ವಿಶ್ವಕಪ್‌ಗೆ 3 ತಿಂಗಳಿರುವಾಗಲೇ ಕಣ್ಣೀರಿಟ್ಟು ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಾಂಗ್ಲಾ ನಾಯಕ ತಮೀಮ್ ಇಕ್ಬಾಲ್‌..!

By Naveen KodaseFirst Published Jul 7, 2023, 9:47 AM IST
Highlights

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ತಮೀಮ್ ಇಕ್ಬಾಲ್
ತಮೀಮ್ ಇಕ್ಬಾಲ್ ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡದ ನಾಯಕ
ಕಣ್ಣೀರಿಡುತ್ತಲೇ ವಿದಾಯ ಘೋಷಿಸಿದ ತಮೀಮ್ ಇಕ್ಬಾಲ್

ಢಾಕಾ(ಜು.07): ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 05ರಿಂದ ವಿಶ್ವಕಪ್ ಮಹಾಸಂಗ್ರಾಮಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಧಿಕೃತ ಚಾಲನೆ ಸಿಗಲಿದೆ. ಇನ್ನು ವಿಶ್ವಕಪ್ ಆರಂಭಕ್ಕೆ ಕೇವಲ ಮೂರು ತಿಂಗಳು ಬಾಕಿ ಇರುವಾಗಲೇ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಾಂಗ್ಲಾದೇಶ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್‌ ದಿಢೀರ್ ಎನ್ನುವಂತೆ ಗುರುವಾರ(ಜು.06) ತಕ್ಷಣದಿಂದಲೇ ಜಾರಿಯಾಗುವಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

34 ವರ್ಷದ ಅನುಭವಿ ಆರಂಭಿಕ ಬ್ಯಾಟರ್ ತಮೀಮ್ ಇಕ್ಬಾಲ್ (Tamim Iqbal) ಅವರು ಆಫ್ಘಾನಿಸ್ತಾನ ಎದುರಿನ ಮೊದಲ ಏಕದಿನ ಪಂದ್ಯ ಸೋಲಿನ ಬೆನ್ನಲ್ಲೇ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಡುತ್ತಲೇ ತಮ್ಮ ನಿವೃತ್ತಿ ನಿರ್ಧಾರ ( Tamim Iqbal Retirement) ಪ್ರಕಟಿಸಿದ್ದಾರೆ. "ಇಂದಿಗೆ ನನ್ನ ಪಯಣ ಮುಗಿಯಿತು. ನನ್ನಿಂದ ಎಷ್ಟು ಅತ್ಯುತ್ತಮವಾದದ್ದು ನೀಡಲು ಸಾಧ್ಯವೋ ಅದನ್ನು ಮಾಡಿದ್ದೇನೆ. ಈ ಕ್ಷಣದಿಂದಲೇ ಜಾರಿಯಾಗುವಂತೆ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ" ಎಂದು ತಮೀಮ್ ಇಕ್ಬಾಲ್ ಹೇಳಿದ್ದಾರೆ. 

"ಈ ಸಂದರ್ಭದಲ್ಲಿ ನನ್ನೆಲ್ಲ ತಂಡದ ಸದಸ್ಯರಿಗೆ, ಕೋಚ್‌ಗಳಿಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಅಧಿಕಾರಿಗಳಿಗೆ, ನನ್ನ ಕುಟುಂಬಸ್ಥರಿಗೆ ಹಾಗೂ ನನ್ನ ಪಯಣದುದ್ದಕ್ಕೂ ನನ್ನ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿಕೊಂಡು ಬಂದ ನನ್ನೆಲ್ಲ ಅಭಿಮಾನಿಗಳಿಗೂ ಈ ಸಂದರ್ಭದಲ್ಲಿ ಧನ್ಯವಾದಗಳು ಹೇಳುತ್ತೇನೆ ಎಂದು ಕಣ್ಣೀರಿಡುತ್ತಲ್ಲೇ ತಮೀಮ್ ಇಕ್ಬಾಲ್ ವಿದಾಯ ಘೋಷಿಸಿದ್ದಾರೆ.

Seeing Tamim Iqbal crying broke my heart.But I must say it was a timely decision.He always said he wanted the best for the team.His announcement of retirement rather than prioritizing the big event like the World Cup is proof of wanting the best of the team.A legend of Bangladesh pic.twitter.com/lXK3CtYYkF

— Samiul Alam Sami (@SsSamiulSami73)

ಸ್ಪೋಟಕ ಎಡಗೈ ಆರಂಭಿಕ ಬ್ಯಾಟರ್ ಆಗಿದ್ದ ತಮೀಮ್ ಇಕ್ಬಾಲ್‌, ಬಾಂಗ್ಲಾದೇಶ ತಂಡದ (Bangladesh Cricket Team) ಪರ 70 ಟೆಸ್ಟ್, 241 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತಮೀಮ್ ಇಕ್ಬಾಲ್‌ 10 ಶತಕ ಹಾಗೂ 31 ಅರ್ಧಶತಕ ಸಹಿತ 5,134 ರನ್ ಬಾರಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 14 ಶತಕ ಹಾಗೂ 56 ಅರ್ಧಶತಕ ಸಹಿತ 8,313 ರನ್‌ ಸಿಡಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ಒಂದು ಶತಕ ಹಾಗೂ 7 ಅರ್ಧಶತಕ ಸಹಿತ 1,758 ರನ್‌ ಬಾರಿಸಿದ್ದಾರೆ.

ಏಕದಿನ ವಿಶ್ವಕಪ್‌ಗೆ ನೆದರ್‌ಲೆಂಡ್ಸ್‌ ಲಗ್ಗೆ..! ಬೆಂಗಳೂರಲ್ಲಿ ಭಾರತದ ಜತೆ ಫೈಟ್‌ 

2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ತಮೀಮ್ ಇಕ್ಬಾಲ್‌, ಒಟ್ಟಾರೆ 25 ಶತಕ ಹಾಗೂ 94 ಅರ್ಧಶತಕ ಸಹಿತ 15,000ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ಸಕ್ರಿಯ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಳಿಕ ತಮೀಮ್ ಇಕ್ಬಾಲ್ ಮೂರನೇ ಸ್ಥಾನದಲ್ಲಿದ್ದರು. ತಮೀಮ್ ಇಕ್ಬಾಲ್‌ ಕಳೆದ ವರ್ಷ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇನ್ನು ಕಳೆದ ವರ್ಷದ ಏಪ್ರಿಲ್‌ನಲ್ಲಿ ಐರ್ಲೆಂಡ್ ಎದುರು ತಮೀಮ್ ಇಕ್ಬಾಲ್‌ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು.

ತಮೀಮ್ ಇಕ್ಬಾಲ್ ನೇತೃತ್ವದ ಬಾಂಗ್ಲಾದೇಶ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾದಂತಹ ಮಾಜಿ ಚಾಂಪಿಯನ್ ತಂಡಗಳನ್ನು ಹಿಂದಿಕ್ಕಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿತ್ತು. ಇದೀಗ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ತಮೀಮ್ ಇಕ್ಬಾಲ್‌ ದಿಢೀರ್ ವಿದಾಯ ಘೋಷಿಸಿರುವುದು ತಂಡಕ್ಕೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ. ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ತಮೀಮ್ ಇಕ್ಬಾಲ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವುದರಿಂದ, ಬಾಂಗ್ಲಾದೇಶ ತಂಡದ ಏಕದಿನ ನಾಯಕ ಪಟ್ಟ ಯಾರ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

click me!