Leaked chat: ಆಸ್ಟ್ರೇಲಿಯಾ ಕ್ರಿಕೆಟರ್ ಕೊಕೇನ್‌ ಡ್ರಗ್ಸ್‌ ಬಳಸುತ್ತಿದ್ರಾ..? ಫೋನ್ ಕಾಲ್ ಆಡಿಯೋ ಲೀಕ್

By Suvarna NewsFirst Published Dec 26, 2021, 12:27 PM IST
Highlights

* ಆಸ್ಟ್ರೇಲಿಯಾ ಕ್ರಿಕೆಟ್‌ ವಲಯದಲ್ಲಿ ಸಂಚಲನ ಮೂಡಿಸಿದ ಆಡಿಯೋ ಲೀಕ್ ಪ್ರಕರಣ

* ಆಸ್ಟ್ರೇಲಿಯಾ ಕ್ರಿಕೆಟಿಗರು ಕೊಕೇನ್ ಡ್ರಗ್ಸ್‌ ಸೇವಿಸುತ್ತಿದ್ದರಾ ಎನ್ನುವ ಅನುಮಾನ

* ಲೀಕ್ ವಿಚಾರ ಪತ್ತೆಹಚ್ಚಲು ಪೊಲೀಸರ ಮೊರೆ ಹೋದ ಕ್ರಿಕೆಟ್ ಅಸ್ಟ್ರೇಲಿಯಾ

ಸಿಡ್ನಿ(ಡಿ.26): ಆಟಗಾರರ ಡ್ರಗ್ಸ್‌ ಬಳಕೆ ಕುರಿತಂತೆ ಭ್ರಷ್ಟಾಚಾರ ನಿಗ್ರಹ ಘಟಕ (anti corruption unit) ನೀಡಿದ್ದ ಗೌಪ್ಯ ವರದಿ ಮಾಧ್ಯಮಗಳಲ್ಲಿ ಲೀಕ್ ಆಗಿರುವ ಸಂಗತಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾದ (Cricket Australia) ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ನಿಕ್‌ ಹಾಕ್ಲೆ (Nick Hockley) ಒಪ್ಪಿಕೊಂಡಿದ್ದಾರೆ. ಈ ಗೌಪ್ಯ ವರದಿ ಲೀಕ್ ಆಗಿದ್ದು ಹೇಗೆ ಎನ್ನುವುದನ್ನು ಪತ್ತೆಹಚ್ಚಲು ಪೊಲೀಸರ ಮೊರೆ ಹೋಗಿರುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯ ಸಿಇಒ ನಿಕ್‌ ಹಾಕ್ಲೆ ತಿಳಿಸಿದ್ದಾರೆ. 

ಮೆಲ್ಬೊರ್ನ್‌ನ The Age ನ್ಯೂಸ್ ಪೇಪರ್ ಭಾನುವಾರವಷ್ಟೇ ಒಂದು ವರದಿಯನ್ನು ಪ್ರಕಟಿಸಿದ್ದು, ನಮಗೆ ಕ್ರಿಕೆಟ್ ಆಸ್ಟ್ರೇಲಿಯಾದ ಮಾಜಿ ಇಂಟಿಗ್ರಿಟಿ ಚೀಫ್ ಸೀನ್ ಕಾರೊಲ್ (Sean Carroll) ಹಾಗೂ ಮಹಿಳೆಯೊಬ್ಬರು ಫೋನ್‌ನಲ್ಲಿ ಮಾತನಾಡಿದ ಆಡಿಯೋ ಕ್ಲಿಪ್ ಲಭ್ಯವಾಗಿದ್ದು, ಅದರಲ್ಲಿ ಮಹಿಳೆಯು, ಆಸ್ಟ್ರೇಲಿಯಾದ ಆಟಗಾರರು ಕೊಕೇನ್ ಡ್ರಗ್ಸ್‌(Cocaine Drugs) ಸೇವಿಸಿರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿ ಮಾಡಿದೆ.

ಮಹಿಳೆಯು ತಾವೊಬ್ಬರು ಪ್ರತಿಷ್ಠಿತ ವ್ಯಕ್ತಿಯ ಬೆಂಗಾವಲು ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದು, ಗುರುತಿಗೆ ಸಿಗದ ಆಟಗಾರನೊಬ್ಬ ಪಾರ್ಟಿಯೊಂದರಲ್ಲಿ ಕೊಕೇನ್ ಡ್ರಗ್ಸ್ ಸೇವಿಸಿ, ಬಾಲ್ಕನಿಯಲ್ಲಿ ಬೆತ್ತಲೆಯಾಗಿ ಡ್ಯಾನ್ಸ್‌ ಮಾಡಿದ್ದನ್ನು ಕಂಡಿದ್ದೇನೆ ಎಂದು ಆಸ್ಟ್ರೇಲಿಯಾದ ಮಾಜಿ ಇಂಟಿಗ್ರಿಟಿ ಚೀಫ್ ಸೀನ್ ಕಾರೊಲ್ ಬಳಿ ಮಾತನಾಡಿದ್ದಾಳೆಂದು ಪತ್ರಿಕೆಯು ವರದಿ ಮಾಡಿದೆ.

