* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭ
* ಸಿರಾಜ್ ಪರ ಬ್ಯಾಟ್ ಬೀಸಿದ ಹರ್ಭಜನ್ ಸಿಂಗ್
* ಇಶಾಂತ್ ಶರ್ಮಾ ಬದಲಿಗೆ ಸಿರಾಜ್‌ಗೆ ಅವಕಾಶ ನೀಡುವುದು ಉತ್ತಮ ಎಂದ ಭಜ್ಜಿ
ನವದೆಹಲಿ(ಜೂ.11): ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಬೌಲಿಂಗ್ ಕೌಶಲ್ಯಗಳನ್ನು ಅತ್ಯುತ್ತಮವಾಗಿ ಮೈಗೂಡಿಸಿಕೊಂಡಿದ್ದು, ನ್ಯೂಜಿಲೆಂಡ್ ವಿರುದ್ದ ಜೂನ್ 18ರಿಂದ ಆರಂಭವಾಗಲಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಬೇಕು ಎಂದು ಅನುಭವಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮದವರು, ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಕಾಂಬಿನೇಷನ್ ಹೇಗಿರಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಹರ್ಭಜನ್ ಸಿಂಗ್, ''ಒಂದು ವೇಳೆ ನಾನೇ ನಾಯಕನಾಗಿದ್ದರೆ, ನಾನು ಮೂವರು ಅಪ್ಪಟ ವೇಗಿಗಳೊಂದಿಗೆ ಕಣಕ್ಕಿಳಿಯುತ್ತೇನೆ. ಹೀಗಾದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಇಬ್ಬರು ಮೊದಲ ಆಯ್ಕೆಯಾದರೆ, ಮೂರನೇ ಆಯ್ಕೆಯಾಗಿ ಇಶಾಂತ್ ಶರ್ಮಾ ಬದಲಿಗೆ ಮೊಹಮ್ಮದ್ ಸಿರಾಜ್ ಅವರಿಗೆ ಸ್ಥಾನ ನೀಡುತ್ತೇನೆ ಎಂದಿದ್ದಾರೆ.
ಇಶಾಂತ್ ಶರ್ಮಾ ಅವರೊಬ್ಬ ಅದ್ಭುತ ಬೌಲರ್, ಆದರೆ ಈ ಫೈನಲ್ ಪಂದ್ಯಕ್ಕೆ ನನ್ನ ಆಯ್ಕೆ ಮೊಹಮ್ಮದ್ ಸಿರಾಜ್. ಯಾಕೆಂದರೆ ಮೊಹಮ್ಮದ್ ಸಿರಾಜ್ ಕಳೆದೆರಡು ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯನ್ನು ಕಂಡಿದ್ದಾರೆ ಎಂದು ಭಜ್ಜಿ ಹೇಳಿದ್ದಾರೆ. ಈ ಮೊದಲು ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಸಹಾ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಪಡೆಗೆ ಮೊಹಮ್ಮದ್ ಸಿರಾಜ್ ಆಸರೆಯಾಗಬಲ್ಲರು ಎಂದಿದ್ದರು.
ಸಿರಾಜ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸರೆಯಾಗಬಲ್ಲರು: ಜಿ. ಆರ್ ವಿಶ್ವನಾಥ್
ಸದ್ಯದ ಲೆಕ್ಕಾಚಾರವನ್ನು ಗಮನಿಸಿದರೆ, ಸಿರಾಜ್ ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿದ್ದಾರೆ. ಕಳೆದ ಆರು ತಿಂಗಳಿನಲ್ಲಿ ಸಿಕ್ಕ ಅವಕಾಶವನ್ನು ಭರಪೂರವಾಗಿ ಬಳಸಿಕೊಂಡಿದ್ದಾರೆ. ಹೀಗಾಗಿ ಸಿರಾಜ್‌ಗೆ ಫೈನಲ್ ಪಂದ್ಯಕ್ಕೆ ಅವಕಾಶ ನೀಡುವುದು ಸರಿಯಾದ ನಿರ್ಧಾರವಾಗಲಿದೆ. ಇಶಾಂತ್ ಗಾಯದ ಸಮಸ್ಯೆಯ ಬಳಿಕ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇಶಾಂತ್ ಶರ್ಮಾ ಭಾರತ ಕ್ರಿಕೆಟ್ ತಂಡಕ್ಕೆ ಉತ್ತಮ ಸೇವೆ ಸಲ್ಲಿಸಿರುವುದರ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಭಾರತ ಪರ 103 ಟೆಸ್ಟ್ ಪಂದ್ಯಗಳನ್ನಾಡಿರುವ ಭಜ್ಜಿ ಹೇಳಿದ್ದಾರೆ.