* ಫೆಬ್ರವರಿ ತಿಂಗಳ ಮಧ್ಯಭಾಗದಲ್ಲಿ ರಣಜಿ ಟ್ರೋಫಿ ಟೂರ್ನಿ ಆರಂಭಕ್ಕೆ ಬಿಸಿಸಿಐ ಚಿಂತನೆ
* ಕೋವಿಡ್ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ದತೆ
* ಸದ್ಯದಲ್ಲೇ ಸ್ಪಷ್ಟ ಮಾಹಿತಿ ಕೊಡ್ತೀವಿ ಎಂದ ದಾದಾ
ನವದೆಹಲಿ(ಜ.29): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), ಮುಂಬರುವ ಫೆಬ್ರವರಿ 13ರಿಂದ ರಣಜಿ ಟ್ರೋಫಿ (Ranji Trophy) ಕ್ರಿಕೆಟ್ ಟೂರ್ನಿಯನ್ನು ಆರಂಭಿಸಲು ಯೋಜನೆ ರೂಪಿಸುತ್ತಿದೆ. ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಯಾವುದೇ ಬದಲಾವಣೆಗಳನ್ನು ತರದಿರಲು ಬಿಸಿಸಿಐ(BCCI) ನಿರ್ಧರಿಸಿದೆ. ಹೀಗಾಗಿ ಆರು ತಂಡಗಳನ್ನೊಳಗೊಂಡ 5 ಎಲೈಟ್ ಗುಂಪುಗಳು ಹಾಗೂ 8 ತಂಡಗಳನ್ನೊಳಗೊಂಡ ಪ್ಲೇಟ್ ಗುಂಪಿನ ಮಾದರಿಯಲ್ಲಿಯೇ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯು ಜರುಗಲಿದೆ.
ನಾವು ಫೆಬ್ರವರಿ ಮಧ್ಯಭಾಗದಲ್ಲಿ ಅಂದರೆ ಫೆಬ್ರವರಿ 13ರ ವೇಳೆಗೆ ರಣಜಿ ಟ್ರೋಫಿ ಟೂರ್ನಿಯನ್ನು ಆರಂಭಿಸಬೇಕೆಂದುಕೊಂಡಿದ್ದೇವೆ. ಈ ಕ್ಷಣದವರೆಗೂ ಈಗಿರುವ ಮಾದರಿಯಲ್ಲಿಯೇ ರಣಜಿ ಟ್ರೋಫಿ ಟೂರ್ನಿಯನ್ನು ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. 5 ಎಲೈಟ್ ಗುಂಪುಗಳು ಸೇರಿದಂತೆ ಒಟ್ಟು 6 ಗುಂಪುಗಳಿರಲಿದ್ದು, ಒಂದು ತಿಂಗಳ ಅವಧಿಯೊಳಗಾಗಿ ಮೊದಲ ಹಂತದ ಲೀಗ್ ಪಂದ್ಯಗಳು ಮುಗಿಸಬಹುದು. ಐಪಿಎಲ್ ಆರಂಭಕ್ಕೂ ಮೊದಲು ಮೊದಲ ಹಂತದ ರಣಜಿ ಪಂದ್ಯಗಳನ್ನು ಮುಗಿಸಬಹುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಸ್ಪೋರ್ಟ್ಸ್‌ಸ್ಟಾರ್‌ಗೆ ತಿಳಿಸಿದ್ದಾರೆಂದು ವರದಿಯಾಗಿದೆ.
