
ಧರ್ಮಶಾಲಾ(ಮಾ.09): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಎದುರು ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಇನಿಂಗ್ಸ್ ಹಾಗೂ 64 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 4-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಇಂಗ್ಲೆಂಡ್ ತಂಡಕ್ಕೆ, ಆ ಬಳಿಕ ಎದುರಾಗಿದ್ದು ಪದೇ ಪದೇ ಸೋಲಿನ ಶಾಕ್. ಇಂಗ್ಲೆಂಡ್‌ನ ಬಾಜ್‌ಬಾಲ್ ರಣತಂತ್ರ ಭಾರತದಲ್ಲಿ ನೆಲಕಚ್ಚಿದೆ. ಬೆನ್ ಸ್ಟೋಕ್ಸ್ ಪಡೆ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಸೋತಿದ್ದು ಮಾತ್ರವಲ್ಲದೇ ಸತತ 4 ಸೋಲುಗಳು, ಇಂಗ್ಲೆಂಡ್ ಗಾಯದ ಮೇಲೆ ಉಪ್ಪು ಸುರಿದಂತೆ ಆಗಿದೆ.
ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆದರೆ ಕುಲ್ದೀಪ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ಮಾರಕ ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 218 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ, ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಆಕರ್ಷಕ ಶತಕ ಹಾಗೂ ಜೈಸ್ವಾಲ್, ಪಡಿಕ್ಕಲ್ ಹಾಗೂ ಸರ್ಫರಾಜ್ ಖಾನ್ ಸಮಯೋಚಿತ ಅರ್ಧಶತಕಗಳ ನೆರವಿನಿಂದ 477 ರನ್ ಕಲೆಹಾಕಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಬರೋಬ್ಬರಿ 259 ರನ್‌ಗಳ ಬೃಹತ್ ಮುನ್ನಡೆ ಪಡೆಯಿತು. ಇನ್ನು ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಬೆನ್ ಸ್ಟೋಕ್ಸ್ ಪಡೆ, ರವಿಚಂದ್ರನ್ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್ ಮೊನಚಾದ ದಾಳಿಗೆ ತತ್ತರಿಸಿ ಕೇವಲ 195 ರನ್‌ಗಳಿಗೆ ಸರ್ವಪತನ ಕಂಡಿತು.
ಶುಭ್‌ಮನ್ ಗಿಲ್ ಅವರ ಐಶಾರಾಮಿ ಬಂಗಲೆ ಮೌಲ್ಯ ಕೋಟಿ-ಕೋಟಿ..! ಈ ಬಂಗಲೆಯೊಳಗೆ ಅಂತದ್ದೇನಿದೆ?
ಇನ್ನು ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, "ಈ ಸರಣಿಯಲ್ಲಿ ನಾವು ಅತ್ಯುತ್ತಮ ತಂಡದ ಎದುರು ಚೆನ್ನಾಗಿ ಆಡಲಿಲ್ಲ. ನಾವು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಿಕೆಟ್ ಆಡುವುದಿದೆ, ಆ ಬಗ್ಗೆ ಯೋಚಿಸುತ್ತೇವೆ. ಇಡೀ ಸರಣಿಯ ಬಗ್ಗೆ ಹೇಳುವುದಾದರೇ, ನಮ್ಮಲ್ಲಿ ಯಾರು ಏನೆಲ್ಲಾ ತಪ್ಪು ಮಾಡಿದ್ದಾರೆ ಎನ್ನುವುದರ ಅರಿವು ನಮಗಿದೆ" ಎಂದು ಹೇಳಿದ್ದಾರೆ.
ಧರ್ಮಶಾಲಾ ಟೆಸ್ಟ್‌ನಲ್ಲಿ ದಯನೀಯ ಸೋಲು ಕಂಡ ಇಂಗ್ಲೆಂಡ್..! ಟೀಂ ಇಂಡಿಯಾಗೆ ಭರ್ಜರಿ ಜಯ
ನಮ್ಮ ಎದುರು ಟೀಂ ಇಂಡಿಯಾ ಬೌಲರ್‌ಗಳು ತುಂಬಾ ಚೆನ್ನಾಗಿ ಆಡಿದರು. ಅದೇ ರೀತಿ ಅವರ ತಂಡದ ಬ್ಯಾಟರ್‌ಗಳು ನಮ್ಮೆದರು ಅತ್ಯುತ್ತಮ ಪ್ರದರ್ಶನ ತೋರಿದರು. ಕೆಲವೊಮ್ಮೆ ನಾವು ರಿಸ್ಕ್ ತೆಗೆದುಕೊಂಡರು ವೈಫಲ್ಯ ಅನುಭವಿಸಬೇಕಾಗುತ್ತದೆ. ಕ್ರಾಲಿ ಹಾಗೂ ಡಕೆಟ್ ಇಡೀ ಸರಣಿಯುದ್ದಕ್ಕೂ ಉತ್ತಮ ಆರಂಭ ಒದಗಿಸಿಕೊಟ್ಟರು. ಇನ್ನು ಶೋಯೆಬ್ ಬಷೀರ್ ಹಾಗೂ ಹಾರ್ಟ್ಲಿ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದರು. ರೂಟ್ ಫಾರ್ಮ್‌ಗೆ ಮರಳಿರುವುದು ಮುಂಬರುವ ಸರಣಿಗೂ ಮುನ್ನ ಒಳ್ಳೆಯ ಲಕ್ಷಣವಾಗಿದೆ. ಜೇಮ್ಸ್ ಆಂಡರ್‌ಸನ್ 700 ವಿಕೆಟ್ ಕಬಳಿಸಿದ್ದು ಒಂದು ಅದ್ಭುತ ಸಾಧನೆಯೇ ಸರಿ. ಅವರು ಈಗಲೂ ಫಿಟ್ ಆಗಿರುವ ಕ್ರಿಕೆಟಿಗ ಎಂದು ಸ್ಟೋಕ್ಸ್ ಜಿಮ್ಮಿಯನ್ನು ಗುಣಗಾನ ಮಾಡಿದ್ದಾರೆ.
ಇನ್ನು ಈ ಗೆಲುವಿನೊಂದಿಗೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭದ್ರವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.