ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿನ ಸೋಲಿನ ಬಳಿಕ ಟೀಂ ಇಂಡಿಯಾ ಆಯ್ಕೆಯ ಕುರಿತು ಪ್ರಶ್ನೆಗಳು ಎದ್ದಿವೆ. ರೋಹಿತ್ ಮತ್ತು ಕೊಹ್ಲಿ ಅವರಂತಹ ಅನುಭವಿ ಆಟಗಾರರ ನಿವೃತ್ತಿಯ ನಂತರ ತಂಡವನ್ನು ಪುನರ್ರಚಿಸುವುದು ಬಿಸಿಸಿಐಗೆ ದೊಡ್ಡ ಸವಾಲಾಗಿದೆ. ಬಲಿಷ್ಠ ಟೆಸ್ಟ್ ತಂಡವನ್ನು ಕಟ್ಟಲು ಹಲವು ಸವಾಲುಗಳನ್ನು ಎದುರಿಸಬೇಕಿದೆ.
ಬೆಂಗಳೂರು: ಯುವ ಹಾಗೂ ಅನುಭವಿಗಳನ್ನೊಳಗೊಂಡ ಭಾರತ ಕ್ರಿಕೆಟ್ ತಂಡವು ಹಲವು ನಿರೀಕ್ಷೆಗಳೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸ ಮಾಡಿತ್ತು. ಮೊದಲ ಪಂದ್ಯದಲ್ಲಿ ಭರ್ಜರಿ ಶುಭಾರಂಭ ಮಾಡಿದ್ದ ಭಾರತ ತಂಡವು ಆ ಬಳಿಕ ಸತತ ಪಂದ್ಯಗಳನ್ನು ಸೋಲುವ ಮೂಲಕ ಸರಣಿಯನ್ನು ಕೈಚೆಲ್ಲಿತು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಆಯ್ಕೆಯ ಕುರಿತಂತೆ ಸಹಜವಾಗಿಯೇ ಪ್ರಶ್ನೆಗಳು ಎದ್ದಿವೆ. ಸಮರ್ಥ ಟೆಸ್ಟ್ ತಂಡ ಕಟ್ಟುವುದು ಟೀಂ ಇಂಡಿಯಾದ ತುರ್ತು ಅಗತ್ಯ. ಆದರೆ ಅದು ಅಷ್ಟು ಸುಲಭದ್ದಲ್ಲ. ಬಲಿಷ್ಠ ತಂಡ ಕಟ್ಟಲು ತಂಡದ ಮುಂದೆ ಬೆಟ್ಟದಷ್ಟು ಸವಾಲುಗಳಿವೆ.
1. ರೋಹಿತ್, ಕೊಹ್ಲಿ ಸ್ಥಾನ ತುಂಬಬಲ್ಲ ಆಟಗಾರರ ಹುಡುಕಾಟ
ರೋಹಿತ್, ಕೊಹ್ಲಿ ನಿವೃತ್ತಿ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರಿಬ್ಬರ ಸ್ಥಾನ ತುಂಬುವುದು ಅಂದುಕೊಂಡಷ್ಟು ಸುಲಭವಲ್ಲ. ಆದರೆ ಅದರ ಅಗತ್ಯವಿದೆ. ಅವರಷ್ಟೇ ಸಮರ್ಥ ಆಟಗಾರರನ್ನು ಹುಡುಕುವುದು ಬಿಸಿಸಿಐ ಮುಂದಿರುವ ಪ್ರಮುಖ ಸವಾಲು.
ಆಯ್ಕೆ ಗೊಂದಲದಲ್ಲೇ ಮುಗಿದ ಆಸೀಸ್ ಪ್ರವಾಸ; ಇನ್ನು 6 ತಿಂಗಳಲ್ಲೇ ಬಲಿಷ್ಠ ತಂಡ ಕಟ್ಟುವ ಸವಾಲು
2. ಶುಭ್‌ಮನ್ ಗಿಲ್ ಸ್ಥಾನಕ್ಕೆ ಸೂಕ್ತ ಆಟಗಾರನ ಆಯ್ಕೆ
ಗಿಲ್ ಆಯ್ಕೆಯೇ ಗೊಂದಲಕಾರಿ. ಅವರನ್ನು ಮುಂದುವರಿಸುವುದಿದ್ದರೆ ಸೂಕ್ತ ಅವಕಾಶ ಅಗತ್ಯ. ಕೆಲ ಪಂದ್ಯಗಳಲ್ಲಿ ಆಡಿಸಿ, ಕೈ ಬಿಡುವುದಕ್ಕಿಂತ ಅವರ ಬದಲು ಸಮರ್ಥ ಆಟಗಾರರನ್ನು ಹುಡುಕಬೇಕು. ಅಭಿಮನ್ಯು ಈಶ್ವರನ್, ಸಾಯಿ ಸುದರ್ಶನ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ದೇವದತ್ ಆಯ್ಕೆ ತಂಡದ ಮುಂದಿದೆ.
