T20 World cup 2022 ಟೂರ್ನಿಯಿಂದ ಬುಮ್ರಾ ಅಧಿಕೃತವಾಗಿ ಔಟ್, ಖಚಿತಪಡಿಸಿದ ಬಿಸಿಸಿಐ!

By Suvarna NewsFirst Published Oct 3, 2022, 9:30 PM IST
Highlights

ವೇಗಿ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್ ಸರಣಿಗೆ ಲಭ್ಯವಿಲ್ಲ. ಈ ಕುರಿತು ಬಿಸಿಸಿಐ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಈ ಮೂಲಕ ಹಲವು ಗೊಂದಲಗಳಿಗೆ ತೆರೆ ಎಳೆದಿದೆ.

ಮುಂಬೈ(ಅ.03): ಟಿ20 ವಿಶ್ವಕಪ್ ಟೂರ್ನಿಗೆ ತಯಾರಾಗುತ್ತಿರುವ ಟೀಂ ಇಂಡಿಯಾ ಒಬ್ಬೊಬ್ಬ ಸ್ಟಾರ್ ಆಟಗಾರರ ಸೇವೆಯಿಂದ ವಂಚಿತವಾಗುತ್ತಿದೆ. ಬೆನ್ನುಮೂಳೆ ಮುರಿತದಿಂದ ಸೌತ್ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದ ವೇಗಿ ಜಸ್ಪ್ರೀತ್ ಬುಮ್ರಾ, ಟಿ20 ವಿಶ್ವಕಪ್ ಟೂರ್ನಿಗೆ ಲಭ್ಯತೆ ಕುರಿತು ಗೊಂದಲ ಏರ್ಪಟ್ಟಿತ್ತು. ಇದೀಗ ಬಿಸಿಸಿಐ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಗಾಯದಿಂದ ಚೇತರಿಸಿಕೊಳ್ಳಲು ಹೆಚ್ಚಿನ ವಾರಗಳ ವಿಶ್ರಾಂತಿ ಅಗತ್ಯವಿರುವ ಕಾರಣ ಜಸ್ಪ್ರೀತ್ ಬುಮ್ರಾ ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ರವೀಂದ್ರ ಜಡೇಜಾ ಬಳಿಕ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಎರಡನೇ ಪ್ರಮುಖ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಅಭ್ಯಾಸದ ವೇಳೆ ಜಸ್ಪ್ರೀತ್ ಬುಮ್ರಾಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ತಿರುವನಂತಪುರಂಲ್ಲಿ ಸ್ಕ್ಯಾನಿಂಗ್ ಒಳಗಾದ ಬುಮ್ರಾ ಹಾಗೂ ಟೀಂ ಇಂಡಿಯಾಗೆ ಆಘಾತವಾಗಿತ್ತು. ಬುಮ್ರಾ ಬೆನ್ನು ಮೂಳೆ ಮುರಿತಕ್ಕೊಳಗಾಗಿದೆ ಅನ್ನೋ ವರದಿ ಅಭಿಮಾನಿಗಳೂ ಆಘಾತ ತಂದಿತ್ತು. ಇದರಿಂದ ಸೌತ್ ಆಫ್ರಿಕಾ ವಿರುದ್ದಧ ಟಿ20 ಸರಣಿಯಿಂದ ಬುಮ್ರಾ ಹೊರಬಿದ್ದಿದ್ದರು. ಆದರೆ ಟಿ20 ವಿಶ್ವಕಪ್ ಟೂರ್ನಿಗೆ ಬುಮ್ರಾ ಲಭ್ಯತೆ ಕುರಿತು ಅನುಮಾನಗಳು ವ್ಯಕ್ತವಾಗಿತ್ತು. ಇದೀಗ ಬಿಸಿಸಿಐ ಬುಮ್ರಾ ಲಭ್ಯವಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದೆ.

