T20 World Cup: ಶುಭಾರಂಭದ ನಿರೀಕ್ಷೆಯಲ್ಲಿ ಐರ್ಲೆಂಡ್‌, ಶ್ರೀಲಂಕಾ..!

By Suvarna News  |  First Published Oct 18, 2021, 12:55 PM IST

* ಟಿ20 ವಿಶ್ವಕಪ್‌ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿವೆ

* ಐರ್ಲೆಂಡ್‌ ತಂಡ ನೆದರ್‌ಲೆಂಡ್ಸ್‌ ವಿರುದ್ಧ ಒಮಾನ್‌ನ ಅಲ್‌ ಅಮೆರತ್‌ನಲ್ಲಿ ಸೆಣಸಲಿದೆ

* ಅಬುಧಾಬಿಯಲ್ಲಿ ಶ್ರೀಲಂಕಾ ತಂಡವು ನಮೀಬಿಯಾ ತಂಡವನ್ನು ಎದುರಿಸಲಿದೆ


ಅಬುಧಾಬಿ(ಅ.18): ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯ ಪ್ರಧಾನ ಸುತ್ತಿಗೆ ಪ್ರವೇಶ ಪಡೆಯುವ ನೆಚ್ಚಿನ ತಂಡಗಳು ಎನಿಸಿರುವ ಐರ್ಲೆಂಡ್‌ ಕ್ರಿಕೆಟ್ ತಂಡ (Ireland Cricket Team) ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡ (Sri Lanka Cricket), ಅರ್ಹತಾ ಸುತ್ತಿನಲ್ಲಿ ಶುಭಾರಂಭ ಮಾಡುವ ಉತ್ಸಾಹದಲ್ಲಿವೆ. 

ಸೋಮವಾರ ಐರ್ಲೆಂಡ್‌ ತಂಡ ನೆದರ್‌ಲೆಂಡ್ಸ್‌ (Netherlands) ವಿರುದ್ಧ ಒಮಾನ್‌ನ ಅಲ್‌ ಅಮೆರತ್‌ನಲ್ಲಿ ಸೆಣಸಿದರೆ, ಶ್ರೀಲಂಕಾ ತಂಡವು ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ನಮೀಬಿಯಾ (Namibia) ವನ್ನು ಎದುರಿಸಲಿದೆ. ಐರ್ಲೆಂಡ್‌ಗೆ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ಐರ್ಲೆಂಡ್‌ ವಿರುದ್ಧ ಈ ಹಿಂದಿನ 12 ಪಂದ್ಯಗಳಲ್ಲಿ ನೆದರ್‌ಲೆಂಡ್ಸ್‌ 7ರಲ್ಲಿ ಜಯಿಸಿದೆ. 2014ರ ಬಳಿಕ ಮೊದಲ ಬಾರಿಗೆ ಟಿ20 ವಿಶ್ವಕಪ್‌ನ ಪ್ರಧಾನ ಸುತ್ತಿಗೇರಲು ಐರ್ಲೆಂಡ್‌ ಕಾತರಿಸುತ್ತಿದೆ.

Latest Videos

undefined

T20 World Cup: ಉದ್ಘಾಟನಾ ಪಂದ್ಯದಲ್ಲಿ ಓಮನ್‌ಗೆ 10 ವಿಕೆಟ್ ಭರ್ಜರಿ ಗೆಲುವು!

