ಟೀಂ ಇಂಡಿಯಾದಂತೆ ಆಸ್ಟ್ರೇಲಿಯಾ ಬಲಿಷ್ಠ ತಂಡ ಕಟ್ಟಬೇಕಿದೆ: ಟಿಮ್ ಪೈನ್

By Suvarna NewsFirst Published Jun 15, 2021, 4:59 PM IST
Highlights

* ಟೀಂ ಇಂಡಿಯಾದಂತೆ ಬಲಿಷ್ಠ ತಂಡವನ್ನು ಕಟ್ಟಬೇಕೆಂದ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೈನ್

* ವಿಂಡೀಸ್‌ ಪ್ರವಾಸಕ್ಕೆ ಆಸೀಸ್‌ ಪ್ರಮುಖ ಆಟಗಾರರು ಗೈರಾಗುವ ಸಾಧ್ಯತೆ

* ಏಕಕಾಲದಲ್ಲಿ ಎರಡು ಸರಣಿಯಾಡಲು ಸಜ್ಜಾಗಿರುವ ಟೀಂ ಇಂಡಿಯಾ

ಮೆಲ್ಬರ್ನ್‌(ಜೂ.15): ಭಾರತ ಕ್ರಿಕೆಟ್ ತಂಡದಂತೆ ಬಲಾಢ್ಯ ತಂಡವನ್ನು ಕಟ್ಟಿದಾಗ ಮಾತ್ರ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ಮಹತ್ವದ ಪಂದ್ಯಗಳಿಗೆ ಫ್ರೆಶ್‌ ಆಗಿ ಕಣಕ್ಕಿಳಿಸಲು ಸಾಧ್ಯವಾಗಲಿದೆ ಎಂದು ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಟಿಮ್ ಪೈನ್ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಮುಖ ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯವನ್ನಾಡಲು ಇಂಗ್ಲೆಂಡ್‌ಗೆ ಬಂದಿಳಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ದ ಸಹಾ ಟೆಸ್ಟ್ ಸರಣಿಯನ್ನಾಡಲಿದೆ. ಇದೇ ವೇಳೆ ಶ್ರೀಲಂಕಾ ಎದುರು ಸೀಮಿತ ಓವರ್‌ಗಳ ಸರಣಿಯನ್ನಾಡಲು ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ 20 ಆಟಗಾರರ ತಂಡವನ್ನು ಪ್ರಕಟಿಸಿದೆ.

ನಾವು ಬಲಿಷ್ಠ ತಂಡವನ್ನು ಕಟ್ಟಬೇಕಿದೆ. ನೀವು ಭಾರತ ತಂಡವನ್ನು ಗಮನಿಸಿ, ಟೀಂ ಇಂಡಿಯಾ ಸಮತೋಲನದಿಂದ ಕೂಡಿದೆ. ತಂಡದಲ್ಲಿ ಪ್ರತಿಭಾನ್ವಿತ ಯುವ ಆಟಗಾರರ ದಂಡೇ ಇದೆ. ನಾವು ಕೂಡಾ ಅಂತಹ ಹಂತವನ್ನು ತಲುಪಬೇಕಿದೆ. ಹೀಗಾದಾಗ ಮಾತ್ರ ನಮ್ಮ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಬಹುದು ಹಾಗೂ ವಿರಾಮದ ಬಳಿಕ ಫ್ರೆಶ್ ಆಗಿ ಕಣಕ್ಕಿಳಿಯುವ ಆಟಗಾರ ಉತ್ತಮ ಪ್ರದರ್ಶನ ತೋರಬಲ್ಲರು ಎಂದು ಪೈನ್ ಹೇಳಿದ್ದಾರೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿ ಅರ್ಧದಲ್ಲೇ ಸ್ಥಗಿತಗೊಂಡ ಬೆನ್ನಲ್ಲೇ ಆಟಗಾರರು ಸಿಡ್ನಿಗೆ ಬಂದಿಳಿದು 14 ದಿನಗಳ ಕಾಲ ಮತ್ತೆ ಕ್ವಾರಂಟೈನ್ ಮುಗಿಸಿ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದರು. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಸೀಮಿತ ಓವರ್‌ಗಳ ಸರಣಿಯನ್ನಾಡಲು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಇದಾದ ಬಳಿಕ ಬಾಂಗ್ಲಾದೇಶ ವಿರುದ್ದ ಸರಣಿಯಲ್ಲಿ ಆಸ್ಟ್ರೇಲಿಯಾ ಪಾಲ್ಗೊಳ್ಳಬೇಕಿದೆ.

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ಬಹುಮಾನ ಮೊತ್ತ ಪ್ರಕಟಿಸಿದ ಐಸಿಸಿ

ಮಾಧ್ಯಮ ಮೂಲಗಳ ಪ್ರಕಾರ ವಿಂಡೀಸ್ ಪ್ರವಾಸದಿಂದ ಪ್ರಮುಖ ಆಸ್ಟ್ರೇಲಿಯಾ ಆಟಗಾರರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಜೇ ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್ ಹೊರಗುಳಿಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇಂತಹ ಸಂದರ್ಭಗಳಲ್ಲಿ ನೀವು ಆಟಗಾರರನ್ನು ಟೀಕಿಸುವ ಬದಲು ಅವರ ಬೆಂಬಲಕ್ಕೆ ನಿಲ್ಲಬೇಕು. ಯುವ ಆಟಗಾರರು ಜವಾಬ್ದಾರಿಗಳಿಗೆ ಹೆಗಲು ಕೊಡಬೇಕು. ವಿದೇಶಿ ಪ್ರವಾಸ ಮಾಡುವುದು, ಅದಾದ ಬಳಿಕ ತವರಿಗೆ ಬಂದ ಮೇಲೆ ಹೋಟೆಲ್‌ ಕ್ವಾರಂಟೈನ್‌ಗೆ ಒಳಗಾಗುವುದು ಆಟಗಾರರು ಮತ್ತಷ್ಟು ಬಳಲುವಂತೆ ಮಾಡುತ್ತದೆ ಎಂದು ಪೈನ್ ಹೇಳಿದ್ದಾರೆ.
 

click me!