3. ವೇಗಿ ಜಸ್‌ಪ್ರೀತ್ ಬುಮ್ರಾ ಹೊರೆ ತಗ್ಗಿಸಬಲ್ಲ ವೇಗಿ
ಬುಮ್ರಾ ಭಾರತೀಯ ಬೌಲಿಂಗ್‌ನಲ್ಲೀಗ ಒನ್ ಮ್ಯಾನ್ ಆರ್ಮಿ ಇದ್ದಂತೆ. ಅವರಿಗೆ ಇತರರಿಂದ ಬೆಂಬಲ ಸಿಗುತ್ತಿಲ್ಲ, ಸಿರಾಜ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಆಕಾಶ್‌ದೀಪ್, ಹರ್ಷಿತ್, ಮುಕೇಶ್, ಪ್ರಸಿದ್ಧ್ ಸೇರಿ ಪ್ರತಿಭಾವಂತ ವೇಗಿಗಳಿಗೆ ಸೂಕ್ತ ಅವಕಾಶ ನೀಡಬೇಕಿದೆ.
4. ಮಧ್ಯಮ, ಕೆಳ ಮಧ್ಯಮ ಕ್ರಮಾಂಕದ ಬ್ಯಾಟಿಂಗ್
ಆರಂಭಿಕ ಆಟಗಾರರು ವಿಫಲರಾದರೆ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ. ಮಧ್ಯಮ, ಕೆಳ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಂಡ ಹಲವು ವರ್ಷಗಳಿಂದ ಪರದಾಡುತ್ತಿದೆ. ನಿತೀಶ್ ರೆಡ್ಡಿ ಈ ಸಮಸ್ಯೆ ನೀಗಿಸುವ ನಿರೀಕ್ಷೆಯಿದ್ದರೂ, ಇನ್ನೂ ಕೆಲ ಆಯ್ಕೆಗಳ ಅಗತ್ಯ ತಂಡಕ್ಕಿದೆ.
ಧನಶ್ರೀ ಬಳಿ ಡ್ಯಾನ್ಸ್ ಕಲಿಯಲು ಹೋಗಿ ಜಾರಿಬಿದ್ದ ಚಹಲ್! ಡ್ಯಾನ್ಸ್‌ನಿಂದ ಆರಂಭ ಡಿವೋರ್ಸ್‌ನಲ್ಲಿ ಅಂತ್ಯ?
5. ಬುಮ್ರಾ ಹಾಗೂ ಇತರ ವೇಗಿಗಳ ಕಾರ್ಯದೊತ್ತಡ
2023ರಿಂದ ಸಿರಾಜ್ 683.5, ಬುಮ್ರಾ 560.1 ಓವರ್ ಬೌಲ್ ಮಾಡಿದ್ದಾರೆ. ಬೂಮ್ರಾ ನಿರಂತರ ಕ್ರಿಕೆಟ್‌ನಿಂದಾಗಿ ಪದೇ ಪದೇ ಗಾಯಗೊಳ್ಳುತ್ತಿದ್ದಾರೆ. ಸಿರಾಜ್ ಬಿಡುವಿಲ್ಲದೆ ಆಡುತ್ತಿದ್ದಾರೆ. ಹೀಗಾಗಿ ವೇಗಿಗಳ ವಿಚಾರದಲ್ಲಿ ಹಲವು ಆಯ್ಕೆಗಳು ತಂಡಕ್ಕೆ ಅಗತ್ಯವಿದೆ. ದೇಸಿ ಕ್ರಿಕೆಟ್‌ನ ಪ್ರತಿಭಾವಂತ ವೇಗಿಗಳತ್ತ ಗಮನಹರಿಸಬೇಕಿದೆ.
6. ಬುಮ್ರಾ ನಾಯಕನಾದರೆ ಸೂಕ್ತ ಉಪನಾಯಕನ ಅಗತ್ಯತೆ
ರೋಹಿತ್ ಶರ್ಮಾ ಇಲ್ಲದಿದ್ದಾಗ ಬುಮ್ರಾ ಭಾರತದ ಹಂಗಾಮಿ ನಾಯಕ. ಅವರೇ ಮುಂದಿನ ಕಾಯಂ ನಾಯಕನಾಗಬಹುದು. ಹೀಗಾದರೆ ಉಪನಾಯಕತ್ವ ಯಾರಿಗೆ ನೀಡಬೇಕು ಎಂಬ ತಲೆಬಿಸಿ ಎದುರಾಗುತ್ತದೆ. ಕೆ.ಎಲ್.ರಾಹುಲ್, ರಿಷಭ್ ಪಂತ್ ತಂಡದ ಮುಂದಿರುವ ಆಯ್ಕೆಗಳು.