* ಮೇ.04ರಂದು ಹೃದಯಾಘಾತದಿಂದ ಕೊನೆಯುಸಿರೆಳೆದ ಶೇನ್ ವಾರ್ನ್
* ಶೇನ್ ವಾರ್ನ್ ನಿಧನಕ್ಕೆ ನುಡಿನಮನ ಸಲ್ಲಿಸಿದ ಡೇವಿಡ್ ವಾರ್ನರ್
* ಶೇನ್ ವಾರ್ನ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ ಎಡಗೈ ಬ್ಯಾಟರ್
ಮೆಲ್ಬರ್ನ್(ಮಾ.11): ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್(Shane Warne), ಮಾರ್ಚ್ 04, 2022ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಜಗತ್ತಿನ ಪ್ರಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರ ಅಂತ್ಯಕ್ರಿಯೆ ಮಾರ್ಚ್ 30, 2022ರಂದು ನಡೆಯಲಿದೆ. ಶೇನ್ ವಾರ್ನ್ ಅವರ ಅಂತ್ಯಕ್ರಿಯೆ ಕಾರ್ಯಕ್ರಮವು ಮೆಲ್ಬೊರ್ನ್ ಕ್ರಿಕೆಟ್ ಗ್ರೌಂಡ್ ಸಮೀಪ ನಡೆಯಲಿದ್ದು, ಎಂಸಿಜಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ (David Warner), ಶೇನ್ ವಾರ್ನ್ ನಿಧನರಾಗಿರುವ ಶಾಕ್‌ನಿಂದ ಇನ್ನೂ ಹೊರಬಂದಿಲ್ಲ. ಹಾಗೂ ಮೊದಲಿಗೆ ಈ ಸುದ್ದಿ ಕೇಳಿದ ತಕ್ಷಣ ಇದೊಂದು ಜೋಕ್ ಎಂದೇ ಭಾವಿಸಿದ್ದಾಗಿ ತಿಳಿಸಿದ್ದಾರೆ. ಇದೇ ವೇಳೆ ತಾವು ಶೇನ್ ವಾರ್ನ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಾಗಿಯೂ ವಾರ್ನರ್ ತಿಳಿಸಿದ್ದಾರೆ.
ಹಲವರ ಪಾಲಿಗೆ ಇದೊಂದು ರೀತಿಯ ಭಾವನಾತ್ಮಕ ಕ್ಷಣವಾಗಿರಲಿದೆ ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ. ಇದೀಗ ಡೇವಿಡ್ ವಾರ್ನರ್, ಶೇನ್ ವಾರ್ನ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಈ ಬಾರಿ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ನೋವು ಇನ್ನೂ ಮುಗಿದಿಲ್ಲ. ಈ ಸುದ್ದಿಯನ್ನು ಮೊದಲು ಕೇಳಿದಾಗ, ಇದೊಂದು ಜೋಕ್ ಎಂದೇ ಭಾವಿಸಿದ್ದೆ. 100% ನಾನಂತೂ ಶೇನ್ ವಾರ್ನ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆ. ಶೇನ್ ವಾರ್ನ್ ಅವರ ಅಂತ್ಯಕ್ರಿಯೆಯು ಪ್ರತಿಯೊಬ್ಬರ ಪಾಲಿಗೂ ಒಂದು ರೀತಿಯ ಭಾವನಾತ್ಮಕ ಸನ್ನಿವೇಶವಾಗಿರಲಿದೆ. ಖಂಡಿತವಾಗಿಯೂ ಅಪಾರ ಸಂಖ್ಯೆಯಲ್ಲಿ ಜನರು ಅವರಿಗೆ ಅಂತ್ಯಕ್ರಿಯೆ ವೇಳೆ ಗೌರವ ಸೂಚಿಸಲಿದ್ದಾರೆ ಎಂದು ಡೇವಿಡ್ ವಾರ್ನರ್ ಸ್ಪೋರ್ಟ್ಸ್‌ಸ್ಟಾರ್‌ಗೆ ತಿಳಿಸಿದ್ದಾರೆ.
