
ಬೆಂಗಳೂರು(ಜು.24): ಇದೇ ಜುಲೈ 28ರಿಂದ ಆರಂಭವಾಗಲಿರುವ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಬರ್ಮಿಂಗ್‌ಹ್ಯಾಮ್‌ಗೆ ಪ್ರಯಾಣಿಸಬೇಕಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ 3 ಆಟಗಾರ್ತಿಯರು ಸೇರಿದಂತೆ ಒಟ್ಟು 6 ಮಂದಿಗೆ ಇನ್ನೂ ವೀಸಾ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಸದ್ಯ ಬೆಂಗಳೂರಿನಲ್ಲಿ ಅಭ್ಯಾಸ ಶಿಬಿರದಲ್ಲಿ ತೊಡಗಿಸಿಕೊಂಡಿರುವ ಆಟಗಾರ್ತಿಯರು ಭಾನುವಾರ ಇಂಗ್ಲೆಂಡ್‌ಗೆ ಪ್ರಯಾಣಿಸಬೇಕಿದೆ. ಆದರೆ ವೀಸಾ ಸಿಗದ ಕಾರಣ ಪ್ರಯಾಣ ತಡವಾಗುವ ಸಾಧ್ಯತೆ ಇದೆ. 3 ಆಟಗಾರ್ತಿಯರು, 3 ಸಹಾಯಕ ಸಿಬ್ಬಂದಿಗೆ ಕೂಡಲೇ ವೀಸಾ ವ್ಯವಸ್ಥೆ ಮಾಡುವಂತೆ ಬಿಸಿಸಿಐ, ಭಾರತ ಒಲಿಂಪಿಕ್ ಸಂಸ್ಥೆಗೆ ಮನವಿ ಮಾಡಿದೆ.
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ಸೇರ್ಪಡೆಗೊಳಿಸಲಾಗಿದ್ದು, ಟಿ20 ಮಾದರಿಯ ಟೂರ್ನಿಯಲ್ಲಿ ಭಾರತ ಜುಲೈ 29ಕ್ಕೆ ಆಸ್ಪ್ರೇಲಿಯಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ಜುಲೈ 31ಕ್ಕೆ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿರುವ ತಂಡ, ಆಗಸ್ಟ್ 3ಕ್ಕೆ ಬಾರ್ಬಡೋಸ್ ವಿರುದ್ಧ ಸೆಣಸಲಿದೆ.
ವಯೋ ವಂಚನೆ ಪತ್ತೆಗಾಗಿ ಬಿಸಿಸಿಐ ಹೊಸ ಸಾಫ್ಟ್‌ವೇರ್
ನವದೆಹಲಿ: ಆಟಗಾರರ ವಯೋ ವಂಚನೆಯನ್ನು ಪತ್ತೆ ಹಚ್ಚಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೊಸ ಸಾಫ್ಟ್‌ವೇರ್ ಬಳಸಲಿದ್ದು, ಹಳೆ ವಿಧಾನಕ್ಕೆ ತಗುಲುತ್ತಿದ್ದ ಖರ್ಚಿನಲ್ಲಿ ಶೇ.80ರಷ್ಟು ಹಣ ಉಳಿತಾಯ ಮಾಡಿಕೊಳ್ಳಲಿದೆ. ಸದ್ಯ ಬಿಸಿಸಿಐ ಟಿಡಬ್ಲ್ಯು3 ವಿಧಾನದ ಮೂಲಕ ಎಡಗೈ ಹಾಗೂ ಮಣಿಕಟ್ಟಿನ ಎಕ್ಸ್‌ರೇ ಆಧರಿಸಿ ವಯೋ ವಂಚನೆಯನ್ನು ಕಂಡುಹಿಡಿಯುತ್ತಿದೆ. ಇದಕ್ಕೆ ಪ್ರತೀ ಬಾರಿ 2,400 ರು. ಖರ್ಚಾಗುತ್ತಿದ್ದು, ಫಲಿತಾಂಶ ಬರಲು 3-4 ದಿನ ಕಾಯಬೇಕು. ಆದರೆ ಇನ್ನು ಮುಂದೆ ಬೋನ್ ಎಕ್ಸ್‌ಪರ್ಚ್ ಎನ್ನುವ ಹೊಸ ಸಾಫ್ಟ್‌ವೇರ್ ಬಳಸಲು ಮಂಡಳಿ ನಿರ್ಧರಿಸಿದೆ.
