
ಕ್ಯಾನ್‌ಬೆರಾ: ಭಾರತ ಕ್ರಿಕೆಟ್ ತಂಡವು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, 5 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು ಮೊದಲ ಪಂದ್ಯ ಗೆದ್ದು 1-0 ಮುನ್ನಡೆ ಸಾಧಿಸಿದೆ. ಮೊದಲ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಭಾರತ ಕ್ರಿಕೆಟ್ ತಂಡವು, ಆಸ್ಟ್ರೇಲಿಯಾದ ಪ್ರಧಾನಿ ಆಂಥೊನಿ ಆಲ್ಬನೀಸ್ ಅವರನ್ನು ಭೇಟಿ ಮಾಡಿತು. ಈ ವೇಳೆ ಆಸೀಸ್ ಪ್ರಧಾನಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಬಿಟ್ಟು, ವಿರಾಟ್ ಕೊಹ್ಲಿಯಿಂದ ಆಟೋಗ್ರಾಫ್ ಪಡೆದ ವಿಚಾರ ಸಾಕಷ್ಟು ಗಮನ ಸೆಳೆದಿತ್ತು. ಆದರೆ ಇದೀಗ ಆಂಥೊನಿ ಆಲ್ಬನೀಸ್ ಅವರು ಟೀಂ ಇಂಡಿಯಾ ನಾಯಕ ರೋಹಿತ್ ಅವರನ್ನು ಬಿಟ್ಟು ವಿರಾಟ್ ಕೊಹ್ಲಿ ಅವರ ಆಟೋಗ್ರಾಫ್ ಪಡೆದಿದ್ದೇಕೆ ಎನ್ನುವ ವಿಚಾರವನ್ನು ಆಸೀಸ್ ಪ್ರಧಾನಿ ಬಹಿರಂಗ ಪಡಿಸಿದ್ದಾರೆ.
ಹೌದು, ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಅಟೋಗ್ರಾಫ್ ಕೊಡಿಸುವಂತೆ ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಆಲ್ಬನೀಸ್‌ಗೆ ಅವರ ವೈದ್ಯರು ಹೇಳಿದ್ದರಂತೆ. ಇದನ್ನು ಸ್ವತಃ ಆಲ್ಬನೀಸ್ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಸ್ಟಾರ್‌ಸ್ಪೋರ್ಟ್ಸ್ ಜೊತೆ ಮಾತನಾಡಿರುವ ಆಲ್ಬನೀಸ್, ‘ನನ್ನ ಖಾಸಗಿ ವೈದ್ಯರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಅವರು ಕೊಹ್ಲಿಯ ಬಗ್ಗೆ ಎಷ್ಟು ಭಾವೋದ್ರಿಕ್ತರಾಗಿದ್ದಾರೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ನಾನು ಕೊಹ್ಲಿಯನ್ನು ಭೇಟಿಯಾಗುತ್ತೇನೆ ಎಂದು ಹೇಳಿದಾಗ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಕೊಹ್ಲಿಯ ಅಟೋಗ್ರಾಫ್ ಕೊಡಿಸಲು ಅವರು ನನ್ನಲ್ಲಿ ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ.
ಟೀಂ ಇಂಡಿಯಾ, ಆಸ್ಟ್ರೇಲಿಯಾಗೆ ಏಕಕಾಲದಲ್ಲಿ ಶಾಕ್ ಕೊಟ್ಟ ದಕ್ಷಿಣ ಆಫ್ರಿಕಾ!
ಕೋಚ್ ಗೌತಂ ಗಂಭೀರ್ ಆಸ್ಟ್ರೇಲಿಯಾಕ್ಕೆ ವಾಪಸ್
ಪರ್ತ್: ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎದುರಾದ ಕಾರಣ ತವರಿಗೆ ಹಿಂದಿರುಗಿದ್ದ ಟೀಂ ಇಂಡಿಯಾದ ಪ್ರಧಾನ ಕೋಚ್ ಗೌತಮ್ ಗಂಭೀರ್, ಆಸ್ಟ್ರೇಲಿಯಾಕ್ಕೆ ವಾಪಸಾಗಿದ್ದಾರೆ. ಗಂಭೀರ್ ಮೊದಲ ಟೆಸ್ಟ್ ಬಳಿಕ ಭಾರತಕ್ಕೆ ಮರಳಿದ್ದರು. ಹೀಗಾಗಿ ಕ್ಯಾನ್ಬೆರಾದಲ್ಲಿ ನಡೆದ ಭಾರತ ತಂಡ ಹಾಗೂ ಪ್ರಧಾನ ಮಂತ್ರಿ XI ತಂಡದ ವಿರುದ್ಧದ ಅಭ್ಯಾಸ ಪಂದ್ಯ ತಪ್ಪಿಸಿಕೊಂಡಿದ್ದರು. ಮಂಗಳವಾರ ಅವರು ಅಡಿಲೇಡ್‌ನಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. 2ನೇ ಟೆಸ್ಟ್ ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿದ್ದು, ಅಡಿಲೇಡ್ ಆತಿಥ್ಯ ವಹಿಸಲಿದೆ.
2ನೇ ಟೆಸ್ಟ್‌ನಲ್ಲೂ ರಾಹುಲ್ ಆರಂಭಿಕನಾಗಲಿ: ಚೇತೇಶ್ವರ್ ಪೂಜಾರ
ಕ್ಯಾನ್‌ಬೆರ್ರಾ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಕೆ.ಎಲ್.ರಾಹುಲ್ ಅವರು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಬೇಕು ಎಂದು ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಸಲಹೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಪೂಜಾರ, ‘ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಆಡಲಿ. ರೋಹಿತ್ ಆರಂಭಿಕನಾಗಿ ಕಣಕ್ಕಿಳಿದರೆ ರಾಹುಲ್ ನಂ.3ರಲ್ಲಿ ಆಡಬೇಕು. ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಿಸಬಾರದು’ ಎಂದಿದ್ದಾರೆ.
ಇನ್ನು 4ರಲ್ಲಿ 2 ಪಂದ್ಯ ಗೆದ್ರೂ ಭಾರತ ತಂಡ ವಿಶ್ವ ಟೆಸ್ಟ್ ಫೈನಲ್‌ಗೆ?
ರೋಹಿತ್ ಅನುಪಸ್ಥಿತಿಯಲ್ಲಿ ರಾಹುಲ್ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ್ದರು. 2ನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ಮತ್ತು ರಾಹುಲ್ ದ್ವಿಶತಕದ ಜೊತೆಯಾಟ ನಡೆಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.