 

ICC T20 World Cup: 'ಮೊಹಮ್ಮದ್ ಶಮಿ ಪವರ್‌ ಪ್ಲೇನಲ್ಲೇ ವಿಕೆಟ್‌ ಕಬಳಿಸಬಲ್ಲರು'

ವೇಗಿ ಜಸ್‌ಪ್ರೀತ್‌ ಬೂಮ್ರಾ ಟಿ20 ವಿಶ್ವಕಪ್‌ ಲಭ್ಯತೆ ಕುರಿತು ಮುಖ್ಯ ಕೋಚ್ ದ್ರಾವಿಡ್ ಅಧಿಕೃತ ವರದಿಗಾಗಿ ಕಾಯುತ್ತಿದ್ದೇವೆ ಎಂದಿದ್ದರು.  ‘ಬೂಮ್ರ ಅವರ ಗಾಯದ ಬಗ್ಗೆ ಅಧಿಕೃತ ವರದಿ ಇನ್ನಷ್ಟೇ ಬರಬೇಕಿದೆ. ಅವರು ದ.ಆಫ್ರಿಕಾ ಸರಣಿಯಿಂದ ಹೊರಬಿದ್ದಿದ್ದಾರೆ. ಆದರೆ ಮುಂದೆ ಏನಾಗಲಿದೆ ಎಂದು ಗೊತ್ತಿಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಅವರು ಟಿ20 ವಿಶ್ವಕಪ್‌ಗೆ ಗೈರಾಗಲಿದ್ದಾರೆ. ಆದರೆ ಅಧಿಕೃತ ವರದಿ ಬಂದರಷ್ಟೇ ಖಚಿತವಾಗಿ ಹೇಳಬಹುದು. ಅವರು ತಂಡಕ್ಕೆ ಸೇರಿಕೊಳ್ಳುವ ಭರವಸೆ ಇದೆ’ ಎಂದಿದ್ದರು. ಇದೀಗ ಅಧಿಕೃತ ವರದಿ ಬಿಡುಗಡೆಯಾಗಿದ್ದು, ಬುಮ್ರಾ ಅಲಭ್ಯರಾಗಿದ್ದಾರೆ.

ಬಿಸಿಸಿಐ ಅಧಿಕಾರಿಯೊಬ್ಬರ ಪ್ರಕಾರ ಬೂಮ್ರಾ ಕನಿಷ್ಠ 6 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ‘ಬೂಮ್ರಾ ವಿಶ್ವಕಪ್‌ ಆಡುವುದಿಲ್ಲ. ಅವರು ಬೆನ್ನು ನೋವಿನಿಂದ ತೀವ್ರವಾಗಿ ಬಳಲುತ್ತಿದ್ದಾರೆ. ಅತಿಯಾದ ಕೆಲಸದ ಒತ್ತಡದಿಂದ ಮೂಳೆ ಮುರಿದಿರಬಹುದು. 6 ತಿಂಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ.

ICC T20 World Cup: ಜಸ್ಪ್ರೀತ್ ಬುಮ್ರಾ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಸೌರವ್ ಗಂಗೂಲಿ..!

ಜಸ್ಪ್ರೀತ್ ಬುಮ್ರಾ ಬದಲಿಗೆ ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ವೇಗಿ ಮೊಹಮ್ಮದ್ ಸಿರಾಜ್ ಆಯ್ಕೆಯಾಗಿದ್ದರು. ಇದೀಗ ಬಿಸಿಸಿಐ ಟಿ20 ವಿಶ್ವಕಪ್ ಟೂರ್ನಿಗೆ ಬುಮ್ರಾ ಬದಲಿ ಆಟಗಾರನ ಶೀಘ್ರದಲ್ಲೇ ಪ್ರಕಟಿಸಲಿದೆ.

ಬೂಮ್ರಾ ಇತ್ತೀಚೆಗೆ ಆಸ್ಪ್ರೇಲಿಯಾ ವಿರುದ್ಧ 2ನೇ ಹಾಗೂ 3ನೇ ಟಿ20 ಪಂದ್ಯಗಳನ್ನು ಆಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಲು ತಿರುವನಂತಪುರಂಗೆ ತೆರಳಿದ್ದರಾದರೂ ಪಂದ್ಯದಲ್ಲಿ ಆಡಲಿಲ್ಲ. ಬೂಮ್ರಾ ಪಂದ್ಯ ಆರಂಭಕ್ಕೂ ಮೊದಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಬೂಮ್ರಾ ಈ ವರ್ಷ ಭಾರತ ಪರ 5 ಟೆಸ್ಟ್‌, 5 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಜೊತೆಗೆ ಐಪಿಎಲ್‌ನಲ್ಲಿ ಅವರು ಪಾಲ್ಗೊಂಡಿದ್ದರು.

click me!