ಮುಷ್ತಾಕ್‌ ಅಲಿ ಟಿ20ಯಲ್ಲಿ ಪಂಜಾಬ್‌ ಹೊಸ ದಾಖಲೆ! ಯುವರಾಜ್ ಸಿಂಗ್ ಅಪರೂಪದ ದಾಖಲೆ ನುಚ್ಚುನೂರು

By Kannadaprabha News  |  First Published Oct 18, 2023, 10:43 AM IST

ಇದಕ್ಕೂ ಮುನ್ನ 2019ರಲ್ಲಿ ಸಿಕ್ಕಿಂ ವಿರುದ್ಧ ಮುಂಬೈ ತಂಡ 4 ವಿಕೆಟ್‌ಗೆ 258 ರನ್‌ ಗಳಿಸಿ ದಾಖಲೆ ಬರೆದಿತ್ತು. ಆ ದಾಖಲೆಯನ್ನು ಪಂಜಾಬ್‌ ಮುರಿದಿದೆ.


ರಾಂಚಿ(ಅ.18): ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಪಂಜಾಬ್‌ ಹೊಸ ದಾಖಲೆ ಬರೆದಿದೆ. ಮಂಗಳವಾರ ‘ಸಿ’ ಗುಂಪಿನ ಪಂದ್ಯದಲ್ಲಿ ಆಂಧ್ರ ಪ್ರದೇಶ ವಿರುದ್ಧ ಪಂಜಾಬ್‌ 6 ವಿಕೆಟ್‌ಗೆ ಬರೋಬ್ಬರಿ 275 ರನ್‌ ಕಲೆಹಾಕಿತು. ಇದರೊಂದಿಗೆ ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ ರನ್‌ ಗಳಿಸಿದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು.

ಇದಕ್ಕೂ ಮುನ್ನ 2019ರಲ್ಲಿ ಸಿಕ್ಕಿಂ ವಿರುದ್ಧ ಮುಂಬೈ ತಂಡ 4 ವಿಕೆಟ್‌ಗೆ 258 ರನ್‌ ಗಳಿಸಿ ದಾಖಲೆ ಬರೆದಿತ್ತು. ಆ ದಾಖಲೆಯನ್ನು ಪಂಜಾಬ್‌ ಮುರಿದಿದೆ. ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ 51 ಎಸೆತಗಳಲ್ಲಿ 9 ಸಿಕ್ಸರ್‌, 9 ಬೌಂಡರಿಯೊಂದಿಗೆ 112 ರನ್‌ ಸಿಡಿಸಿದರೆ, ಅನ್ಮೋಲ್‌ಪ್ರೀತ್‌ ಸಿಂಗ್‌ 26 ಎಸೆತಗಳಲ್ಲಿ 6 ಸಿಕ್ಸರ್‌, 9 ಬೌಂಡರಿಯೊಂದಿಗೆ 87 ರನ್‌ ಚಚ್ಚಿದರು. ದೊಡ್ಡ ಗುರಿ ಬೆನ್ನತ್ತಿದ ಆಂಧ್ರ 7 ವಿಕೆಟ್‌ಗೆ 170 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

Latest Videos

undefined

11 ಎಸೆತದಲ್ಲಿ ಫಿಫ್ಟಿ: ಯುವಿ ದಾಖಲೆ ಮುರಿದ ಆಶುತೋಷ್‌

ರಾಂಚಿ: ರೈಲ್ವೇಸ್‌ನ ಮಧ್ಯಮ ಕ್ರಮಾಂಕದ ಬ್ಯಾಟರ್‌ ಅಶುತೋಷ್‌ ಶರ್ಮಾ, 11 ಎಸೆತದಲ್ಲಿ ಅರ್ಧಶತಕ ಸಿಡಿಸಿ, ಯುವರಾಜ್‌ ಸಿಂಗ್‌ರ ದಾಖಲೆ ಮುರಿದಿದ್ದಾರೆ. ಬುಧವಾರ ಅರುಣಾಚಲ ಪ್ರದೇಶ ವಿರುದ್ಧದ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಪಂದ್ಯದಲ್ಲಿ ಅಶುತೋಷ್‌ 1 ಬೌಂಡರಿ, 8 ಸಿಕ್ಸರ್‌ನೊಂದಿಗೆ 12 ಎಸೆತದಲ್ಲಿ 53 ರನ್‌ ಚಚ್ಚಿದರು. ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ ಬಾರಿಸಿದ ಭಾರತೀಯ ಆಟಗಾರ ಎನ್ನುವ ದಾಖಲೆ ಯುವರಾಜ್‌ರ ಹೆಸರಲ್ಲಿತ್ತು. 2007ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್‌ 12 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದರು. ಇತ್ತೀಚೆಗೆ ಏಷ್ಯನ್‌ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳದ ದೀಪೇಂದ್ರ ಸಿಂಗ್‌ 9 ಎಸೆತದಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು.

World Cup 2023: ಧರ್ಮಶಾಲಾದಲ್ಲಿ ಡಚ್ಚರ ಡಿಚ್ಚಿ, ದಕ್ಷಿಣ ಆಫ್ರಿಕಾ ಅಪ್ಪಚ್ಚಿ!

2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಈಗ ಅಧಿಕೃತ!

ಮುಂಬೈ: ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ) ಕೊನೆಗೂ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದೆ. 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸ್ಪರ್ಧೆಯನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ ಎಂದು ಐಒಸಿ ಘೋಷಿಸಿದೆ.

ಮುಂಬೈನಲ್ಲಿ ನಡೆಯುತ್ತಿರುವ ಐಒಸಿ 141ನೇ ಅಧಿವೇಶನದಲ್ಲಿ ಕ್ರಿಕೆಟ್ ಸೇರಿದಂತೆ 5 ಕ್ರೀಡೆಗಳನ್ನು 2028ರ ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ ಗೆಲುವು ಲಭಿಸಿತು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಪ್ಪಿಗೆ ಲಭಿಸಿದ ಬಳಿಕ ಪ್ರಸ್ತಾವನೆಯನ್ನು ಅಧಿವೇಶದನದಲ್ಲಿ ಮತಕ್ಕೆ ಹಾಕಲಾಯಿತು. 99 ಐಒಸಿ ಸದಸ್ಯರ ಪೈಕಿ 97 ಸದಸ್ಯರು ಪ್ರಸ್ತಾವನೆ ಪರ ಮತ ಹಾಕಿದರು.

ಬಳಿಕ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದ ಐಒಸಿ ಅಧ್ಯಕ್ಷ ಥಾಮಸ್‌ ಬಾಚ್‌, ಕ್ರಿಕೆಟ್‌, ಬೇಸ್‌ಬಾಲ್‌-ಸಾಫ್ಟ್‌ಬಾಲ್‌, ಫ್ಲಾಗ್‌ ಫುಟ್ಬಾಲ್‌, ಲ್ಯಾಕ್ರೋಸ್‌(ಸಿಕ್ಸಸ್‌) ಹಾಗೂ ಸ್ಕ್ವ್ಯಾಶ್‌ ಕ್ರೀಡೆಗಳು 2028ರ ಒಲಿಂಪಿಕ್ಸ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ ಎಂದು ತಿಳಿಸಿದರು.

ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ನಾಯಕ ಈಗ ಪತ್ನಿ ಜೊತೆ ರಿಲ್ಯಾಕ್ಸ್!

ಟಿ20 ಮಾದರಿ: ಒಲಿಂಪಿಕ್ಸ್‌ನಲ್ಲಿ ಟಿ20 ಮಾದರಿಯಲ್ಲಿ ಕ್ರಿಕೆಟ್‌ ಆಡಿದಲು ಐಒಸಿ ನಿರ್ಧರಿಸಿದೆ. ಪುರುಷ, ಮಹಿಳಾ ವಿಭಾಗದಲ್ಲಿ ತಲಾ 6 ತಂಡಗಳ ಸ್ಪರ್ಧೆ ನಡೆಸಲು ಐಒಸಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಆದರೆ ತಂಡಗಳ ಸಂಖ್ಯೆ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರ ಹೊರಬೀಳಬೇಕಿದೆ.

ಒಲಿಂಪಿಕ್ಸಲ್ಲಿ ಕ್ರಿಕೆಟ್‌ ಇದು ಮೊದಲೇನಲ್ಲ

ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ ಇದು ಮೊದಲೇನಲ್ಲ. ಈ ಮೊದಲು 1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಕ್ರಿಕೆಟ್‌ ಆಡಿಸಲಾಗಿತ್ತು. ಆದರೆ ಕೇವಲ 2 ತಂಡಗಳು ಮಾತ್ರ ಪಾಲ್ಗೊಂಡಿದ್ದವು. ಫ್ರಾನ್ಸ್‌ ವಿರುದ್ಧ ಗೆದ್ದು ಇಂಗ್ಲೆಂಡ್‌ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಆ ಬಳಿಕ ಯಾವುದೇ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲೂ ಕ್ರಿಕೆಟ್‌ ಇರಲಿಲ್ಲ. 128 ವರ್ಷಗಳ ಬಳಿಕ ಮತ್ತೆ ಜಾಗತಿಕ ಮಟ್ಟದ ಅತಿ ದೊಡ್ಡ ಕ್ರೀಡಾಕೂಟಕ್ಕೆ ಕ್ರಿಕೆಟ್‌ ಸೇರ್ಪಡೆಗೊಂಡಿದೆ.
 

click me!