ಸದ್ಯ ಅ.20ರ ಪಾಕಿಸ್ತಾನ-ಆಸ್ಟ್ರೇಲಿಯಾ, ಅ.26ರ ಇಂಗ್ಲೆಂಡ್-ಶ್ರೀಲಂಕಾ, ನ.4ರ ನ್ಯೂಜಿಲೆಂಡ್-ಪಾಕಿಸ್ತಾನ, ನ.9ರ ನ್ಯೂಜಿಲೆಂಡ್-ಶ್ರೀಲಂಕಾ ಪಂದ್ಯಗಳ ಟಿಕೆಟ್ ಖರೀದಿಗೆ ಲಭ್ಯವಿದೆ. ನ.12ರ ಭಾರತ-ನೆದರ್‌ಲೆಂಡ್ಸ್ ಪಂದ್ಯದ ಟಿಕೆಟ್ ಮಾರಾಟ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.
ಬೆಂಗಳೂರು(ಅ.18): ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ 5 ಪಂದ್ಯಗಳ ಪೈಕಿ 4 ಪಂದ್ಯಗಳಿಗೆ ಮಂಗಳವಾರ ಟಿಕೆಟ್ ಮಾರಾಟ ಆರಂಭಗೊಂಡಿದೆ. ಕ್ರೀಡಾಂಗಣದ ಬಳಿ ಕೌಂಟರ್‌ಗಳಲ್ಲಿ ಟಿಕೆಟ್ ಮಾರಾಟಕ್ಕಿಟ್ಟಿದ್ದು, ಅ.19ರ ವರೆಗೆ ಮುಂದುವರಿಯಲಿದೆ. ಆದರೆ ಮೊದಲ ದಿನ ಅಭಿಮಾನಿಗಳಿಂದ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಯಿತು. ಸದ್ಯ ಅ.20ರ ಪಾಕಿಸ್ತಾನ-ಆಸ್ಟ್ರೇಲಿಯಾ, ಅ.26ರ ಇಂಗ್ಲೆಂಡ್-ಶ್ರೀಲಂಕಾ, ನ.4ರ ನ್ಯೂಜಿಲೆಂಡ್-ಪಾಕಿಸ್ತಾನ, ನ.9ರ ನ್ಯೂಜಿಲೆಂಡ್-ಶ್ರೀಲಂಕಾ ಪಂದ್ಯಗಳ ಟಿಕೆಟ್ ಖರೀದಿಗೆ ಲಭ್ಯವಿದೆ. ನ.12ರ ಭಾರತ-ನೆದರ್‌ಲೆಂಡ್ಸ್ ಪಂದ್ಯದ ಟಿಕೆಟ್ ಮಾರಾಟ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.
ಬಾಂಗ್ಲಾ ಕದನಕ್ಕೆ ಭಾರತ ಆಟಗಾರರ ಕಠಿಣ ಅಭ್ಯಾಸ
ಪುಣೆ: ಐಸಿಸಿ ಏಕದಿನ ವಿಶ್ವಕಪ್‌ನ ಅ.19ರಂದು ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಸೋಮವಾರ ಅಹಮದಾಬಾದ್‌ನಿಂದ ಪುಣೆಗೆ ಆಗಮಿಸಿದ್ದ ಆಟಗಾರರು ಮಂಗಳವಾರ ನೆಟ್ಸ್‌ನಲ್ಲಿ ಕೆಲ ಕಾಲ ಅಭ್ಯಾಸ ನಡೆಸಿದರು. ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಜಡೇಜಾ ಸೇರಿದಂತೆ ಪ್ರಮುಖರು ಗಂಟೆಗಳ ಕಾಲ ನೆಟ್ಸ್‌ನಲ್ಲಿ ಬೆವರಿಳಿಸಿದರು. ನಾಯಕ ರೋಹಿತ್ ಶರ್ಮಾ ಸ್ಪಿನ್ ಬೌಲಿಂಗ್ ಮೂಲಕ ಗಮನ ಸೆಳೆದರು. ಭಾರತ ಟೂರ್ನಿಯಲ್ಲಿ ಆಡಿರುವ ಮೂರೂ ಪಂದ್ಯ ಗೆದ್ದಿದ್ದು, ಬಾಂಗ್ಲಾ ಮೂರರಲ್ಲಿ 2 ಪಂದ್ಯಗಳಲ್ಲಿ ಪರಾಭವಗೊಂಡಿದೆ.
ICC World Cup 2023: ಕಿವೀಸ್‌ಗೂ ಶಾಕ್ ನೀಡುತ್ತಾ ಆಫ್ಘನ್?
