ಪ್ಯಾಟ್ ಕಮಿನ್ಸ್ ಪಾಲಿನ ಕಠಿಣ ಬ್ಯಾಟ್ಸ್‌ಮನ್‌ ಈ ಭಾರತೀಯನಂತೆ..!

By Suvarna NewsFirst Published Apr 27, 2020, 10:02 AM IST
Highlights

ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ತಮ್ಮ ಪಾಲಿನ ಕಠಿಣ ಎದುರಾಳಿ ಬ್ಯಾಟ್ಸ್‌ಮನ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಆ ಬ್ಯಾಟ್ಸ್‌ಮನ್ ಭಾರತೀಯನಂತೆ. ವಿರಾಟ್ ಕೊಹ್ಲಿ ಅಂದುಕೊಂಡರೆ ನಿಮ್ಮ ಊಹೆ ತಪ್ಪು..! ಅಷ್ಟಕ್ಕೂ ಯಾರು ಆ ಬ್ಯಾಟ್ಸ್‌ಮನ್ ಎನ್ನುವುದನ್ನು ನೀವೇ ನೋಡಿ. 

ಮೆಲ್ಬರ್ನ್(ಏ.27)‌: ಭಾರತದ ಟೆಸ್ಟ್‌ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ ಎದುರು ಬೌಲಿಂಗ್‌ ಮಾಡುವುದು ಕಷ್ಟ ಎಂದು ವಿಶ್ವ ಟೆಸ್ಟ್‌ನ ನಂ.1 ಬೌಲರ್‌ ಆಸ್ಪ್ರೇಲಿಯಾದ ಪ್ಯಾಟ್‌ ಕಮಿನ್ಸ್‌ ಹೇಳಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಪೂಜಾರ ವಿಕೆಟ್‌ ಪಡೆಯುವುದು ಅತ್ಯಂತ ಕಠಿಣ ಎಂದು ಹೇಳಿದ್ದಾರೆ.

3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಪೂಜಾರ ತಂಡದ ಬ್ಯಾಟಿಂಗ್‌ ಆಧಾರವಾಗಿದ್ದಾರೆ. 2018-19ರ ಐತಿಹಾಸಿಕ ಸರಣಿ ಜಯದಲ್ಲಿ ಪೂಜಾರ ಮಹತ್ವದ ಪಾತ್ರವಹಿಸಿದ್ದರು. ಆಸ್ಪ್ರೇಲಿಯಾ ಕ್ರಿಕೆಟಿಗರ ಸಂಘ ಏರ್ಪಡಿಸಿದ್ದ ವಿಡಿಯೋ ಕಾರ‍್ಯಕ್ರಮದಲ್ಲಿ ಕಮಿನ್ಸ್‌ ಪೂಜಾರ ಬಗ್ಗೆ ಮಾತನಾಡಿದ್ದಾರೆ.

ನಿಮ್ಮ ಪ್ರಕಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವ ಬ್ಯಾಟ್ಸ್‌ಮನ್‌ಗೆ ಬೌಲಿಂಗ್ ಮಾಡುವುದು ಕಷ್ಟ ಎನ್ನುವ ಕಮಿನ್ಸ್ ಪ್ರಶ್ನೆಗೆ, ಅಂತಹ ಸಾಕಷ್ಟು ಆಟಗಾರರಿದ್ದಾರೆ. ಅವರಲ್ಲೇ ಅತಿ ಕಠಿಣ ಬ್ಯಾಟ್ಸ್‌ಮನ್ ಎಂದರೆ ಅದು ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ. 2018-19ನೇ ಸಾಲಿನ ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ನಡುವಿನ ಟೂರ್ನಿಯಲ್ಲಿ ಪೂಜಾರ ಅಕ್ಷರಶಃ ಕಲ್ಲುಬಂಡೆಯಂತೆ ನಿಂತಿದ್ದರು. ಅವರನ್ನು ಔಟ್ ಮಾಡುವುದು ಕಷ್ಟದ ಕೆಲಸವಾಗಿತ್ತು ಎಂದು ಹೇಳಿದ್ದಾರೆ. 

ಭಾರತ-ಆಸೀಸ್‌ ಟೆಸ್ಟ್‌ ಸರಣಿಯಲ್ಲಿ 5 ಪಂದ್ಯ?

ಆ ಬಾರ್ಡರ್‌-ಗವಾಸ್ಕರ್ ಟೂರ್ನಿಯಲ್ಲಿ ಚೇತೇಶ್ವರ್ ಪೂಜಾರ 7 ಇನಿಂಗ್ಸ್‌ಗಳಲ್ಲಿ 74.42 ಸರಾಸರಿಯಲ್ಲಿ 521 ರನ್ ಬಾರಿಸಿದ್ದರು. ಪೂಜಾರ ಹಾಗೂ ತಂಡದ ಸಂಘಟಿತ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಚೊಚ್ಚಲ ಬಾರಿಗೆ ಟೆಸ್ಟ್ ಸರಣಿ ಗೆದ್ದು ಬೀಗಿತ್ತು. ಇದರಲ್ಲಿ 3 ಶತಕಗಳು ಪೂಜಾರ ಪಾಲಾಗಿದ್ದವು, ಅಲ್ಲದೇ ಸರಣಿಯ ಗರಿಷ್ಠ ರನ್ ಸರದಾರರಾಗಿಯೂ ಹೊರಹೊಮ್ಮಿದ್ದರು. 

ಕಮಿನ್ಸ್ 2011ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರಾದರೂ ಗಾಯದ ಸಮಸ್ಯೆಯಿಂದಾಗಿ ಹಲವು ಬಾರಿ ಹೊರಬಿದ್ದಿದ್ದಾರೆ.ಆದರೆ 2018-19ರ ಬಳಿಕ ಭರ್ಜರಿಯಾಗಿಯೇ ಮಿಂಚುತ್ತಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ 14 ವಿಕೆಟ್ ಪಡೆದಿದ್ದರು. ಇದಾದ ಬಳಿಕ ಕಮಿನ್ಸ್ ಹಿಂತಿರುಗಿ ನೋಡಲೇ ಇಲ್ಲ. 2019ರ ಫೆಬ್ರವರಿಯಿಂದ ಟೆಸ್ಟ್ ನಂ.1 ಬೌಲರ್‌ ಸ್ಥಾನವನ್ನು ಉಳಿಸಿಕೊಂಡು ಬಂದಿದ್ದಾರೆ.   

click me!