ಐಪಿಎಲ್ 2021 ಭಾಗ-2: ವಿದೇಶಿ ಆಟಗಾರರನ್ನು ಕರೆತರಲು ಬಿಸಿಸಿಐ ಮಾಸ್ಟರ್‌ ಪ್ಲಾನ್

By Suvarna NewsFirst Published May 31, 2021, 10:59 AM IST
Highlights

* ಐಪಿಎಲ್ 2021 ಭಾಗ-2ಕ್ಕೆ ಯುಎಇ ಆತಿಥ್ಯ ವಹಿಸಲಿದೆ.

* ಐಪಿಎಲ್‌ ಭಾಗ 2 ಟೂರ್ನಿಗೆ ವಿದೇಶಿ ತಾರಾ ಆಟಗಾರರ ಗೈರಾಗುವ ಸಾಧ್ಯತೆ

* ವಿದೇಶಿ ಆಟಗಾರರನ್ನು ಐಪಿಎಲ್ ಟೂರ್ನಿಗೆ ಕರೆತರಲು ಬಿಸಿಸಿಐ ಮಾಸ್ಟರ್ ಪ್ಲಾನ್

ನವದೆಹಲಿ(ಮೇ.31): ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಯುಎಇನಲ್ಲಿ ಐಪಿಎಲ್‌ ನಡೆಸಲು ಯೋಜನೆ ರೂಪಿಸುತ್ತಿರುವ ಬಿಸಿಸಿಐ, ಆಗಸ್ಟ್ 28ರಿಂದ ಆರಂಭಗೊಂಡು ಸೆಪ್ಟೆಂಬರ್ 19ಕ್ಕೆ ಅಂತ್ಯವಾಗಲಿರುವ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌(ಸಿಪಿಎಲ್‌) ಟಿ20 ಟೂರ್ನಿಯನ್ನು, ಒಂದು ವಾರ ಇಲ್ಲವೇ 10 ದಿನಗಳ ಮೊದಲೇ ಮುಕ್ತಾಯಗೊಳಿಸುವಂತೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಜೊತೆ ಮಾತುಕತೆ ನಡೆಸುತ್ತಿದೆ. 

ಸೆಪ್ಟೆಂಬರ್ 18ರಿಂದ ಐಪಿಎಲ್‌ ಭಾಗ-2 ಆರಂಭಗೊಳ್ಳುವ ನಿರೀಕ್ಷೆ ಇದ್ದು, ಸಿಪಿಎಲ್‌ನಲ್ಲಿ ಆಡುವ ಆಟಗಾರರು ಯುಎಇ ತಲುಪಿ, ತಂಡಗಳನ್ನು ಕೂಡಿಕೊಳ್ಳಲು ಕನಿಷ್ಠ 4-5 ದಿನಗಳ ಸಮಯ ಬೇಕಾಗುತ್ತದೆ. ಸಿಪಿಎಲ್‌ ಕೂಡ ಬಯೋ ಬಬಲ್‌ನೊಳಗೆ ನಡೆಯಲಿರುವ ಕಾರಣ, ಒಂದು ಬಯೋ ಬಬಲ್‌ನಿಂದ ಮತ್ತೊಂದು ಬಯೋ ಬಬಲ್‌ಗೆ ಆಟಗಾರರನ್ನು ಕರೆಸಿ, ಯುಎಇನಲ್ಲಿ ಕ್ವಾರಂಟೈನ್‌ ತಪ್ಪಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. 

ನಾವೀಗಾಗಲೇ ವಿಂಡೀಸ್ ಕ್ರಿಕೆಟ್ ಮಂಡಳಿ ಜತೆ ಮಾತುಕತೆ ನಡೆಸುತ್ತಿದ್ದೇವೆ. ಒಂದು ವೇಳೆ ಸಿಪಿಎಲ್‌ ಸ್ವಲ್ಪ ಮುಂಚಿತವಾಗಿಯೇ ಮುಕ್ತಾಯಗೊಂಡರೆ, ಒಂದು ಬಯೋ ಬಬಲ್‌ನಿಂದ ದುಬೈನಲ್ಲಿ ಕೇವಲ 3 ದಿನ ಕ್ವಾರಂಟೈನ್‌ ಮುಗಿಸಿ ಮತ್ತೊಂದು ಬಯೋ ಬಬಲ್‌ಗೆ ಆಟಗಾರರನ್ನು ಸೇರಿಕೊಳ್ಳಲು ಅನುಕೂಲವಾಗಲಿದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.

ಐಪಿಎಲ್‌ ಭಾಗ-2ಕ್ಕೆ ಕೆಕೆಆರ್ ವೇಗಿ ಪ್ಯಾಟ್‌ ಕಮಿನ್ಸ್‌ ಅಲಭ್ಯ?

ಬಿಸಿಸಿಐ ಕೋರಿಕೆಯನ್ನು ವಿಂಡೀಸ್‌ ಕ್ರಿಕೆಟ್‌ ಮಂಡಳಿ ಒಪ್ಪದಿದ್ದರೆ, ವಿಂಡೀಸ್ ಟಿ20 ಸ್ಟಾರ್ ಆಟಗಾರರಾದ ಕ್ರಿಸ್ ಗೇಲ್‌, ಕೀರನ್‌ ಪೊಲ್ಲಾರ್ಡ್‌, ನಿಕೋಲಸ್‌ ಪೂರನ್‌, ಡ್ವೇನ್ ಬ್ರಾವೋ, ಶಿಮ್ರೊನ್‌ ಹೆಟ್ಮೇಯರ್ ಸೇರಿದಂತೆ ಅನೇಕ ಕ್ರಿಕೆಟಿಗರು ಮೊದಲ ಕೆಲ ಪಂದ್ಯಗಳಿಗೆ ಗೈರಾಗಲಿದ್ದಾರೆ.
 

click me!