
ಬೆಂಗಳೂರು: ಆರ್‌ಸಿಬಿ ತಂಡದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಐಪಿಎಲ್ ಇತಿಹಾಸದಲ್ಲಿ ಒಂದು ಅಪರೂಪದ ಸಾಧನೆ ಮಾಡಿದ್ದಾರೆ. ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ಪೇಸ್ ಬೌಲರ್ ಎಂಬ ವಿಶೇಷ ದಾಖಲೆಯನ್ನು ಭುವಿ ತಮ್ಮದಾಗಿಸಿಕೊಂಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ಚೆನ್ನೈ ಆಟಗಾರ ಆಯುಷ್ ಮಾಥ್ರೆ ಅವರನ್ನು ಔಟ್ ಮಾಡುವ ಮೂಲಕ ಭುವನೇಶ್ವರ್ ಈ ಮೈಲಿಗಲ್ಲು ತಲುಪಿದರು. ಭುವಿ ಈ 200 ವಿಕೆಟ್‌ಗಳ ಗಡಿ ಮುಟ್ಟಲು 192 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಚೆನ್ನೈ ವಿರುದ್ಧದ ಈ ಪಂದ್ಯದಲ್ಲಿ ಭುವಿ ನಾಲ್ಕು ಓವರ್‌ಗಳಲ್ಲಿ 41 ರನ್ ನೀಡಿ ಮೂರು ವಿಕೆಟ್ ಪಡೆದರು.
ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಎರಡನೇ ಬೌಲರ್ ಹಾಗೂ ಮೊದಲ ವೇಗಿ ಎಂಬ ಹೆಗ್ಗಳಿಕೆ ಭುವನೇಶ್ವರ್ ಕುಮಾರ್ ಅವರದ್ದು. ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯುಜುವೇಂದ್ರ ಚಹಲ್ (224 ವಿಕೆಟ್) ಐಪಿಎಲ್‌ನಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಆಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಪರ 191 ಪಂದ್ಯಗಳಿಂದ 193 ವಿಕೆಟ್ ಪಡೆದಿರುವ ಸುನಿಲ್ ನರೈನ್ ವಿಕೆಟ್ ಬೇಟೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಒಂದೇ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಸದ್ಯ ಸುನಿಲ್ ನರೈನ್ ಹೆಸರಿನಲ್ಲಿದೆ.
2011ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಭುವನೇಶ್ವರ್ ಒಟ್ಟು 3 ತಂಡಗಳನ್ನು ಪ್ರತಿನಿಧಿಸಿದ್ದಾರೆ. 2009-10ರಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಭುವನೇಶ್ವರ್, ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ತಂಡದ ಪರ 1 ಪಂದ್ಯ ಆಡಿದ್ದರು. ಆದರೆ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 2011ರಲ್ಲಿ. ಪುಣೆ ವಾರಿಯರ್ಸ್ ತಂಡದ ಪರ 3 ವರ್ಷ ಆಡಿದ್ದ ಭುವನೇಶ್ವರ್, 2014ರಿಂದ 2024ರ ವರೆಗೂ ಸನ್‌ರೈಸರ್ಸ್ ಹೈದ್ರಾಬಾದ್‌ನ ಅವಿಭಾಜ್ಯ ಅಂಗವಾಗಿದ್ದರು. ಆದರೆ 2025ರಲ್ಲಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಗೊಂಡಿದ್ದ ಭುವನೇಶ್ವರ್, ತಂಡ ಮೊದಲ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಭುವನೇಶ್ವರ್, ಜಸ್ಪ್ರೀತ್ ಬುಮ್ರಾ ಮತ್ತು ಡ್ವೇನ್ ಬ್ರಾವೋ ಅವರನ್ನು ಹಿಂದಿಕ್ಕಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಬುಮ್ರಾ ಮತ್ತು ವೆಸ್ಟ್ ಇಂಡೀಸ್ ಮೂಲದ ದಿಗ್ಗಜ ಬೌಲಿಂಗ್ ಆಲ್ರೌಂಡರ್ ಡ್ವೇನ್ ಬ್ರಾವೋ ಇಬ್ಬರೂ ತಲಾ 183 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2013 ರಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಬುಮ್ರಾ, 147 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್‌ನಿಂದ ನಿವೃತ್ತರಾಗಿರುವ ಬ್ರಾವೋ, 161 ಪಂದ್ಯಗಳಿಂದ 183 ವಿಕೆಟ್‌ಗಳನ್ನು ಪಡೆದಿದ್ದರು.
ಬೌಲರ್ ಪಂದ್ಯ ವಿಕೆಟ್
ಯುಜುವೇಂದ್ರ ಚಹಲ್ 176 224
ಭುವನೇಶ್ವರ್ ಭುವನೇಶ್ವರ್ 192 200
ಸುನಿಲ್ ನರೇನ್ 191 193
ಪೀಯೂಷ್ ಚಾವ್ಲಾ 192 192
ರವಿಚಂದ್ರನ್ ಅಶ್ವಿನ್ 221 187
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.