
ಮುಂಬೈ(ಏ.20): 2008ರಲ್ಲಿ ಪ್ರಾರಂಭಗೊಂಡಿದ್ದ ಐಪಿಎಲ್ ಈ ಬಾರಿ 1000ನೇ ಪಂದ್ಯದ ಹೊಸ್ತಿಲಲ್ಲಿದ್ದು, ಈ ಪಂದ್ಯವನ್ನು ಭರ್ಜರಿಯಾಗಿ ಆಚರಿಸಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಏಪ್ರಿಲ್ 30ರ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ನಡುವಿನ ಪಂದ್ಯ ಐಪಿಎಲ್‌ನ 1000ನೇ ಪಂದ್ಯ. ಹೀಗಾಗಿ ಪಂದ್ಯವನ್ನು ಸ್ಮರಣೀಯವಾಗಿಸಲು ಮಂಡಳಿಯು ಚಿಂತನೆ ನಡೆಸುತ್ತಿದ್ದು, ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಐಪಿಎಲ್‌ನ ಉದ್ಘಾಟನಾ ಸಮಾರಂಭದ ರೀತಿ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಇದೆ.
ಐಪಿಎಲ್‌ನ ಮೊತ್ತಮೊದಲ ಪಂದ್ಯ 2008ರ ಏಪ್ರಿಲ್ 18ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೋಲ್ಕತಾ ನೈಟ್ ರೈಡರ್ಸ್ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು.
ಆಸೀಸ್ ಸರಣಿ ವೇಳೆ ಸಿರಾಜ್‌ರನ್ನು ಸಂಪರ್ಕ ಮಾಡಿದ್ದ ಬುಕ್ಕಿ ಬಂಧನ!
ನವದೆಹಲಿ: ಇತ್ತೀಚೆಗೆ ಆಸ್ಪ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಭಾರತದ ವೇಗಿ ಮೊಹಮದ್ ಸಿರಾಜ್‌ರನ್ನು ಬುಕ್ಕಿಯೋರ್ವ ಸಂಪರ್ಕಿಸಿ, ತಂಡದೊಳಗಿನ ಮಾಹಿತಿ ನೀಡಲು ಕೇಳಿಕೊಂಡಿದ್ದ ಎಂಬುದು ತಡವಾಗಿ ಬಹಿರಂಗಗೊಂಡಿದೆ. ಆದರೆ ಈ ಬಗ್ಗೆ ತಕ್ಷಣ ಸಿರಾಜ್ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಿದ್ದು, ವ್ಯಕ್ತಿಯನ್ನು ಬಂಧಿಸಲಾಗಿದೆ.
ಫೆಬ್ರವರಿಯಲ್ಲಿ ಭಾರತದಲ್ಲೇ ನಡೆದಿದ್ದ ಸರಣಿಗೂ ಮುನ್ನ ಸಿರಾಜ್ಗೆ ಹೈದರಾಬಾದ್ನ ವ್ಯಕ್ತಿಯೋರ್ವ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿದ್ದ. ಬೆಟ್ಟಿಂಗ್‌ನಿಂದ ಹಣ ಕಳೆದುಕೊಂಡು ಹತಾಶೆಗೊಂಡಿದ್ದ ವ್ಯಕ್ತಿಯು ಸಿರಾಜ್‌ರನ್ನು ಸಂಪರ್ಕಿಸಿ ತಂಡದ ಮಾಹಿತಿ ಕೇಳಿದ್ದ. ಈ ಬಗ್ಗೆ ಸಿರಾಜ್ ಅಧಿಕಾರಿಗಳಿಗೆ ದೂರಿದ್ದು, ವಿಷಯ ತಿಳಿದ ಬಳಿಕ ಆಂಧ್ರಪ್ರದೇಶ ಪೊಲೀಸರು ವ್ಯಕ್ತಿಯನ್ನು ಹೈದ್ರಾಬಾದ್ನಲ್ಲಿ ಬಂಧಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಡೆಲ್ಲಿ ತಂಡದ 16 ಬ್ಯಾಟ್, ಹಲವು ವಸ್ತುಗಳ ಕಳವು!
