
ಹರಾರೆ(ಜು.07): ಬಸ್ ಡಿ ಲೀಡೆ ಅವರ ಆಲ್ರೌಂಡ್ ಆಟದ ನೆರವಿನಿಂದ ನೆದರ್‌ಲೆಂಡ್ಸ್ 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ಪ್ರವೇಶ ಪಡೆದಿದೆ. ಗುರುವಾರ ನಡೆದ ಅರ್ಹತಾ ಸುತ್ತಿನ ಸೂಪರ್-6 ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ನೆದರ್‌ಲೆಂಡ್ಸ್ 4 ವಿಕೆಟ್ ರೋಚಕ ಗೆಲುವು ಸಾಧಿಸಿತು. ಜಿಂಬಾಬ್ವೆಗೆ ಆಘಾತ ನೀಡಿದ್ದ ಸ್ಕಾಟ್ಲೆಂಡ್ ವಿಶ್ವಕಪ್‌ಗೆ ಪ್ರವೇಶ ಪಡೆಯುವ ನೆಚ್ಚಿನ ತಂಡವೆನಿಸಿತ್ತು. ಆದರೆ ಡಚ್ ಪಡೆ ತನ್ನ ಆಕ್ರಮಣಕಾರಿ ಆಟದ ಮೂಲಕ ಅಚ್ಚರಿ ಮೂಡಿಸಿತು.
ಸೂಪರ್-6 ಹಂತದಲ್ಲಿ ಎರಡೂ ತಂಡಗಳಿಗೆ ಇದು ಕೊನೆಯ ಪಂದ್ಯವಾಗಿತ್ತು. ಈ ಪಂದ್ಯಕ್ಕೂ ಮುನ್ನ ಸ್ಕಾಟ್ಲೆಂಡ್ 6 ಅಂಕ ಹೊಂದಿದ್ದರೆ, ನೆದರ್‌ಲೆಂಡ್ಸ್ 4 ಅಂಕದೊಂದಿಗೆ 3ನೇ ಸ್ಥಾನದಲ್ಲಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ಬ್ರೆಂಡನ್ ಮೆಕ್‌ಮ್ಯುಲನ್(106)ರ ಶತಕದ ನೆರವಿನಿಂದ 50 ಓವರಲ್ಲಿ 9 ವಿಕೆಟ್‌ಗೆ 277 ರನ್ ಕಲೆಹಾಕಿತು. ಡಿ ಲೀಡೆ 52 ರನ್‌ಗೆ 5 ವಿಕೆಟ್ ಕಿತ್ತರು.
ಜಿಂಬಾಬ್ವೆ ವಿಶ್ವಕಪ್ ಕನಸನ್ನು ಛಿದ್ರಗೊಳಿಸಿದ ಸ್ಕಾಟ್ಲೆಂಡ್..! ಪ್ರಧಾನ ಸುತ್ತಿಗೇರುವ 10ನೇ ತಂಡ ಯಾವುದು..?:
ನೆದರ್‌ಲೆಂಡ್ಸ್ ನೆಟ್ ರನ್‌ರೇಟ್ ಆಧಾರದಲ್ಲಿ ಸ್ಕಾಟ್ಲೆಂಡನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಬೇಕಿದ್ದರೆ 278 ರನ್ ಗುರಿಯನ್ನು 44 ಓವರಲ್ಲಿ ಬೆನ್ನತ್ತಬೇಕಿತ್ತು. 40 ಓವರ್ ಅಂತ್ಯಕ್ಕೆ 233 ರನ್ ಗಳಿಸಿದ್ದ ಡಚ್, ವಿಶ್ವಕಪ್‌ಗೆ ಪ್ರವೇಶಿಸಬೇಕಿದ್ದರೆ 4 ಓವರಲ್ಲಿ 45 ರನ್ ಗಳಿಸಬೇಕಿತ್ತು. 41ನೇ ಓವರಲ್ಲಿ 22 ರನ್ ಚಚ್ಚಿದ ಡಚ್, 42ನೇ ಓವರಲ್ಲಿ 20 ರನ್ ಸಿಡಿಸಿತು. 42.5 ಓವರಲ್ಲಿ 6 ವಿಕೆಟ್ ಕಳೆದುಕೊಂಡು 278 ರನ್ ಕಲೆಹಾಕಿತು. ಡಿ ಲೀಡೆ 92 ಎಸೆತದಲ್ಲಿ 7 ಬೌಂಡರಿ, 5 ಸಿಕ್ಸರ್‌ನೊಂದಿಗೆ 123 ರನ್ ಚಚ್ಚಿದರು.