Ind vs WI ವಿಂಡೀಸ್ ಎದುರು ಧವನ್ ಪಡೆಗೆ ಏಕದಿನ ಸರಣಿ ಜಯದ ಗುರಿ
ಈ ಸಾಫ್ಟ್‌ವೇರ್ ವಯೋ ವಂಚನೆ ಬಗ್ಗೆ ತ್ವರಿತ ಫಲಿತಾಂಶ ನೀಡಲಿದ್ದು, ಪ್ರತೀ ಪರೀಕ್ಷೆಗೆ ಕೇವಲ 288 ರು. ಖರ್ಚಾಗಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಎಲ್ಲಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ಜೊತೆ ಬಿಸಿಸಿಐ ಮಾತುಕತೆಯಲ್ಲಿ ತೊಡಗಿದ್ದು, ಶೀಘ್ರದಲ್ಲೇ ಹೊಸ ವಿಧಾನಕ್ಕೆ ಮೊರೆ ಹೋಗಲಿದೆ ಎಂದು ಗೊತ್ತಾಗಿದೆ. ವಯೋ ವಂಚನೆ ಮಾಡಿದ ಯಾವುದೇ ಪುರುಷ, ಮಹಿಳಾ ಕ್ರಿಕೆಟಿಗರಿಗೆ ಬಿಸಿಸಿಐ 2 ವರ್ಷಗಳ ನಿಷೇಧ ಹೇರಲಿದೆ.
ಸ್ಯಾಮ್ ನಾರ್ಥ್‌ಈಸ್ಟ್ 410 ರನ್: ಈ ಶತಮಾನದ ಗರಿಷ್ಠ
ಲೀಸೆಸ್ಟರ್(ಇಂಗ್ಲೆಂಡ್): ಇಂಗ್ಲೆಂಡ್‌ನ ಗ್ಲಾಮೋರ್ಗನ್ ಕೌಂಟಿ ತಂಡದ ಬ್ಯಾಟರ್ ಸ್ಯಾಮ್ ನಾರ್ಥ್‌ಈಸ್ಟ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 400+ ರನ್ ಕಲೆ ಹಾಕಿದ ಅಪರೂಪದ ಕ್ರಿಕೆಟಿಗರ ಗುಂಪಿಗೆ ಸೇರ್ಪಡೆಯಾಗಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ 32 ವರ್ಷದ ಸ್ಯಾಮ್, ಲೀಸೆಸ್ಟರ್‌ಶೈರ್ ವಿರುದ್ಧ ಔಟಾಗದೆ 410(450 ಎಸೆತ) ರನ್ ಕಲೆ ಹಾಕಿದರು. ಈ ಮೂಲಕ ಈ ಶತಮಾನದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು.
ವೆಸ್ಟ್‌ಇಂಡೀಸ್‌ನ ಬ್ರಿಯಾನ್ ಲಾರಾ 2004ರಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ್ದ 400 ರನ್ ಈವರೆಗಿನ ದಾಖಲೆಯಾಗಿತ್ತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸ್ಯಾಮ್‌ಗೂ ಮೊದಲು 8 ಮಂದಿ 400+ ರನ್ ಗಳಿಸಿದ್ದರು. ಈ ಪೈಕಿ ಆಸ್ಪ್ರೇಲಿಯಾದ ಬಿಲ್ ಪೊನ್ಸ್‌ಪಾರ್ಡ್ 2 ಬಾರಿ ಈ ಮೈಲಿಗಲ್ಲು ತಲುಪಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.