ಶೇನ್ ವಾರ್ನ್ ಜಗತ್ತಿನ ಲಕ್ಷಾಂತರ ಮಂದಿಯನ್ನು ತಲುಪಿದ್ದಾರೆ:
ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್, ಓರ್ವ ಕ್ರಿಕೆಟಿಗನಾಗಿ ಜಗತ್ತಿನಾದ್ಯಂತ ಇರುವ ಲಕ್ಷಾಂತರ ಮಂದಿಯನ್ನು ತಲುಪಿದ್ದಾರೆ. ನಾನೂ ಕೂಡಾ ವಾರ್ನ್ ರೀತಿಯಾಗಬೇಕು ಎಂದು ಬಯಸಿದ್ದೆ. ಹಾಗೆಯೇ ತಮ್ಮ ಮನೆಯ ರೂಂನಲ್ಲಿ ವಾರ್ನ್ ಅವರ ಪೋಸ್ಟರ್ ಅನ್ನು ಅಂಟಿಸಿದ್ದೆ ಎಂದು ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ಹೇಳಿದ್ದಾರೆ. ನೀವೇ ನೋಡಿ ಜಗತ್ತಿನಾದ್ಯಂತ ಅಪಾರ ಸಂಖ್ಯೆಯಲ್ಲಿ ಶೇನ್ ವಾರ್ನ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಶೇನ್ ವಾರ್ನ್ ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರನ್ನು ತಲುಪಿದ್ದಾರೆ. ನಾನು ಚಿಕ್ಕವನಾಗಿದ್ದಾಗ, ಶೇನ್ ವಾರ್ನ್ ಅವರ ಪೋಸ್ಟರ್ ಅನ್ನು ಮನೆಯ ರೂಂನಲ್ಲಿ ಅಂಟಿಸಿಕೊಂಡಿದ್ದೆ, ನಾನೂ ಕೂಡಾ ಶೇನ್ ವಾರ್ನ್ ರೀತಿ ಬೆಳೆಯಬೇಕು ಎಂದು ಅಂದುಕೊಂಡಿದ್ದೆ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.
RIP Shane Warne ಬಳಿ ನಾನು ಆ ಮೂರು ಪದ ಹೇಳಬೇಕಿತ್ತು: ಕಂಬನಿ ಮಿಡಿದ ರಿಕಿ ಪಾಂಟಿಂಗ್
ಇದೇ ವೇಳೆ ಡೇವಿಡ್ ವಾರ್ನರ್, ಕ್ರಿಕೆಟಿಗರು ಜನರಿಗೆ ಒಂದು ರೀತಿ ಮನರಂಜನೆ ನೀಡುವವರಾಗಿರುತ್ತಾರೆ. ಕ್ರಿಕೆಟ್ ಹೊರತಾಗಿಯೂ ಅಭಿಮಾನಿಗಳ ಜತೆ ಸಂಪರ್ಕದಲ್ಲಿರಲು ತಾವು ಇಷ್ಟಪಡುವುದಾಗಿ ಹೇಳಿದ್ದಾರೆ. ನಾವೆಲ್ಲರೂ ಜನರಿಗೆ ಒಂದು ರೀತಿ ಮನರಂಜನೆಯನ್ನು ನೀಡುವವರಾಗಿದ್ದೇವೆ. ನಾನು ಮೈದಾನದಲ್ಲಿ ಬ್ಯಾಟಿಂಗ್ ಮಾಡದೇ ಇದ್ದಾಗ, ಅಭಿಮಾನಿಗಳ ಜತೆ ಸಂಪರ್ಕದಲ್ಲಿರಲು ಬಯಸುವುದಾಗಿ ಹೇಳಿ ಡೇವಿಡ್ ವಾರ್ನರ್ ಮಾತು ಮುಗಿಸಿದ್ದಾರೆ.
ಶ್ರೀಲಂಕಾದ ಮಾಂತ್ರಿಕ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಇಂದಿಗೂ ಶೇನ್ ವಾರ್ನ್ ಹೆಸರಿನಲ್ಲಿದೆ. ಶೇನ್ ವಾರ್ನ್ ಆಸ್ಟ್ರೇಲಿಯಾ ತಂಡದ ಪರ 145 ಟೆಸ್ಟ್ ಪಂದ್ಯಗಳನ್ನಾಡಿ 708 ವಿಕೆಟ್ ಕಬಳಿಸಿದ್ದಾರೆ. 1999ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಚಾಂಪಿಯನ್ ಆಗುವಲ್ಲಿ ಶೇನ್ ವಾರ್ನ್ ಮಹತ್ತರ ಪಾತ್ರವಹಿಸಿದ್ದರು. ಶೇನ್ ವಾರ್ನ್ ಅವರ ನಿಧನಕ್ಕೆ ಇಡೀ ಕ್ರಿಕೆಟ್ ಜಗತ್ತೇ ಕಂಬನಿ ಮಿಡಿದಿತ್ತು.