ಆಫ್ಘಾನಿಸ್ತಾನ ಎದುರು ಭಾರೀ ಅಂತರದ ಟೆಸ್ಟ್ ಗೆಲುವು ಸಾಧಿಸಿದ ಬಾಂಗ್ಲಾದೇಶ
ತವರಿನಲ್ಲಿ 546 ರನ್ ಅಂತರದಲ್ಲಿ ಆಫ್ಘಾನ್ ತಂಡವನ್ನು ಮಣಿಸಿದ ಬಾಂಗ್ಲಾದೇಶ
ಎರಡೂ ಇನಿಂಗ್ಸ್‌ನಲ್ಲೂ ಶತಕ ಸಿಡಿಸಿದ ನಜ್ಮುಲ್ ಹೊಸೈನ್ ಶಾಂಟೋ
ಢಾಕಾ(ಜೂ.17): ಟಸ್ಕಿನ್ ಅಹಮ್ಮದ್, ಎಬೊದತ್ ಹೊಸೈನ್ ಮಾರಕ ದಾಳಿ ಹಾಗೂ ನಜ್ಮುಲ್ ಹೊಸೈನ್ ಶಾಂಟೋ ಮತ್ತು ಮೊಮಿನುಲ್ ಹಕ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಆಫ್ಘಾನಿಸ್ತಾನ ಎದುರು ಬಾಂಗ್ಲಾದೇಶ ತಂಡವು 546 ರನ್‌ಗಳ ಭಾರೀ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ 21ನೇ ಶತಮಾನದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿದೊಡ್ಡ ಅಂತರದ ಗೆಲುವು ದಾಖಲಿಸಿದ ತಂಡ ಎನ್ನುವ ಹೆಗ್ಗಳಿಕೆಗೆ ಬಾಂಗ್ಲಾದೇಶ ಪಾತ್ರವಾಗಿದೆ. ಈ ಮೊದಲು 1934ರಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಎದುರು 562 ರನ್ ಅಂತರದ ಗೆಲುವು ಸಾಧಿಸಿತ್ತು. ಇದು 20ನೇ ಶತಮಾನದಲ್ಲಿ ದಾಖಲಾದ ಅತಿದೊಡ್ಡ ಅಂತರದ ಗೆಲುವು ಎನಿಸಿಕೊಂಡಿತ್ತು.
ಗೆಲ್ಲಲು 662 ರನ್‌ಗಳ ಅಂತರದ ಬೃಹತ್ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು ವೇಗಿ ಟಸ್ಕಿನ್ ಅಹಮ್ಮದ್ ಹಾಗೂ ಶೌರಿಫುಲ್ ಹಸನ್ ಮಾರಕ ದಾಳಿಗೆ ತತ್ತರಿಸಿ ಕೇವಲ 115 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಬಾಂಗ್ಲಾದೇಶ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವು ಹೀನಾಯ ಸೋಲು ಅನುಭವಿಸಿತು.
ನಜ್ಮುಲ್ ಹೊಸೈನ್ ಶಾಂಟೋ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ 146 ರನ್ ಸಿಡಿಸಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲೂ ಶಾಂಟೋ ಚುರುಕಿನ ಶತಕ ಸಿಡಿಸಿದರು. ನಜ್ಮುಲ್ ಹೊಸೈನ್ ಶಾಂಟೋ ಕೇವಲ 151 ಎಸೆತಗಳನ್ನು ಎದುರಿಸಿ 15 ಬೌಂಡರಿ ಸಹಿತ 124 ರನ್ ಸಿಡಿಸಿದರೆ, ಮತ್ತೊಂದು ತುದಿಯಲ್ಲಿ ಮೊಮಿನುಲ್ ಹಕ್ 145 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 121 ರನ್ ಸಿಡಿಸಿದರು. ಹೀಗಾಗಿ ಬಾಂಗ್ಲಾದೇಶ ತಂಡವು ಶುಕ್ರವಾರದ ಮೂರನೇ ಸೆಷನ್ ವೇಳೆಗೆ 4 ವಿಕೆಟ್ ನಷ್ಟಕ್ಕೆ 425 ರನ್ ಗಳಿಸಿ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
Bangladesh seal a comprehensive win in Mirpur 👏 | 📝 Scorecard: https://t.co/0LTkGZpTAI pic.twitter.com/hJGolEvlqn
— ICC (@ICC)ಇನ್ನು ಬೃಹತ್ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು ಶುಕ್ರವಾರದಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 45 ರನ್ ಬಾರಿಸಿತ್ತು. ಇನ್ನು ಶನಿವಾರದ ಮೊದಲ ಸೆಷನ್‌ನಲ್ಲಿಯೇ ಬಾಂಗ್ಲಾದೇಶ ದಾಳಿಗೆ ತತ್ತರಿಸಿದ ಆಫ್ಘಾನಿಸ್ತಾನ ತಂಡವು ಕನಿಷ್ಠ ಪ್ರತಿರೋಧವನ್ನು ತೋರದೆ ಸೋಲೊಪ್ಪಿಕೊಂಡಿತು.
ಈ ಕನ್ನಡಿಗನನ್ನು CSK ತಂಡದೊಳಗೆ ಆಡಿಸಲು ಧೋನಿಗೆ ಪರ್ಮಿಷನ್ ಕೊಟ್ಟಿದ್ದೇ ಸುರೇಶ್ ರೈನಾ..!
ಬಾಂಗ್ಲಾದೇಶ ಪರ ಎಬೊದತ್ ಹೊಸೈನ್ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಉರುಳಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ ಟಸ್ಕಿನ್ ಅಹಮ್ಮದ್ 37 ರನ್ ನೀಡಿ 4 ವಿಕೆಟ್ ಪಡೆದರೆ, ಶೌರಿಫುಲ್ಲಾ ಇಸ್ಲಾಂ 28 ರನ್ ನೀಡಿ 3 ಬಲಿ ಪಡೆದರು. ಎರಡೂ ಇನಿಂಗ್ಸ್‌ನಲ್ಲೂ ಆಕರ್ಷಕ ಶತಕ ಸಿಡಿಸಿದ ನಜ್ಮುಲ್ ಹೊಸೈನ್ ಶಾಂಟೋ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯ ಮುಕ್ತಾಯವಾಗಿದ್ದು,. ಇದೀಗ ಉಭಯ ತಂಡಗಳು ಸೀಮಿತ ಓವರ್‌ಗಳ ಸರಣಿಯತ್ತ ಗಮನ ಹರಿಸಿವೆ. ಜುಲೈ 05ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಜುಲೈ 14ರಿಂದ ಎರಡು ಪಂದ್ಯಗಳ ಟಿ20 ಸರಣಿಯನ್ನಾಡಲಿವೆ.