BCCI On Virat Kohli : ಕೊಹ್ಲಿಯಂಥ ಪ್ಲೇಯರ್ ಗಳು ಯುಗಕ್ಕೊಬ್ಬರು ಸಿಗ್ತಾರೆ!

By Suvarna NewsFirst Published Jan 16, 2022, 4:04 PM IST
Highlights

ನಾಯಕನಾಗಿ ವಿರಾಟ್ ಕೊಹ್ಲಿ ಸಾಧನೆಗೆ ಬಿಸಿಸಿಐ ಶ್ಲಾಘನೆ
ಕೊಹ್ಲಿಯ ನಿರ್ಧಾರವನ್ನು ಗೌರವಿಸುತ್ತೇವೆ ಎಂದ ಕ್ರಿಕೆಟ್ ಮಂಡಳಿ
ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಶನಿವಾರ ರಾಜೀನಾಮೆ ಸಲ್ಲಿಸಿದ್ದ ವಿರಾಟ್ ಕೊಹ್ಲಿ
 

ನವದೆಹಲಿ (ಜ. 16): ಭಾರತ ಟೆಸ್ಟ್ ತಂಡದ (India Test Team)ನಾಯಕನಾಗಿ ವಿರಾಟ್ ಕೊಹ್ಲಿ(Virat Kohli) ರಾಜೀನಾಮೆ ನೀಡಿರುವ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಕೊಹ್ಲಿಯ ನಾಯಕತ್ವದ ಅವಧಿಯನ್ನು ಮುಕ್ತಕಂಠದಿಂದ ಶ್ಲಾಘನೆ ಮಾಡಿದೆ. ಭಾನುವಾರ ಅಧಿಕೃತವಾಗಿ ಪ್ರಕಟಣೆ ನೀಡಿದ ಬಿಸಿಸಿಐ (BCCI), "ವಿರಾಟ್ ಕೊಹ್ಲಿಯಂಥ ಆಟಗಾರರು ಯುಗಕ್ಕೆ ಒಬ್ಬರೇ ಸಿಗ್ತಾರೆ" ಎಂದು ಹೇಳಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ 1-2 ರಿಂದ ಸೋಲು ಕಂಡ ಬೆನ್ನಲ್ಲಿಯೇ 33 ವರ್ಷದ ವಿರಾಟ್ ಕೊಹ್ಲಿ, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದರು.

ಭಾರತೀಯ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ನೀಡಿದ ಅದ್ಭುತ ಕೊಡುಗೆಗಳಿಗಾಗಿ ಅವರನ್ನು ಶ್ಲಾಘನೆ ಮಾಡಿರುವ ಬಿಸಿಸಿಐ, ನಾಯಕ ಸ್ಥಾನದಿಂದ ಕೆಳಗಿಳಿಯುವ ಅವರ ನಿರ್ಧಾರವನ್ನು ಸ್ವಾಗತಸಿದೆ. "ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕನಾಗಿ ಅತ್ಯುತ್ತಮ ವೃತ್ತಿಜೀವನಕ್ಕಾಗಿ ವಿರಾಟ್ ಕೊಹ್ಲಿಯನ್ನು ಬಿಸಿಸಿಐ ಅಭಿನಂದಿಸುತ್ತದೆ. ನಾಯಕ ಸ್ಥಾನದಿಂದ ಕೆಳಗಿಳಿಯುವ ಅವರ ನಿರ್ಧಾರವನ್ನು ಬಿಸಿಸಿಐ ಮತ್ತು ಆಯ್ಕೆ ಸಮಿತಿಯು ಗೌರವಿಸುತ್ತದೆ. ಆಟಗಾರನಾಗಿ ಅವರು ತಂಡದೊಂದಿಗೆ ಮುಂದುವರಿಯುತ್ತಾರೆ ಹಾಗೂ ಭಾರತೀಯ ಕ್ರಿಕೆಟ್ ಇನ್ನೂ ದೊಡ್ಡ ಮಟ್ಟದ ಎತ್ತರವನ್ನು ತಲುಪಲು ಸಹಾಯ ಮಾಡುತ್ತಾರೆ ಎನ್ನುವ ಪೂರ್ಣ ವಿಶ್ವಾಸವನ್ನು ಬಿಸಿಸಿಐ ಹೊಂದಿದೆ' ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ. ಎಂಎಸ್ ಧೋನಿ (MS Dhoni) ಅವರಿಂದ ನಾಯತ್ವವನ್ನು ಪಡೆದುಕೊಂಡ ವಿರಾಟ್ ಕೊಹ್ಲಿ 68 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 40 ಗೆಲುವುಗಳನ್ನು ಕಂಡಿದ್ದಾರೆ. ಅವರ ಗೆಲುವಿನ ಸರಾಸರಿ 58.82 ಆಗಿದೆ. 2015ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಟೆಸ್ಟ್ ಸರಣಿ ಗೆಲುವನ್ನು ವಿರಾಟ್ ಕೊಹ್ಲಿ ದಾಖಲಿಸಿದ್ದರು. ಇದು ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಭಾರತ 22 ವರ್ಷಗಳ ಬಳಿಕ ಸಂಪಾದಿಸಿದ ಮೊದಲ ಸರಣಿ ಗೆಲುವು ಎನಿಸಿತ್ತು' ಎಂದು ಬಿಸಿಸಿಐ ಬರೆದಿದೆ.
 

