
ಬೆಂಗಳೂರು: ಮಿನಿ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಕ್ಷಣಗಣನೆ ಆರಂಭವಾಗಿದೆ. ಮುಂಬರುವ ಫೆಬ್ರವರಿ 19 ರಂದು ಪಾಕಿಸ್ತಾನದಲ್ಲಿ ಈ ಹೈವೋಲ್ಟೇಜ್ ಟೂರ್ನಿಗೆ ಚಾಲನೆ ಸಿಗಲಿದೆ. ಜಗತ್ತಿನ 8 ಬಲಾಢ್ಯ ಕ್ರಿಕೆಟ್ ತಂಡಗಳು ಈ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಪ್‌ಗಾಗಿ ಕಾದಾಡಲಿವೆ. ಈ ಬಾರಿಯ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಭಾರತ ತನ್ನ ಪಾಲಿನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಇನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನವೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಆಲ್ರೌಂಡರ್ ಇದೀಗ ಫಿಟ್ನೆಸ್ ಸಮಸ್ಯೆಯಿಂದಾಗಿ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಹೌದು, ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಆಗಿರುವ ಮಿಚೆಲ್ ಮಾರ್ಷ್, ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ತಂಡವು ತವರಿನಲ್ಲಿ ಭಾರತ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಆಡುವಾಗಲೇ ಮಾರ್ಷ್ ಬೆನ್ನುನೋವಿನ ಸಮಸ್ಯೆಗೆ ಒಳಗಾಗಿದ್ದರು. ಈ ಕಾರಣಕ್ಕಾಗಿಯೇ ಕೊನೆಯ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದರು. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮಿಚೆಲ್ ಮಾರ್ಷ್ ಅವರ ಪ್ರದರ್ಶನ ಕೂಡಾ ಅಷ್ಟೇನೂ ಉತ್ತಮವಾಗಿರಲಿಲ್ಲ.. ಭಾರತ ಎದುರಿನ 7 ಇನ್ನಿಂಗ್ಸ್‌ಗಳಿಂದ ಮಿಚೆಲ್ ಮಾರ್ಷ್ ಕೇವಲ 73 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಮಿಚೆಲ್ ಮಾರ್ಷ್ ಅವರನ್ನು ಕಳೆದ ನವೆಂಬರ್‌ನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 3.4 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇದೀಗ ಗಾಯದ ಸಮಸ್ಯೆಯಿಂದಾಗಿ ಮಿಚೆಲ್ ಮಾರ್ಷ್ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ.
ರಣಜಿ ಕಮ್‌ಬ್ಯಾಕ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಮುಖಭಂಗ; ಒಂದಂಕಿ ಮೊತ್ತಕ್ಕೆ ಔಟ್! ವಿಡಿಯೋ ವೈರಲ್
ಕ್ರಿಕೆಟ್ ವೃತ್ತಿಜೀವನದಲ್ಲಿ ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗುತ್ತಿರುವ ಆಲ್ರೌಂಡರ್ ಮಿಚೆಲ್ ಮಾರ್ಷ್‌ಗೆ ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡಬೇಕೆನ್ನುವ ಕನಸು ನುಚ್ಚುನೂರಾಗಿದೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯು ಮಿಚೆಲ್ ಮಾರ್ಷ್ ಅವರ ಬದಲಿ ಆಟಗಾರರನ್ನು ಸದ್ಯದಲ್ಲಿಯೇ ಪ್ರಕಟಿಸಲಿದೆ ಎನ್ನಲಾಗುತ್ತಿದೆ.
ಇದೀಗ ಈ ಕುರಿತಂತೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆ ಹೊರಡಿಸಿದ್ದು, 'ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಆಲ್ರೌಂಡರ್ ಮಿಚೆಲ್ ಮಾರ್ಷ್ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದಲೂ ಅವರು ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ನೋವಿನಿಂದ ಚೇತರಿಸಿಕೊಳ್ಳಲು ಅವರು ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ತಿಳಿಸಿದೆ.
ಈ ಕಾರಣಕ್ಕಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಸಮಾರಂಭ ರದ್ದು?
2023ರಲ್ಲಿ ಭಾರತದಲ್ಲೇ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಿಚೆಲ್ ಮಾರ್ಷ್ ಗಮನಾರ್ಹ ಪ್ರದರ್ಶನ ತೋರುವ ಮೂಲಕ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್ 44.54 ರ ಬ್ಯಾಟಿಂಗ್ ಸರಾಸರಿಯಲ್ಲಿ 441 ರನ್ ಸಿಡಿಸಿದ್ದರು. ಈ ಪೈಕಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಎದುರು ಮಿಚೆಲ್ ಮಾರ್ಷ್ ಆಕರ್ಷಕ ಶತಕವನ್ನು ಸಿಡಿಸಿದ್ದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಈ ಮೊದಲು ಘೋಷಣೆಯಾದ ಆಸ್ಟ್ರೇಲಿಯಾ ತಂಡ:
ಪ್ಯಾಟ್ ಕಮಿನ್ಸ್(ನಾಯಕ), ಅಲೆಕ್ಸ್ ಕೇರಿ, ನೇಥನ್ ಎಲ್ಲಿಸ್, ಆ್ಯರೊನ್ ಹಾರ್ಡೀ, ಜೋಶ್ ಹೇಜಲ್‌ವುಡ್, ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಆ್ಯಡಂ ಝಂಪಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.