
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮರಳಿ ತಂದಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಈಗ ಸ್ಟೇಡಿಯಂ ನವೀಕರಣಕ್ಕೆ ಮುಂದಾಗಿದೆ. ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು 20000ದಷ್ಟು ಹೆಚ್ಚಿಸಲು ಚಿಂತನೆ ನಡೆಸಿರುವ ಕೆಎಸ್‌ಸಿಎ, ಇದಕ್ಕಾಗಿ ಟೆಂಡರ್‌ನ ಆರಂಭಿಕ ಪ್ರಕ್ರಿಯೆಯನ್ನೂ ಆರಂಭಿಸಿದೆ.
ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ಅಧಿಕಾರಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವಾಕಾಂಕ್ಷೆಯ ನವೀಕರಣ ಯೋಜನೆ ಬಗ್ಗೆ ಚರ್ಚಿಸಿದ್ದಾರೆ. ಪ್ರಸ್ತುತ ಸುಮಾರು 34,000 ಇರುವ ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು ಹೆಚ್ಚುವರಿಯಾಗಿ 20,000 ಆಸನಗಳನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಕೆಎಸ್‌ಸಿಎ ಮುಂದಿಟ್ಟಿದೆ. ಈ ಕ್ರೀಡಾಂಗಣ 1974ರಲ್ಲಿ ನಿರ್ಮಾಣಗೊಂಡಿದ್ದು, 2024ರಲ್ಲಿ 50 ವರ್ಷ ಪೂರ್ಣಗೊಳಿಸಿತ್ತು.
ನವೀಕರಣದ ಮೊದಲ ಹೆಜ್ಜೆ ಎಂಬಂತೆ ಕೆಎಸ್‌ಸಿಎ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಈ ಯೋಜನೆಯು ಕ್ರೀಡಾಂಗಣದ ಮರುವಿನ್ಯಾಸ, ಪ್ರೇಕ್ಷಕರ ಸುಧಾರಿತ ಸೌಲಭ್ಯ, ಪಾರ್ಕಿಂಗ್, ಜನದಟ್ಟಣೆ ನಿರ್ವಹಣೆಯನ್ನೂ ಹೊಂದಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವೆಂಕಟೇಶ್ ಪ್ರಸಾದ್, ‘ನವೀಕರಣ ಕಾರ್ಯ ಪೂರ್ಣಗೊಳಿಸಲು ನಾವು ಯಾವುದೇ ಸಮಯ ನಿಗದಿಪಡಿಸಿಲ್ಲ. ಏಕೆಂದರೆ ಇದು ದೀರ್ಘ ಪ್ರಕ್ರಿಯೆ. ಅನುಮೋದನೆ ಪಡೆಯಲು ನಾವು ಬಿಡ್ ಆಹ್ವಾನಿಸಬೇಕು ಮತ್ತು ಹಲವು ಸುತ್ತಿನ ಸಭೆ ನಡೆಸಬೇಕಿದೆ. ಅದಕ್ಕೆ ತುಂಬಾ ಸಮಯ ಬೇಕು. ಆದರೆ ನನ್ನ ಅಧಿಕಾರಾವಧಿಯಲ್ಲೇ ಕ್ರೀಡಾಂಗಣ ನವೀಕರಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದಿದ್ದಾರೆ.
1. ಕ್ರೀಡಾಂಗಣಕ್ಕೆ ಹೊಸ ವಿನ್ಯಾಸ
2. ಆಸನ ಸಾಮರ್ಥ್ಯ ಹೆಚ್ಚಳ
3. ಪ್ರೇಕ್ಷಕರಿಗೆ ಸುಧಾರಿತ ಸೌಲಭ್ಯ
4. ಜನಸಂದಣಿ ನಿಯಂತ್ರಣ ವ್ಯವಸ್ಥೆ
5. ಉತ್ತಮ ಪಾರ್ಕಿಂಗ್ ಸೌಲಭ್ಯ
6. ಸಂಚಾರ ನಿರ್ವಹಣಾ ವ್ಯವಸ್ಥೆ
ಕ್ರೀಡಾಂಗಣ ನವೀಕರಣವು ತಕ್ಷಣದ ನಿರ್ಧಾರವಲ್ಲ. ಅಧಿಕಾರಕ್ಕೆ ಬಂದಿದ್ದೇವೆ ಎಂದು ಈ ನಿರ್ಧಾರ ಕೈಗೊಂಡಿಲ್ಲ. ಕಳೆದ 10 ವರ್ಷಗಳಿಂದ ನಾನು ಇದರ ಬಗ್ಗೆ ಯೋಚಿಸುತ್ತಿದ್ದೇನೆ. ನಾನು ಇಂಟರ್‌ನ್ಯಾಷನಲ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಮಾಡುತ್ತಿದ್ದಾಗಲೂ ಇದರ ಬಗ್ಗೆ ಯೋಚಿಸುತ್ತಿದ್ದೆ. ನಮ್ಮ ಅತಿದೊಡ್ಡ ಪಾಲುದಾರರಾದ ಪ್ರೇಕ್ಷಕರಿಗೆ ಕ್ರೀಡಾಂಗಣದಲ್ಲಿ ಅತ್ಯುತ್ತಮ ಅನುಭವ ಒದಗಿಸುವುದು ನಮ್ಮ ಕರ್ತವ್ಯ.
ವೆಂಕಟೇಶ್ ಪ್ರಸಾದ್, ಕೆಎಸ್‌ಸಿಎ ಅಧ್ಯಕ್ಷ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.