As Virat Kohli steps down as Team India’s Test Captain, the Board of Control for Cricket in India congratulates him on an outstanding career as ’s Test Captain.

More Details 🔽

— BCCI (@BCCI)


ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ 2018ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಮೊಟ್ಟ ಮೊದಲ ಸರಣಿ ಗೆಲುವು ದಾಖಲಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿತ್ತು. ಅದಲ್ಲದೆ, ವೆಸ್ಟ್ ಇಂಡೀಸ್ ನೆಲದಲ್ಲೂ ಸರಣಿ ಗೆಲುವು ದಾಖಲಿಸಿತ್ತು. ಸತತ ಎರಡು ವರ್ಷಗಳ ಕಾಲ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತ 2021ರಲ್ಲಿ ಮೊಟ್ಟಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿತ್ತು. ತವರಿನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ 31 ಟೆಸ್ಟ್ ಪಂದ್ಯಗಳಲ್ಲಿ 24ರಲ್ಲಿ ಗೆಲುವು ಕಂಡಿರುವ ಅಮೋಘ ದಾಖಲೆ ಇವರದ್ದಾಗಿದ್ದು ಕೇವಲ 2 ಪಂದ್ಯಗಳಲ್ಲಿ ಮಾತ್ರವೇ ಸೋಲು ಕಂಡಿದ್ದಾರೆ' ಎಂದು ತಿಳಿಸಿದೆ.

ಕೊಹ್ಲಿ ಬಗ್ಗೆ ಬಿಸಿಸಿಐ ಅಧಿಕಾರಿಗಳು ಹೇಳಿದ್ದೇನು?
ಸೌರವ್ ಗಂಗೂಲಿ (Sourav Ganguly), ಬಿಸಿಸಿಐ ಅಧ್ಯಕ್ಷ (BCCI President):  ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಅಪಾರ ಕೊಡುಗೆ ನೀಡಿದ ವಿರಾಟ್ ಕೊಹ್ಲಿಗೆ ನಾನು ವೈಯಕಕ್ತಿಕವಾಗಿ ಮೊದಲಿಗೆ ಧನ್ಯವಾದ ಹೇಳುತ್ತೇನೆ. ಅವರ ನಾಯಕತ್ವದಲ್ಲಿ ಭಾರತ ತಂಡ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಹಲವಾರು ದಾಖಲೆಗಳನ್ನು ಮಾಡಿದೆ. ಅವರ ನಿರ್ಧಾರ ವೈಯಕ್ತಿಕ ಇದನ್ನು ಬಿಸಿಸಿಐ ಸ್ವಾಗತಿಸುತ್ತದೆ. ತಂಡದ ಪ್ರಮುಖ ಆಟಗಾರನಾಗಿ ಅವರು ಮುಂದುವರಿಯಲಿದ್ದು, ಹೊಸ ನಾಯಕನ ಅಡಿಯಲ್ಲಿ ಅವರು ಬ್ಯಾಟಿಂಗ್ ನಲ್ಲಿ ಅಗಾಧ ಸಾಧನೆಗಳನ್ನು ಮಾಡಲಿದ್ದಾರೆ. ಎಲ್ಲಾ ಒಳ್ಳೆಯ ವಿಚಾರಕ್ಕೆ ಒಂದು ಕೊನೆ ಇರುತ್ತದೆ. ಆದರೆ, ಇದು ಬಹಳ ಒಳ್ಳೆಯ ಸಂಗತಿಯಾಗಿತ್ತು.