undefined
ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಕ್ರಿಕೆಟ್ ಟೂರ್ನಿಯು ಮಾರ್ಚ್ 27ರಿಂದ ಆರಂಭವಾಗಲಿದೆ. ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ರಣಜಿ ಟೂರ್ನಿಯ ನಾಕೌಟ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ. ಕೋವಿಡ್ (COVID 19) ಮತ್ತೆ ಲಗ್ಗೆಯಿಡದೇ ಹೋದರೆ, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮಾದರಿ ಈ ಹಿಂದಿನಂತೆಯೇ ಇರಲಿದೆ. ಆದರೆ ಎಲ್ಲಿ ಟೂರ್ನಿಯನ್ನು ಆಯೋಜಿಸಬೇಕು, ಟೂರ್ನಿ ಆಯೋಜಿಸುವ ಕಡೆ ಕೋವಿಡ್ ಪರಿಸ್ಥಿತಿ ಹೇಗಿರಲಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಬೇಕು. ಸದ್ಯಸ ಪರಿಸ್ಥಿತಿಯಲ್ಲಿ ಬೆಂಗಳೂರು (Bengaluru) ಮತ್ತು ಕೇರಳದಲ್ಲಿ (Kerala) ಹೆಚ್ಚಿನ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಈ ಎಲ್ಲಾ ವಿಚಾರಗಳನ್ನು ಚರ್ಚಿಸಿ ಬರುವ ಸೋಮವಾರದೊಳಗಾಗಿ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಈ ಮೊದಲು 2021-22ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಮುಂಬೈ, ಬೆಂಗಳೂರು, ಕೋಲ್ಕತಾ, ಅಹಮದಾಬಾದ್, ತಿರುವನಂತಪುರಂ ಹಾಗೂ ಚೆನ್ನೈ ಹೀಗೆ ಆರು ನಗರಗಳಲ್ಲಿ ಆಯೋಜಿಸಲು ಚಿಂತನೆ ನಡೆದಿತ್ತು. ಇನ್ನು ನಾಕೌಟ್ ಪಂದ್ಯಗಳನ್ನು ಕೋಲ್ಕತಾದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈಗ ಎಲ್ಲಿ ಟೂರ್ನಿ ಜರುಗಲಿದೆ ಎನ್ನುವ ಕುತೂಹಲಕ್ಕೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.
IPL Auction 2022: 1.5 ಕೋಟಿ ರುಪಾಯಿ ಮೂಲಬೆಲೆ ಹೊಂದಿರುವ ಈ 3 ಇಂಗ್ಲೆಂಡ್ ಆಟಗಾರರು ಹರಾಜಾಗುವುದೇ ಡೌಟ್
ಜೂನ್-ಜುಲೈ ತಿಂಗಳು ಮಾನ್ಸೂನ್ ಹವಾಮಾನ ಇರುವುದರಿಂದ ಆಗ ನಾಕೌಟ್ ಪಂದ್ಯಗಳನ್ನು ಆಯೋಜಿಸುವುದು ಕೂಡಾ ಬಿಸಿಸಿಐ ಪಾಲಿಗೆ ಸವಾಲಿನ ಸಂಗತಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ, ನಾವು ಆ ಸಂದರ್ಭದಲ್ಲಿ ನಾಕೌಟ್ ಪಂದ್ಯಗಳನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಆಲೋಚನೆಯೂ ಇದೆ. ನೋಡೋಣ ಆಗ ಏನಾಗುತ್ತದೆ ಎಂದು. ಇನ್ನು ಮೂರ್ನಾಲ್ಕು ದಿನಗಳೊಳಗಾಗಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ದಾದಾ ಹೇಳಿದ್ದಾರೆ.
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಜನವರಿ 13ರಿಂದಲೇ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯು ಆರಂಭವಾಗಬೇಕಿತ್ತು. ಆದರೆ ದೇಶಾದ್ಯಂತ ಕೋವಿಡ್ ಮೂರನೇ ಅಲೆ ಹೆಚ್ಚಾಗಿದ್ದರಿಂದ ರಣಜಿ ಟ್ರೋಫಿ ಸೇರಿದಂತೆ ವಿವಿಧ ವಯೋಮಾನದ ಎಲ್ಲಾ ಟೂರ್ನಿಗಳನ್ನು ಬಿಸಿಸಿಐ ತಾತ್ಕಾಲಿಕವಾಗಿ ಮುಂದೂಡಿತ್ತು. ಸದ್ಯದಲ್ಲಿಯೇ ಎಲ್ಲಾ ಟೂರ್ನಿಗಳನ್ನು ಪುನರಾರಂಭಿಸುವ ವಿಶ್ವಾಸವನ್ನು ಸೌರವ್ ಗಂಗೂಲಿ ವ್ಯಕ್ತಪಡಿಸಿದ್ದಾರೆ.