
ನವದೆಹಲಿ(ಅ.18): ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid) ಭಾರತ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಳ್ಳುವುದು ಖಚಿತವಾದ ಬಳಿಕ ಬಿಸಿಸಿಐ (BCCI) ಔಪಚಾರಿಕವಾಗಿ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಜೊತೆಗೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಕೋಚ್‌ಗಳ ಹುದ್ದೆಗೂ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 26 ಕೊನೆ ದಿನವಾಗಿದೆ.
ಈಗಾಗಲೇ ದ್ರಾವಿಡ್ ಜೊತೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) , ಕಾರ‍್ಯದರ್ಶಿ ಜಯ್ ಶಾ (Jay Shah) ಅವರು ಅವರನ್ನು ಕೋಚ್ ಆಗಲು ಒಪ್ಪಿಸಿದ್ದಾರೆ. ಇವರ ಜೊತೆಗೆ ಬೌಲಿಂಗ್ ಕೋಚ್ ಸ್ಥಾನಕ್ಕೆ ಪರಾಸ್ ಮಾಂಬ್ರೆ ಅವರನ್ನು ನೇಮಿಸುವುದು ಖಚಿತವಾಗಿದೆ. ಸದ್ಯ ಬಿಸಿಸಿಐ ಟೀಂ ಇಂಡಿಯಾ ಹೆಡ್ ಕೋಚ್, ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್ ಹಾಗೂ ಎನ್‌ಸಿಎ ಹೆಡ್ ಸೈನ್ಸ್ ಸ್ಪೋರ್ಟ್ಸ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ.
Good News: ಟೀಂ ಇಂಡಿಯಾ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ..!
ಆದರೆ ನಿಯಮ ಪ್ರಕಾರವೇ ಕೋಚ್‌ಗಳನ್ನು ನೇಮಿಸುವ ನಿಟ್ಟಿನಲ್ಲಿ ಬಿಸಿಸಿಐ ಔಪಚಾರಿಕವಾಗಿಯೇ ಕೋಚ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ. ಹೀಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) (NCA) ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಧಾನ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಆರು ವರ್ಷಗಳಿಂದ ರಾಹುಲ್ ದ್ರಾವಿಡ್ ಭಾರತ 'ಎ' ಹಾಗೂ ಅಂಡರ್ 19 ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿ ಗಮನ ಸೆಳೆದಿದ್ದರು. ಸದ್ಯ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡಮಿ (ಎನ್‌ಸಿಎ) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯುಎಇನಲ್ಲಿ (UAE) ಆರಂಭವಾಗಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿ ಮುಕ್ತಾಯದ ಬಳಿಕ ಹಾಲಿ ಟೀಂ ಇಂಡಿಯಾ ಹೆಡ್ ಕೋಚ್ ರವಿಶಾಸ್ತ್ರಿ ಅವರ ಒಪ್ಪಂದಾವಧಿ ಮುಕ್ತಾಯವಾಗಲಿದೆ. ಇದರ ಜತೆಗೆ ಬೌಲಿಂಗ್ ಕೋಚ್ ಬಿ. ಅರುಣ್ (Bharat Arun), ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಲಿದೆ. ರಾಹುಲ್ ದ್ರಾವಿಡ್ ಅವರನ್ನು ಟೀಂ ಇಂಡಿಯಾ ಮುಂದಿನ ಕೋಚ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾದ ಬೆನ್ನಲ್ಲೇ ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ (Virat Kohli)ಯನ್ನು ಮಾಧ್ಯಮದವರು ಅಭಿಪ್ರಾಯ ಕೇಳಿದ್ದರು.
'ಪಾಠ ಶುರು ಮಾಡಿದ ಮೇಸ್ಟ್ರು' ಟೀಂ ಇಂಡಿಯಾಕ್ಕೆ ಧೋನಿ ಮೆಂಟರಿಂಗ್ ಶುರು!
ಈ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದ್ದ ರಾಹುಲ್ ದ್ರಾವಿಡ್, ಏನೆಲ್ಲಾ ವಿಚಾರಗಳು ನಡೆದಿವೆ ಎನ್ನುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಯಾರೊಂದಿಗೂ ಈ ಬಗ್ಗೆ ನಾನು ಚರ್ಚೆ ನಡೆಸಿಲ್ಲ ಎಂದು ಚುಟುಕಾಗಿ ಉತ್ತರಿಸಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ (Team India) ಯುಎಇನಲ್ಲಿದ್ದು, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಅಕ್ಟೋಬರ್ 24ರಂದು ಟೀಂ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಎರಡನೇ ಐಸಿಸಿ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಈ ಮೊದಲು 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.