾಡಿದರು. ಕ್ಲಾಸೇನ್ ಕೇವಲ 23 ಎಸೆತಗಳನ್ನು ಎದುರಿಸಿ ಆಕರ್ಷಕ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಕ್ಲಾಸೇನ್ 27 ಎಸೆತಗಳನ್ನು 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 52 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.

ಫೈನಲ್‌ನಲ್ಲಿ ಗುಡುಗಿದ ವಿರಾಟ್ ಕೊಹ್ಲಿ; ಟಿ20 ವಿಶ್ವಕಪ್‌ ಗೆಲ್ಲಲು ಹರಿಣಗಳಿಗೆ ಸವಾಲಿನ ಗುರಿ

ಇನ್ನು ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 16 ರನ್ ಬೇಕಿತ್ತು. 20ನೇ ಓವರ್‌ ದಾಳಿಗಿಳಿದ ಹಾರ್ದಿಕ್ ಪಾಂಡ್ಯ, ಡೇಂಜರ್ಸ್ ಡೇವಿಡ್ ಮಿಲ್ಲರ್(21) ಅವರನ್ನು ಬಲಿ ಪಡೆದರು. ಸೂರ್ಯಕುಮಾರ್ ಯಾದವ್ ಹಿಡಿದ ಭರ್ಜರಿ ಕ್ಯಾಚ್‌ಗೆ ಮಿಲ್ಲರ್ ಪೆವಿಲಿಯನ್ ಹಾದಿ ಹಿಡಿದರು.ಇದಾದ ಬಳಿಕ ರಬಾಡ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರಾದರೂ ಆ ಬಳಿಕ ಪಾಂಡ್ಯ, ಹರಿಣಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. 

ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಪವರ್‌ಪ್ಲೇನೊಳಗೆ 34 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು. ಆದರೆ ನಾಲ್ಕನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಅಕ್ಷರ್ ಪಟೇಲ್ ಜೋಡಿ ಕೇವಲ 54 ಎಸೆತಗಳನ್ನು ಎದುರಿಸಿ ಅಮೂಲ್ಯ 72 ರನ್‌ಗಳ ಜತೆಯಾಟವಾಡಿದರು. ಅಕ್ಷರ್ ಪಟೇಲ್ 31 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 47 ರನ್‌ಗಳಿಸಿ ನಾನ್‌ಸ್ಟ್ರೈಕ್‌ನಲ್ಲಿ ರನೌಟ್ ಆಗಿ ಪೆವಿಲಿಯನ್ ಸೇರಿದರು.

ಈ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 48 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ, ಆ ಬಳಿಕ ಸ್ಪೋಟಕ ಇನಿಂಗ್ಸ್‌ ಆಡಿದರು. ಅಂತಿಮವಾಗಿ ಕೊಹ್ಲಿ 59 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 76 ರನ್ ಸಿಡಿಸಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಇನ್ನು ಕೊನೆಯಲ್ಲಿ ಶಿವಂ ದುಬೆ 27 ರನ್ ಸಿಡಿಸಿ ತಂಡದ ಮೊತ್ತವನ್ನು 170ರ ಗಡಿ ದಾಟುವಂತೆ ಮಾಡಿದರು.
 

click me!