ಮಾಜಿ ಚಾಂಪಿಯನ್‌ ಶ್ರೀಲಂಕಾ ಕ್ರಿಕೆಟ್ ತಂಡವು ಅರ್ಹತಾ ಸುತ್ತಿನಲ್ಲಿ ಆಡುತ್ತಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. 2014ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಮಣಿಸಿ ಶ್ರೀಲಂಕಾ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಆದರೆ ಲಂಕಾ ಇತ್ತೀಚಿನ ವರ್ಷಗಳಲ್ಲಿ ಕಳಪೆ ಪ್ರದರ್ಶನ ತೋರಿರುವ ಕಾರಣ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಅಗ್ರ 8 ತಂಡಗಳು ಮಾತ್ರ ನೇರವಾಗಿ ಸೂಪರ್‌-12 ಹಂತಕ್ಕೆ ಪ್ರವೇಶ ಪಡೆದಿರುವ ಕಾರಣ ಲಂಕಾ ಅರ್ಹತಾ ಟೂರ್ನಿಯಲ್ಲಿ ಆಡಬೇಕಿದೆ. ಇನ್ನು 18 ವರ್ಷಗಳ ಬಳಿಕ ನಮೀಬಿಯಾ ವಿಶ್ವಕಪ್‌ನಲ್ಲಿ ಆಡಲಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್‌, ಆಫ್ಘಾನಿಸ್ತಾನ, ಟೀಂ ಇಂಡಿಯಾ (Team India), ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಹಾಲಿ ಚಾಂಪಿಯನ್‌ ವೆಸ್ಟ್ ಇಂಡೀಸ್ ತಂಡಗಳು ಟಿ20 ವಿಶ್ವಕಪ್‌ ಟೂರ್ನಿಗೆ ನೇರ ಅರ್ಹತೆಯನ್ನು ಪಡೆದಿವೆ. 

T20 World Cup: ಮೊದಲ ದಿನವೇ ಆಘಾತಕಾರಿ ಫಲಿತಾಂಶ: ಸ್ಕಾಟ್ಲೆಂಡ್‌ಗೆ ಶರಣಾದ ಬಾಂಗ್ಲಾದೇಶ

ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡಿದ್ದು, 4 ತಂಡಗಳಂತೆ 2 ಗುಂಪುಗಳಾಗಿ ವಿಭಾಗಿಸಲಾಗಿದೆ. ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್‌ ಶ್ರೀಲಂಕಾ, ಐರ್ಲೆಂಡ್‌, ನೆದರ್ಲ್ಯಾಂಡ್‌ ಹಾಗೂ ನಮೀಬಿಯಾ ತಂಡಗಳು ಒಂದು ಗುಂಪಿನಲ್ಲಿ ಸ್ಥಾನ ಪಡೆದಿವೆ. ಇನ್ನೊಂದು ಗುಂಪಿನಲ್ಲಿ ಒಮಾನ್‌, ಪಪುವಾ ನ್ಯೂಗಿನಿ, ಸ್ಕಾಟ್ಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಪ್ರತಿಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೂಪರ್ 12 ಹಂತಕ್ಕೆ ಲಗ್ಗೆಯಿಡಲಿವೆ. ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23ರಿಂದ ಆರಂಭವಾಗಲಿವೆ. ಭಾನುವಾರ(ಅ.18)ದಿಂದ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿವೆ. ಮೊದಲ ದಿನವೇ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಎದುರಾಗಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಒಮಾನ್ ತಂಡವು ಪಪುವಾ ನ್ಯೂಗಿನಿ ವಿರುದ್ದ 10 ವಿಕೆಟ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಭರ್ಜರಿ ಶುಭಾರಂಭ ಮಾಡಿದೆ. ಇನ್ನೊಂದೆಡೆ ಸೂಪರ್ 12 ಹಂತಕ್ಕೇರುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿರುವ ಬಾಂಗ್ಲಾದೇಶ ತಂಡವು ಸ್ಕಾಟ್ಲೆಂಡ್ ಎದುರು 6 ರನ್‌ಗಳ ರೋಚಕ ಸೋಲು ಅನುಭವಿಸಿದೆ. 

T20 World Cup: ಅಭ್ಯಾಸ ಪಂದ್ಯದಲ್ಲಿಂದು ಟೀಂ ಇಂಡಿಯಾಗೆ ಇಂಗ್ಲೆಂಡ್ ಸವಾಲು..!

ಪಂದ್ಯ ಆರಂಭ:

ಐರ್ಲೆಂಡ್‌-ನೆದರ್‌ಲೆಂಡ್ಸ್‌: ಮಧ್ಯಾಹ್ನ 3.30ಕ್ಕೆ, 

ಶ್ರೀಲಂಕಾ-ನಮೀಬಿಯಾ: ಸಂಜೆ 7.30ಕ್ಕೆ

click me!