ಸ್ಕೋರ್:
ಸ್ಕಾಟ್ಲೆಂಡ್ 50 ಓವರಲ್ಲಿ 277/9(ಮೆಕ್‌ಮ್ಯುಲನ್ 106, ಬೆರಿಂಗ್ಟನ್ 64, ಲೀಡೆ 5-52)
ನೆದರ್‌ಲೆಂಡ್ಸ್ 42.5 ಓವರಲ್ಲಿ 278/6(ಲೀಡೆ 123, ವಿಕ್ರಮ್‌ಜಿತ್ 40, ಲೀಸ್ಕ್ 2-42)
ಬೆಂಗಳೂರಲ್ಲಿ ನಡೆಯಲಿದೆ ಭಾರತ-ನೆದರ್‌ಲೆಂಡ್ಸ್
ನೆದರ್‌ಲೆಂಡ್ಸ್ ಹಾಗೂ ಶ್ರೀಲಂಕಾ ಅರ್ಹತಾ ಸುತ್ತಿನ ಫೈನಲ್‌ನಲ್ಲಿ ಸೆಣಸಲಿವೆ. ಶ್ರೀಲಂಕಾ ಕ್ವಾಲಿಫೈಯರ್-2 ಆಗಿ ವಿಶ್ವಕಪ್‌ನಲ್ಲಿ ಆಡಲಿದ್ದು, ನೆದರ್‌ಲೆಂಡ್ಸ್‌ಗೆ ಕ್ವಾಲಿಫೈಯರ್-1 ಸ್ಥಾನ ಸಿಕ್ಕಿದೆ. ನವೆಂಬರ್ 11ರಂದು ಬೆಂಗಳೂರಲ್ಲಿ ಭಾರತ ಹಾಗೂ ನೆದರ್‌ಲೆಂಡ್ಸ್ ಮುಖಾಮುಖಿಯಾಗಲಿವೆ.
ಆ್ಯಷಸ್ ಟೆಸ್ಟ್: ಮಾರ್ಷ್ ಶತಕದ ಹೊರತಾಗಿಯೂ ಆಸೀಸ್ 263 ರನ್‌ಗೆ ಆಲೌಟ್
ಲೀಡ್ಸ್: ಮಿಚೆಲ್ ಮಾರ್ಷ್ ಸ್ಫೋಟಕ ಶತಕದ ಹೊರತಾಗಿಯೂ ಮಾರ್ಕ್ ವುಡ್‌ರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಸರಣಿಯ 3ನೇ ಪಂದ್ಯದಲ್ಲಿ 263 ರನ್‌ಗೆ ಆಲೌಟಾಗಿದೆ.
ಆಸೀಸ್ ಭೋಜನ ವಿರಾಮಕ್ಕೂ ಮುನ್ನವೇ 85 ರನ್‌ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ವಾರ್ನರ್(04), ಖವಾಜ(13), ಲಬುಶೇನ್(21) ಸ್ಟೀವ್ ಸ್ಮಿತ್(22) ಬೇಗನೇ ನಿರ್ಗಮಿಸಿದರು. ಆದರೆ ಮಾರ್ಷ್ 118 ಎಸೆತಗಳಲ್ಲಿ 17 ಬೌಂಡರಿ, 4 ಸಿಕ್ಸರ್‌ನೊಂದಿಗೆ 118 ರನ್ ಸಿಡಿಸಿ ತಂಡವನ್ನು ಕಾಪಾಡಿದರು. ಹೆಡ್ 39 ರನ್ ಕೊಡುಗೆ ನೀಡಿದರು. ಆಸೀಸ್ 23 ರನ್‌ಗೆ ಕೊನೆಯ 6 ವಿಕೆಟ್ ಕಳೆದುಕೊಂಡಿತು. ವುಡ್ 5, ಕ್ರಿಸ್ ವೋಕ್ಸ್ 3 ವಿಕೆಟ್ ಕಿತ್ತರು.
ಸ್ಮಿತ್‌ಗೆ 100ನೇ ಪಂದ್ಯ: ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ 100ನೇ ಟೆಸ್ಟ್ ಪಂದ್ಯ ಆಡುತ್ತಿದ್ದು, ಈ ಮೈಲಿಗಲ್ಲು ಸಾಧಿಸಿದ ಆಸ್ಟ್ರೇಲಿಯಾದ 15ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.