ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆರಂಭ
ಟಿ20 ವಿಶ್ವಕಪ್ ಗೆಲ್ಲಬಲ್ಲ 2 ನೆಚ್ಚಿನ ತಂಡವನ್ನು ಹೆಸರಿಸಿದ ಮೋಯಿನ್ ಅಲಿ
ಮೋಯಿನ್ ಅಲಿ, ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್
ಲಾಹೋರ್(ಅ.03): ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆರಂಭವಾಗಲಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಈ ಬಾರಿ ಟಿ20 ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳೆನಿಸಿವೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಮೋಯಿನ್ ಅಲಿ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡವು ಬರೋಬ್ಬರಿ 17 ವರ್ಷಗಳ ಬಳಿಕ ದ್ವಿಪಕ್ಷೀಯ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ಬಂದಿದೆ. ಮೋಯಿನ್ ಅಲಿ ನೇತೃತ್ವದ ಇಂಗ್ಲೆಂಡ್ ತಂಡವು 7 ಪಂದ್ಯಗಳ ಟಿ20 ಸರಣಿಯನ್ನು 4-3 ಅಂತರದಲ್ಲಿ ಗೆದ್ದು ಬೀಗಿತ್ತು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ, ತಂಡಗಳು ಇಂಗ್ಲೆಂಡ್ ಎದುರು ಆಡಲು ಭಯ ಪಡುತ್ತವೆ. ಆದರೆ ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಾಗಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಗುರುತಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
undefined
ನಾವು ಪಾಕಿಸ್ತಾನ ವಿರುದ್ದ ಟಿ20 ಸರಣಿ ಗೆದ್ದಿದ್ದು ಖುಷಿ ನೀಡಿದೆ. ಆತ್ಮವಿಶ್ವಾಸದಿಂದ ಆಸ್ಟ್ರೇಲಿಯಾಗೆ ಹೊರಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ನಾವು ಈ ಬಾರಿ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡ ಎಂದೆನಿಸುತ್ತಿಲ್ಲ. ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ನನಗೆ ಹಾಗೆ ಅನಿಸುತ್ತಿಲ್ಲ. ಆದರೆ ಒಂದಂತೂ ಸತ್ಯ, ನಮ್ಮ ತಂಡದ ಎದುರು ಕಣಕ್ಕಿಳಿಯಲು ಉಳಿದ ತಂಡಗಳು ಹೆದರುತ್ತವೆ. ಹೀಗಿದ್ದೂ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಗುರುತಿಸಿಕೊಂಡಿವೆ ಎಂದು ಮೋಯಿನ್ ಅಲಿ ಹೇಳಿದ್ದಾರೆ.
Eng vs Pak ಪಾಕಿಸ್ತಾನವನ್ನು ಅವರದ್ದೇ ನೆಲದಲ್ಲಿ ಮಣಿಸಿ ಟಿ20 ಸರಣಿ ಗೆದ್ದ ಇಂಗ್ಲೆಂಡ್..!
ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ನಿರ್ಣಾಯಕ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಇಂಗ್ಲೆಂಡ್ ತಂಡವು, 209 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಆತಿಥೇಯ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮೋಯಿನ್ ಅಲಿ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡವು 67 ರನ್‌ಗಳ ಜಯದ ನಗೆ ಬೀರಿತು.
ಇಂಗ್ಲೆಂಡ್ ಕ್ರಿಕೆಟ್ ತಂಡವು ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿಯೇ, ಬಲಿಷ್ಠ ಪಾಕಿಸ್ತಾನ ಎದುರು ಅವರದ್ದೇ ನೆಲದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಟಿ20 ಸರಣಿಯನ್ನು ಗೆದ್ದು ಬೀಗಿದೆ. ಇನ್ನು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಟ್ಲರ್ ಹಾಗೂ ಸ್ಟೋಕ್ಸ್ ಸೇರ್ಪಡೆಯಿಂದ ಇಂಗ್ಲೆಂಡ್ ತಂಡವು ಮತ್ತಷ್ಟು ಬಲಿಷ್ಠವಾಗಲಿದೆ.
ಇಂಗ್ಲೆಂಡ್ ಕ್ರಿಕೆಟ್ ತಂಡವು ಇದೀಗ ಕಾಂಗರೂ ನಾಡಿನತ್ತ ಪ್ರಯಾಣ ಬೆಳೆಸಿದ್ದು, ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ಎದುರು 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.