
ಬಾರ್ಬಡಾಸ್(ಜೂ.29): ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ತಾವೊಬ್ಬ ಲೆಜೆಂಡ್ ಆಟಗಾರ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಮಹತ್ವದ ಹೈವೋಲ್ಟೇಜ್ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ಇನ್ನು ಕೊಹ್ಲಿಗೆ ಆಲ್ರೌಂಡರ್ ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ಉತ್ತಮ ಸಾಥ್ ನೀಡಿದರು. ಪರಿಣಾಮ ಆರಂಭಿಕ ಆಘಾತದ ಹೊರತಾಗಿಯೂ ಟೀಂ ಇಂಡಿಯಾ, 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಬಾರಿಸಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ ಕಠಿಣ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ಮೊದಲ ಓವರ್‌ನಲ್ಲೇ ಮೂರು ಬೌಂಡರಿ ಬಾರಿಸುವ ಮೂಲಕ ಸ್ಪೋಟಕ ಆರಂಭ ಒದಗಿಸಿಕೊಡುವ ಮುನ್ಸೂಚನೆ ನೀಡಿದರು. ಆದರೆ ಎರಡನೇ ಓವರ್‌ನಲ್ಲೇ ದಕ್ಷಿಣ ಆಫ್ರಿಕಾ ನಾಯಕ ಏಯ್ಡನ್ ಮಾರ್ಕ್‌ರಮ್ ಚೆಂಡನ್ನು ಸ್ಪಿನ್ನರ್ ಕೇಶವ್ ಮಹರಾಜ್ ಕೈಗಿತ್ತರು. ನಾಯಕನ ನಂಬಿಕೆ ಹುಸಿಗೊಳಿಸದ ಕೇಶವ್ ಮಹರಾಜ್ ತಾವೆಸೆದ ಮೊದಲ ಓವರ್‌ನಲ್ಲೇ ರೋಹಿತ್ ಶರ್ಮಾ(9) ಹಾಗೂ ರಿಷಭ್ ಪಂತ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಕ್ರೀಸ್‌ಗಿಳಿದ ಸೂರ್ಯಕುಮಾರ್ ಯಾದವ್ ಅವರನ್ನು ಒಂದಂಕಿ ಮೊತ್ತಕ್ಕೆ(3) ಪೆವಿಲಿಯನ್ನಿಗಟ್ಟುವಲ್ಲಿ ಕಗಿಸೋ ರಬಾಡ ಯಶಸ್ವಿಯಾದರು.
ಆಸರೆಯಾದ ಕೊಹ್ಲಿ-ಅಕ್ಷರ್: ಕೇವಲ 4.3 ಓವರ್‌ನಲ್ಲಿ 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ದಿಢೀರ್ ವಿಕೆಟ್ ಪತನದಿಂದಾಗಿ ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಕ್ರೀಸ್‌ಗಿಳಿದ ಅಕ್ಷರ್ ಪಟೇಲ್ ಚುರುಕಾಗಿ ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರೆ, ಮತ್ತೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ರಕ್ಷಣಾತ್ಮಕವಾಗಿ ಬ್ಯಾಟ್ ಬೀಸಿದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ ಕೇವಲ 54 ಎಸೆತಗಳನ್ನು ಎದುರಿಸಿ ಅಮೂಲ್ಯ 72 ರನ್‌ಗಳ ಜತೆಯಾಟವಾಡಿದರು. ಅಕ್ಷರ್ ಪಟೇಲ್ 31 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 47 ರನ್‌ಗಳಿಸಿ ನಾನ್‌ಸ್ಟ್ರೈಕ್‌ನಲ್ಲಿ ರನೌಟ್ ಆಗಿ ಪೆವಿಲಿಯನ್ ಸೇರಿದರು.
ಕೊನೆಗೂ ಗುಡುಗಿದ ಕೊಹ್ಲಿ: ಈ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ, ಮೊದಲ 7 ಪಂದ್ಯಗಳಿಂದ ಗಳಿಸಿದ್ದು ಕೇವಲ 75 ರನ್ ಮಾತ್ರವಾಗಿತ್ತು. ಆದರೆ ಫೈನಲ್ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿದ್ದಾಗ, ಜವಾಬ್ದಾರಿಯುತ ಇನಿಂಗ್ಸ್ ಆಡುವ ಮೂಲಕ ತಂಡಕ್ಕೆ ಆಸರೆಯಾದರು. 48 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ, ಆ ಬಳಿಕ ಸ್ಪೋಟಕ ಇನಿಂಗ್ಸ್ ಆಡಿದರು. ಅಂತಿಮವಾಗಿ ಕೊಹ್ಲಿ 59 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 76 ರನ್ ಸಿಡಿಸಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.
ಇನ್ನು ಕೊನೆಯಲ್ಲಿ ಶಿವಂ ದುಬೆ(27) ಹಾಗೂ ಹಾರ್ದಿಕ್ ಪಾಂಡ್ಯ(5) ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 175ರ ಗಡಿ ದಾಟಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.