ಪಾಕ್ ಆಟಗಾರರಿಗೆ ಫಿಟ್ನೆಸ್ ಟೆಸ್ಟ್ ಎಂಬುದೇ ಇಲ್ಲ: ಅಕ್ರಂ
ಲಾಹೋರ್: ಭಾರತ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಹೀನಾಯ ಸೋಲಿನ ಬಗ್ಗೆ ಪಾಕ್ ಮಾಜಿ ವೇಗಿ ವಸೀಂ ಅಕ್ರಂ ಮತ್ತೆ ಕಿಡಿಕಾರಿದ್ದು, ಪಾಕಿಸ್ತಾನದ ಕ್ರಿಕೆಟಿಗರಿಗೆ ಫಿಟ್ನೆಸ್ ಟೆಸ್ಟ್ ಎಂಬುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಆಟಗಾರರ ಫಿಟ್ನೆಸ್ ಬಗ್ಗೆ ನನಗೆ ಕಾಳಜಿಯಿದೆ. ಮಿಸ್ಬಾಹ್ ಕೋಚ್, ಆಯ್ಕೆಗಾರ ಆಗಿದ್ದಾಗ ಪಾಕ್ ಆಟಗಾರರಿಗೆ ಯೋ-ಯೋ ಟೆಸ್ಟ್ ನಡೆಸಲಾಗುತ್ತಿತ್ತು. ಆದರೆ ಈಗ ಅದು ಇಲ್ಲ. ವೃತ್ತಿಪರ ಕ್ರಿಕೆಟಿಗರಿಗೆ ತಿಂಗಳಿಗೊಮ್ಮೆಯಾದರೂ ಫಿಟ್ನೆಸ್ ಪರೀಕ್ಷೆ ನಡೆಸಬೇಕು. ಅಲ್ಲದಿದ್ದರೆ ಹೀಗೆ ಹೀನಾಯವಾಗಿ ಸೋಲಬೇಕಾಗುತ್ತದೆ’ ಎಂದು ಟೀಕಿಸಿದ್ದಾರೆ. ಕಳೆದ 3 ವರ್ಷದಲ್ಲಿ ಪಾಕ್ ಕ್ರಿಕೆಟ್ ಮಂಡಳಿಯಲ್ಲಿ ಮೂವರು ಮುಖ್ಯಸ್ಥರು ಕಾರ್ಯನಿರ್ವಹಿಸಿದ್ದಾರೆ. ಇದು ತಂಡದ ಸದಸ್ಯರು, ಆಡಳಿತ ಸಮಿತಿಯಲ್ಲೂ ಗೊಂದಲ ಸೃಷ್ಟಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ-ತಮಿಳುನಾಡು ಟಿ20 ಪಂದ್ಯ ಮಳೆಗೆ ಆಹುತಿ
ಡೆಹ್ರಾಡೂನ್: ಸೋಮವಾರ ಆರಂಭಗೊಂಡ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ 2 ಬಾರಿ ಚಾಂಪಿಯನ್ ಕರ್ನಾಟಕ ಹಾಗೂ ದಾಖಲೆಯ 3 ಬಾರಿ ಚಾಂಪಿಯನ್ ತಮಿಳುನಾಡು ನಡುವಿನ ಪಂದ್ಯ ಮಳೆಗೆ ಆಹುತಿಯಾಗಿದೆ. ಇಲ್ಲಿನ ಕಾಸಿಗಾ ಕಾಲೇಜು ಕ್ರೀಡಾಂಗಣದಲ್ಲಿ ಬೆಳಗ್ಗೆ 11ಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ. ಬೆಳಗ್ಗಿನಿಂದಲೂ ಧಾರಾಕಾರ ಮಳೆಯಾಗುತ್ತಿದ್ದ ಕಾರಣ ಟಾಸ್ ಕೂಡಾ ಎಸೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಮಧ್ಯಾಹ್ನ 1 ಗಂಟೆ ವೇಳೆಗೆ ಅಂಪೈರ್‌ಗಳು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು. ಹೀಗಾಗಿ ಎರಡೂ ತಂಡಗಳು ತಲಾ 2 ಅಂಕಗಳನ್ನು ಪಡೆದವು. ‘ಇ’ ಗುಂಪಿನಲ್ಲಿರುವ ಕರ್ನಾಟಕ ತಂಡ 2ನೇ ಪಂದ್ಯದಲ್ಲಿ ಅ.19ಕ್ಕೆ ಮಧ್ಯಪ್ರದೇಶ ವಿರುದ್ಧ ಸೆಣಸಾಡಲಿದೆ.
ಭಾರತ ವಿರುದ್ಧ ಸೋಲು ಕಂಡ ಬೆನ್ನಲ್ಲಿಯೇ ಪಾಕಿಸ್ತಾನದ ಆಟಗಾರರಿಗೆ ಶುರು ಚಳಿಜ್ವರ
ಸರ್ವಿಸಸ್, ಬಂಗಾಳ, ಮುಂಬೈ ಶುಭಾರಂಭ
ಟೂರ್ನಿಯಲ್ಲಿ ಸರ್ವಿಸಸ್, ಬಂಗಾಳ, ಮುಂಬೈ, ಮಹಾರಾಷ್ಟ್ರ, ಗೋವಾ, ರೈಲ್ವೇಸ್ ತಂಡಗಳು ಶುಭಾರಂಭ ಮಾಡಿದವು. ಕೇರಳ, ಸೌರಾಷ್ಟ್ರ, ವಿದರ್ಭ, ಹೈದರಾಬಾದ್, ಬರೋಡಾ ತಂಡಗಳು ಕೂಡಾ ಗೆಲುವಿನ ಆರಂಭ ಪಡೆದರು. ಆದರೆ ಪುದುಚೇರಿ-ರಾಜಸ್ಥಾನ, ಮಧ್ಯಪ್ರದೇಶ-ನಾಗಲ್ಯಾಂಡ್, ಡೆಲ್ಲಿ-ಉತ್ತರ ಪ್ರದೇಶ ನಡುವಿನ ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡವು.