ಬಿಸಿಸಿಐ ಅಧ್ಯಕ್ಷರಾದ ಒಂದೇ ವಾರಕ್ಕೆ ಸೌರವ್ ಗಂಗೂಲಿ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಬೆಂಗಳೂರಿಗೆ ಆಗಮಿಸಿದ ಗಂಗೂಲಿ, NCA ಮುಖ್ಯಸ್ಥ ರಾಹುಲ್ ದ್ರಾವಿಡ್ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಗಂಗೂಲಿ ಹಾಗೂ ದ್ರಾವಿಡ್ ನಡೆಸಿದ ಮಾತುಕತೆ ವಿವರ ಇಲ್ಲಿದೆ.
ಬೆಂಗಳೂರು(ಅ.31): ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಭಾರತೀಯ ಕ್ರಿಕೆಟ್‌ನ ಅವಿಭಾಜ್ಯ ಅಂಗ. ರಾಷ್ಟ್ರೀಯ ತಂಡಗಳ ಅಭ್ಯಾಸ ಶಿಬಿರ ನಡೆಸುವ, ಆಟಗಾರರಿಗೆ ಪುನಶ್ಚೇತನ ಶಿಬಿರಗಳನ್ನು ಆಯೋಜಿಸುವ ಕೇಂದ್ರ, ಫಿಟ್ನೆಸ್ ಪರೀಕ್ಷೆಗಳನ್ನು ನಡೆಸುವ ಸ್ಥಳ ಎಲ್ಲವೂ ಆಗಿದೆ. ಆದರೆ ಎನ್‌ಸಿಎಯನ್ನು ಇಷ್ಟಕ್ಕೆ ಮಾತ್ರ ಸೀಮಿತಗೊಳ್ಳುವುದು ಬಿಸಿಸಿಐನ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್‌ಗೆ ಇಷ್ಟವಿಲ್ಲ. ಎನ್‌ಸಿಎ ಅಭಿವೃದ್ಧಿಗೊಳಿಸಲು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಿಬ್ಬರು ಪಣತೊಟ್ಟಿದ್ದು, ಬುಧವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ಎನ್‌ಸಿಎ ಕಚೇರಿಗೆ ಗಂಗೂಲಿ ಭೇಟಿ ನೀಡಿದ್ದರು. ಅವರೊಂದಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಹ ಆಗಮಿಸಿದ್ದರು. ದ್ರಾವಿಡ್ ಹಾಗೂ ಎನ್‌ಸಿಎ ತಂಡದೊಂದಿಗೆ ಮೂರುವರೆ ಗಂಟೆಗೂ ಹೆಚ್ಚು ಕಾಲ ಗಂಗೂಲಿ ಚರ್ಚೆ ನಡೆಸಿದರು. ಎನ್‌ಸಿಎ ಮಾರ್ಗಸೂಚಿ, ಹೊಸ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಪ್ರಥಮ ದರ್ಜೆ ಕ್ರಿಕೆಟಿಗರಿಗೆ ಕಾಂಟ್ರಾಕ್ಟ್ ಸಿಸ್ಟಮ್; ಗಂಗೂಲಿ ದಿಟ್ಟ ನಿರ್ಧಾರ!
undefined
ಬುಧವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ ಗಂಗೂಲಿ, ನೇರವಾಗಿ ಎನ್‌ಸಿಎ ಕಚೇರಿಗೆ ತೆರಳಿದರು. ಸುದೀರ್ಘ ಚರ್ಚೆ ಬಳಿಕ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನದ ಸಮೀಪದಲ್ಲಿ ಎನ್‌ಸಿಎಯನ್ನು ಹೊಸದಾಗಿ ಸ್ಥಾಪಿಸಲು ಬಿಸಿಸಿಐ ಭೂಮಿ ಖರೀದಿಸಿರುವ ಸ್ಥಳಕ್ಕೆ ಗಂಗೂಲಿ ಭೇಟಿ ನೀಡಿದರು. ಬಿಸಿಸಿಐ ಒಟ್ಟು 40 ಎಕರೆ ಜಾಗ ಹೊಂದಿದ್ದು, ಅತ್ಯಾಧುನಿಕ ಶೈಲಿಯಲ್ಲಿ ಎನ್‌ಸಿಎ ನಿರ್ಮಿಸಲು ಬಿಸಿಸಿಐ ಯೋಜನೆ ರೂಪಿಸಿದೆ.
ಇದನ್ನೂ ಓದಿ: ದಾದಾ ಪ್ರಸ್ತಾವನೆಗೆ ಬಾಂಗ್ಲಾ ಸಮ್ಮತಿ; ಭಾರತದಲ್ಲಿ ಮೊಟ್ಟ ಮೊದಲ ಡೇ & ನೈಟ್ ಟೆಸ್ಟ್!
ಸಭೆ ಉದ್ದೇಶವೇನು?:
ಕ್ರಿಕೆಟಿಗರಲ್ಲಿ ಎನ್‌ಸಿಎ ಬಗ್ಗೆ ಇರುವ ಅಭಿಪ್ರಾಯಗಳು ಇತ್ತೀಚೆಗೆ ಬದಲಾಗಿವೆ. ಇಲ್ಲಿನ ವೈದ್ಯಕೀಯ ತಂಡ, ಆಟಗಾರರ ಗಾಯದ ಪ್ರಮಾಣ, ಚಿಕಿತ್ಸೆ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದವು. ವೃದ್ಧಿಮಾನ್ ಸಾಹ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಫಿಟ್ನೆಸ್ ವಿಚಾರದಲ್ಲಿ ಎನ್‌ಸಿಎ ಎಡವಟ್ಟು ಮಾಡಿತ್ತು. ಎನ್‌ಸಿಎ ಧೋರಣೆಯಿಂದಾಗೇ ಪೃಥ್ವಿ ಶಾ ಡೋಪಿಂಗ್ ಪ್ರಕರಣ ತಡವಾಗಿ ಬೆಳಕಿಗೆ ಬಂತು ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಆಟಗಾರರು ಗಾಯಗೊಂಡ ವೇಳೆ ಪುನಶ್ಚೇತನ ಶಿಬಿರಕ್ಕಾಗಿ ಎನ್‌ಸಿಎಗೆ ಆಗಮಿಸಲು ಹಿಂಜರಿಯುತ್ತಿದ್ದಾರೆಂಬ ವರದಿಗಳು ಸಹ ಹೊರಬಿದ್ದಿದ್ದವು. ಈ ನಿಟ್ಟಿನಲ್ಲಿ ಎನ್‌ಸಿಎಗೆ ಮರುಜೀವ ನೀಡಲು ಗಂಗೂಲಿ, ದ್ರಾವಿಡ್ ಸಭೆ ಸೇರಿದ್ದರು.
ಕಳೆದ ವಾರವಷ್ಟೇ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಸಹ ಎನ್‌ಸಿಎ ಪುನಶ್ಚೇತನಗೊಳಿಸುವ ಬಗ್ಗೆ ಮಾತನಾಡಿದ್ದರು. ‘ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿರುವ ಗಂಗೂಲಿಯಲ್ಲಿ ನಾನು ಒಂದೇ ಒಂದು ಮನವಿ ಮಾಡುತ್ತೇನೆ. ಎನ್‌ಸಿಎ ಯುವ ಕ್ರಿಕೆಟಿಗರಿಗೆ ಶಾಲೆಯಂತಾಗಬೇಕು, ಹೊಸ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪೋಷಿಸುವ ಕೇಂದ್ರವಾಗಬೇಕು, ಭಾರತ ತಂಡ ದಶಕಗಳ ಕಾಲ ವಿಶ್ವ ಕ್ರಿಕೆಟನ್ನು ಆಳಬೇಕು ಎಂದರೆ ದೇಸಿ ಕ್ರಿಕೆಟ್ ಬಲಿಷ್ಠವಾಗಿರಬೇಕು. ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದ ದ.ಆಫ್ರಿಕಾ ತಂಡ ಹೀನಾಯವಾಗಿ ಸೋಲು ಕಾಣಲು, ಅಲ್ಲಿನ ದೇಸಿ ಕ್ರಿಕೆಟ್ ವ್ಯವಸ್ಥೆ ಬಲಿಷ್ಠವಾಗಿದಿರುವುದೇ ಕಾರಣ’ ಎಂದಿದ್ದರು.