ಜಯ್ ಷಾ (Jay Shah), ಬಿಸಿಸಿಐ ಕಾರ್ಯದರ್ಶಿ (BCCI secretary): ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಅತ್ಯುತ್ತಮ ಆಟಗಾರರ ಪೈಕಿ ವಿರಾಟ ಕೊಹ್ಲಿ ಒಬ್ಬರು. ಅವರು ಮಾಡಿರುವ ದಾಖಲೆಗಳೇ ಎಲ್ಲವನ್ನು ಹೇಳುತ್ತದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಸ್ಮರಣೀಯ ಗೆಲುವುಗಳಿಗೆ ಅವರು ಕಾರಣರಾಗಿದ್ದಾರೆ.  ಅವರ ನಿರ್ವಹಣೆಯೇ ಮುಂದಿನ ದಿನಗಳಲ್ಲಿ ಯುವ ಆಟಗಾರರಿಗೆ ಸ್ಫೂರ್ತಿ.

ರಾಜೀವ್ ಶುಕ್ಲಾ (Rajeev Shukla), ಬಿಸಿಸಿಐ ಉಪಾಧ್ಯಕ್ಷ (BCCI vice-president) : ವಿರಾಟ್ ಕೊಹ್ಲಿಯಂಥ ಪ್ಲೇಯರ್ ಗಳು ಯುಗಕ್ಕೊಬ್ಬರು ಬರುತ್ತಾರೆ. ಅವರು ನಾಯಕನಾಗಿ ತಂಡಕ್ಕೆ ಸೇವೆ ಸಲ್ಲಿಸಿರುವುದು ಟೀಂ ಇಂಡಿಯಾದ ಅದೃಷ್ಟವಾಗಿತ್ತು. ಅಪಾರ ಉತ್ಸಾಹ ಹಾಗೂ ಆಕ್ರಮಣಕಾರಿಯಾಗಿ ತಂಡವನ್ನು ಮುನ್ನಡೆಸಿದರು. ದೇಶ, ವಿದೇಶಗಳಲ್ಲಿ ಸ್ಮರಣೀಯ ಗೆಲುವುಗಳಿಗೆ ಅವರು ಕಾರಣರಾಗಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ.

Virat Kohli Steps Down as Captain : ಟೆಸ್ಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ವಿರಾಟ್ ಕೊಹ್ಲಿ!
ಅರುಣ್ ಸಿಂಗ್ ಧುಮುಲ್ (Arun Singh Dhumal), ಬಿಸಿಸಿಐ ಖಜಾಂಚಿ (BCCI Treasurer ): ಸೋಲನ್ನು ಒಪ್ಪಿಕೊಳ್ಳದಿರುವ ಅವರ ಮನೋಭಾವ ತಂಡಕ್ಕಾಗಿ ಎಲ್ಲವನ್ನೂ ನೀಡುವ ಅವರ ಗುಣದಿಂದಾಗಿಯೇ ಈ ಅಸಾಧಾರಣ ದಾಖಲೆ ನಿರ್ಮಾಣವಾಗಿದೆ. ತಂಡದ ನಾಯಕರಾದ ದಿನದಿಂದಲೂ ವಿಶ್ವ ಕ್ರಿಕೆಟ್ ನಲ್ಲಿ ಟೀಂ ಪವರ್ ಹೌಸ್ ಆಗಿ ಉಳಿಯಬೇಕು ಎಂದು ಶ್ರಮಿಸಿದ್ದರು. ಜಗತ್ತಿನ ಎಲ್ಲೆಡೆ ತಂಡದ ಅದ್ಭುತ ಪ್ರದರ್ಶನಗಳಿಗೆ ಜೀವ ತುಂಬಿದವರು.

ಜಯೇಶ್ ಜಾರ್ಜ್ (Jayesh George), ಬಿಸಿಸಿಐ ಜಂಟಿ ಕಾರ್ಯದರ್ಶಿ (BCCI joint secretary): ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಆಟಗಾರ ಹಾಗೂ ನಾಯಕರಾಗಿ ಅವರು ದಾಖಲೆಯ ಪುಟದಲ್ಲಿ ಉಳಿದುಕೊಳ್ಳುತ್ತಾರೆ. ಭಾರತೀಯ ಕ್ರಿಕೆಟ್ ತಂಡದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ತಂಡದ ಅನುಭವೀ ಆಟಗಾರನಾಗಿ ತಮ್ಮ ದೊಡ್ಡ ಪಾತ್ರವನ್ನು ಅವರು ತಂಡದೊಂದಿಗೆ ಮುಂದುವರಿಸಲಿದ್ದಾರೆ.

click me!