ಆಸ್ಟ್ರೇಲಿಯಾದ ಮಾಜಿ ಇಂಟಿಗ್ರಿಟಿ ಚೀಫ್ ಸೀನ್ ಕಾರೊಲ್ ವರ್ಷದ ಹಿಂದಷ್ಟೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ ಈ ದೂರವಾಣಿ ಕರೆಗೆ ಯಾವಗ ನಡೆದದ್ದು ಎನ್ನುವ ಕುರಿತಂತೆ ಮಾಹಿತಿ ಸ್ಪಷ್ಟವಾಗಿಲ್ಲ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ನಿಕ್ ಹಾಕ್ಲೆ, ಮಹಿಳೆಯು ಆರೋಪಿಸಿದ್ದು, ಗತಕಾಲದ್ದು ಹಾಗೂ ಆಧಾರರಹಿತವಾದದ್ದು. ಇದರ ಹೊರತಾಗಿಯೂ ಈ ವಿಚಾರ ಮಾಧ್ಯಮಗಳಿಗೆ ಸೋರಿಕೆ ಆಗಿದ್ದು ಹೇಗೆ ಎನ್ನುವುದರ ಕುರಿತಂತೆ ತನಿಖೆ ನಡೆಸಲು ಪೊಲೀಸರನ್ನು ಸಂಪರ್ಕಿಸಿರುವುದಾಗಿ ತಿಳಿಸಿದ್ದಾರೆ. 

ಯಾವುದೇ ರೀತಿಯ ಗೌಪ್ಯ ಮಾಹಿತಿಗಳನ್ನು ಕದಿಯುವುದು ಅಪರಾಧವೇ ಸರಿ. ಹೀಗಾಗಿ ಈ ಸಂಬಂಧ ಸೂಕ್ತ ತನಿಖೆ ನಡೆಸಲು ವಿಕ್ಟೋರಿಯಾದ ಪೊಲೀಸರಲ್ಲಿ ದೂರು ನೀಡಿರುವುದಾಗಿ ನಿಕ್ ಹಾಕ್ಲೆ ತಿಳಿಸಿದ್ದಾರೆ.

The Age ನ್ಯೂಸ್ ಪೇಪರ್ ತಮಗೆ ಈ ಆಡಿಯೋ ಕ್ಲಿಪ್‌ ಎನ್‌ಕ್ರಿಪ್ಟೆಡ್‌ ಇ-ಮೇಲ್‌ ಮೂಲಕ ಅನಾಮಧೇಯ ವಿಳಾಸದಿಂದ ಬಂದಿರುವುದಾಗಿ ಸ್ಪಷ್ಟನೆ ನೀಡಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಸಮನ್ವಯ ಘಟಕದ ಅವ್ಯವಹಾರವನ್ನು ಬಯಲಿಗೆಳೆಯಲು ಕ್ರಿಕೆಟ್ ಆಸ್ಟ್ರೇಲಿಯಾದ ಸಿಬ್ಬಂದಿಯೇ ಈ ಆಡಿಯೋ ಕ್ಲಿಪ್ ಲೀಕ್‌ ಮಾಡಿರುವ ಸಾಧ್ಯತೆಯಿದೆ ವರದಿಯಾಗಿದೆ.

Sexting Scandal: ಆಸೀಸ್‌ ಟೆಸ್ಟ್ ನಾಯಕತ್ವಕ್ಕೆ ಟಿಮ್ ಪೈನ್‌ ದಿಢೀರ್ ರಾಜೀನಾಮೆ..!

ಕ್ರಿಕೆಟ್ ಅಸ್ಟ್ರೇಲಿಯಾ ಇಂಟಿಗ್ರಿಟಿ ಘಟಕವು ಕಳೆದ ತಿಂಗಳಷ್ಟೇ ಟೆಸ್ಟ್ ತಂಡದ ನಾಯಕರಾಗಿದ್ದ ಟಿಮ್‌ ಪೈನ್(Tim Paine) ಕುರಿತಂತೆ ಆಂತರಿಕ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಇದರ ಬೆನ್ನಲ್ಲೇ ಟಿಮ್ ಪೈನ್ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದರು ಹಾಗೂ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಆಯ್ಕೆಗೂ ಅಲಭ್ಯರಾಗಿದ್ದರು. ಇದಾಗಿ ಒಂದು ತಿಂಗಳ ಬಳಿಕ ಈ ಆಡಿಯೋ ಕ್ಲಿಪ್‌ ಲೀಕ್ ಆಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಮಹಿಳಾ ಸಿಬ್ಬಂದಿಗೆ ಅಶ್ಲೀಲ ಫೋಟೋ ಹಾಗೂ ಸಂದೇಶ ಕಳುಹಿಸಿದ (Sexting Scandal) ಪ್ರಕರಣದ ಬಗ್ಗೆ ಕ್ರಿಕೆಟ್‌ ಆಸ್ಪ್ರೇಲಿಯಾ (Cricket Australia) ತನಿಖೆ ಚುರುಕುಗೊಳಿಸಿದ ಹಿನ್ನೆಲೆಯಲ್ಲಿ ಆಸ್ಪ್ರೇಲಿಯಾ ಟೆಸ್ಟ್‌ ತಂಡದ (Australia Cricket Team) ನಾಯಕತ್ವಕ್ಕೆ ಟಿಮ್‌ ಪೈನ್‌ ರಾಜೀನಾಮೆ ನೀಡಿದ್ದರು. 2017ರಲ್ಲಿ ಟ್ಯಾಸ್ಮೇನಿಯಾ ಕ್ರಿಕೆಟ್‌ನ ಮಹಿಳಾ ಸಿಬ್ಬಂದಿಗೆ ಪೈನ್‌ ಅಶ್ಲೀಲ ಚಿತ್ರ ಹಾಗೂ ಸಂದೇಶ ಕಳುಹಿಸಿದ್ದರು ಎಂದು ಆರೋಪಿಸಲಾಗಿತ್ತು.

click me!