ಬೆಂಗಳೂರು: ಆರ್‌ಸಿಬಿ ವಿರುದ್ಧದ ಪಂದ್ಯದ ಬಳಿಕ ಡೆಲ್ಲಿಗೆ ವಾಪಸಾಗುವಾಗ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಬ್ಯಾಟ್ ಸೇರಿ ಇತರ ಪರಿಕರಗಳು ಕಳವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ವರದಿಗಳ ಪ್ರಕಾರ ಡೇವಿಡ್ ವಾರ್ನರ್‌ಗೆ ಸೇರಿದ 3 ಬ್ಯಾಟ್, ಮಿಚೆಲ್ ಮಾಷ್‌ರ್‍ರ 2, ಫಿಲ್ ಸಾಲ್ಟ್‌ರ 3 ಹಾಗೂ ಯಶ್ ಧುಳ್‌ರ 5 ಬ್ಯಾಟ್‌ಗಳು ಕಳವಾಗಿವೆ. ಜೊತೆಗೆ ಹಲವು ಆಟಗಾರರ ಶೂ, ಪ್ಯಾಡ್, ಥೈ ಪ್ಯಾಡ್‌್ಸ, ಗ್ಲೌಸ್‌ಗಳು ಕೂಡಾ ನಾಪತ್ತೆಯಾಗಿವೆ. ಆಟಗಾರರು ನವದೆಹಲಿ ತೆರಳಿದ ಮೇಲೆ ಬ್ಯಾಗ್‌ಗಳು ಹೋಟೆಲ್ ತಲುಪಿದ್ದು, ಈ ವೇಳೆ ಪರಿಶೀಲಿಸಿದಾಗ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ಡೆಲ್ಲಿ ಫ್ರಾಂಚೈಸಿ ದೂರು ನೀಡಿದ್ದಾರೆ.
ಫಾಫ್ ಡು ಪ್ಲೆಸಿ ಆತ್ಮಚರಿತ್ರೆ ಮುಂದಿನ ತಿಂಗಳು ಬಿಡುಗಡೆ
ನವದೆಹಲಿ: ದ.ಆಫ್ರಿಕಾ ಕ್ರಿಕೆಟಿಗ, ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿ ಅವರು ಆತ್ಮಚರಿತ್ರೆ ‘ಫಾಫ್ ಥ್ರೂ ಫೈರ್’ ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದೆ. ಪುಸ್ತಕವನ್ನು ಭಾರತದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಸ್ವತಃ ಫಾಫ್ ತಿಳಿಸಿದ್ದಾರೆ.
IPL 2023: ಕೆಕೆಆರ್ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ..!
ಪುಸ್ತಕದಲ್ಲಿ ಅವರ ಕ್ರಿಕೆಟ್ ಪಯಣ, ಕಷ್ಟದ ದಿನಗಳು ಹಾಗೂ ಧೋನಿ, ಗ್ರೇಮ್ ಸ್ಮಿತ್, ಫ್ಲೆಮಿಂಗ್, ಎಬಿ ಡಿ ವಿಲಿಯರ್ಸ್ ಸೇರಿದಂತೆ ಪ್ರಮುಖರ ಜೊತೆಗಿನ ಒಡನಾಟಗಳ ಬಗ್ಗೆ ಉಲ್ಲೇಖಿಸಿದ್ದಾರೆ. 38 ವರ್ಷದ ಫಾಪ್ ದಕ್ಷಿಣ ಆಫ್ರಿಕಾದ ಪರ 69 ಟೆಸ್ಟ್, 143 ಏಕದಿನ, 50 ಟಿ20 ಪಂದ್ಯಗಳನ್ನಾಡಿದ್ದಾರೆ. ಕಳೆದ ಆವೃತ್ತಿ ಐಪಿಎಲ್ನಲ್ಲಿ ಅವರು ಆರ್‌ಸಿಬಿ ನಾಯಕನಾಗಿ ನೇಮಕಗೊಂಡಿದ್ದರು.
ಮೇ 4ರ ಬದಲು 3ರಂದೇ ಲಖನೌ-ಚೆನ್ನೈ ಪಂದ್ಯ!
ಲಖನೌ: ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 4ರಂದು ಲಖನೌದಲ್ಲಿ ನಡೆಯಬೇಕಿದ್ದ ಲಖನೌ-ಚೆನ್ನೈ ನಡುವಿನ ಪಂದ್ಯ ಒಂದು ದಿನ ಮೊದಲೇ ನಡೆಯುವ ಸಾಧ್ಯತೆ ಇದೆ ತಿಳಿದುಬಂದಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗದಿದ್ದರೂ, ಒಂದು ದಿನ ಮೊದಲೇ ಪಂದ್ಯಕ್ಕೆ ಸಿದ್ಧವಾಗುವಂತೆ ಎರಡೂ ತಂಡಗಳಿಗೆ ಬಿಸಿಸಿಐ ಸೂಚಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಂದ್ಯ ಮೇ 4 ಗುರುವಾರ ಮಧ್ಯಾಹ್ನ 3.30ಕ್ಕೆ ನಿಗದಿಯಾಗಿತ್ತು. ಆದರೆ ಅದೇ ದಿನ ಲಖನೌ ನಗರಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಭದ್ರತೆ ಸಮಸ್ಯೆ ಉಂಟಾಗಲಿರುವ ಕಾರಣ ಪಂದ್ಯ ಮೇ 3ರಂದು ಮಧ್ಯಾಹ್ನ 3.30ಕ್ಕೆ ನಡೆಯಬಹುದು ಎಂದು ತಿಳಿದುಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.