
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್-2026 (ಐಪಿಎಲ್) ಪಂದ್ಯಾವಳಿಗಳು ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ ಘಟನೆ 2025ರ ಜೂ.4ರಂದು ನಡೆದಿತ್ತು.
ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಿರ್ಬಂಧಿಸಲಾಗಿತ್ತು. ಇದೀಗ ಮೈಕಲ್ ಡಿ ಕುನ್ಹಾ ನೇತೃತ್ವದ ಸಮಿತಿ ಹಾಗೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಷರತ್ತು ಮೇರೆಗೆ ಮಾ.26ರಿಂದ ಶುರುವಾಗಲಿರುವ ಐಪಿಎಲ್-2026 ಪಂದ್ಯಾವಳಿಗಳಿಗೆ ಅನುಮತಿ ನೀಡಲಾಗಿದೆ. ತಜ್ಞರ ಸಮಿತಿಯು ಶಿಫಾರಸು ಮಾಡಿರುವ ಮೊದಲ ಹಂತದ ಮುನ್ನೆಚ್ಚರಿಕಾ ಕ್ರಮಗಳನ್ನು ಮಾ.15ರ ಒಳಗಾಗಿ ಮಾಡಿರಬೇಕು ಎಂಬ ಷರತ್ತು ವಿಧಿಸಲಾಗಿದೆ.
ಅಗ್ನಿಸುರಕ್ಷತೆ, ಜನದಟ್ಟಣೆ ನಿಯಂತ್ರಣ, ತುರ್ತು ಪ್ರತಿಕ್ರಿಯಾ ವ್ಯವಸ್ಥೆ, ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ವ್ಯವಸ್ಥೆ ಕುರಿತು ಸಮಿತಿಯು ಹಲವು ಶಿಫಾರಸು ಮಾಡಿತ್ತು.
ಇದರ ಅನ್ವಯ ಗೇಟ್ ಸಂಖ್ಯೆ 4, 8, 12 ಹಾಗೂ 21ರ ಬಳಿ ಹೃದಯ ಆರೈಕೆ ವ್ಯವಸ್ಥೆ, ಪ್ರತಿ ಗೇಟ್ ಕನಿಷ್ಠ 6 ಮೀಟರ್ ವಿಶಾಲವಾಗಿರುವಂತೆ ವಿಸ್ತರಣೆ, ಒಟ್ಟು ಸಾಮರ್ಥ್ಯದ ಶೇ.5ರಿಂದ 10ರಷ್ಟು ಮಂದಿಯನ್ನು ಮಾತ್ರ ಒಂದು ಗೇಟ್‌ನಲ್ಲಿ ಒಳ ಬಿಡಬೇಕು. ಸೇಂಟ್ ಜೋಸೆಫ್ ಹೈಸ್ಕೂಲ್, ಯುಬಿ ಸಿಟಿ, ಕಂಠೀರವ ಕ್ರೀಡಾಂಗಣದ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಅಗ್ನಿ ಸುರಕ್ಷತೆ ಕ್ರಮಗಳನ್ನು ಫೆಬ್ರುವರಿ ತಿಂಗಳಲ್ಲೇ ಪೂರ್ಣಗೊಳಿಸಬೇಕು. ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸಲು ಐಪಿಎಲ್ ಟಿಕೆಟ್ ಹೊಂದಿರುವ ವೀಕ್ಷಕರಿಗೆ ಮೆಟ್ರೋ, ಬಿಎಂಟಿಸಿಯಲ್ಲಿ ಉಚಿತ ಟಿಕೆಟ್ ನೀಡಬೇಕು ಎಂಬುದು ಸೇರಿದಂತೆ ಹಲವು ಶಿಫಾರಸು ಮಾಡಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್-2026 ಪಂದ್ಯಾವಳಿಗಳನ್ನು ಆಡಲು ಅನುಮತಿ ನೀಡಲು ಸಂಪುಟ ನಿರ್ಧಾರ ಮಾಡಿದೆ. ಯಾವ ಷರತ್ತುಗಳನ್ನು ಪಾಲಿಸಬೇಕು ಎಂಬ ಕುರಿತು ಗೃಹ ಸಚಿವರು ಇಲಾಖೆಯಿಂದ ಪ್ರತ್ಯೇಕ ಆದೇಶ ಹೊರಡಿಸಲಿದ್ದಾರೆ.
-ಎಚ್.ಕೆ.ಪಾಟೀಲ್, ಕಾನೂನು ಸಚಿವ.
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆಗೆ ಅನುಮತಿ ನೀಡುವ ಸಂಬಂಧ ಕೆಎಸ್‌ಸಿಎ ಮತ್ತು ಆರ್‌ಸಿಬಿ ಪ್ರತಿನಿಧಿಗಳೊಂದಿಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಗುರುವಾರ ಸಭೆ ನಡೆಸಿದರು.
ಸಭೆಯಲ್ಲಿ ಕೆಎಸ್‌ಸಿಎ ಮತ್ತು ಆರ್‌ಸಿಬಿ ಪ್ರತಿನಿಧಿಗಳು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆಗೆ ಸರ್ಕಾರದಿಂದ ಅನುಮತಿ ನೀಡುವಂತೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಡಾ. ಜಿ.ಪರಮೇಶ್ವರ್, ಕ್ರಿಕೆಟ್ ಪಂದ್ಯ ನಡೆಸಲು ಅನುಮತಿಸಿದರೂ ಕ್ರೀಡಾಂಗಣದಲ್ಲಿ ಎಷ್ಟು ಜನರು ಕೂರಲು ವ್ಯವಸ್ಥೆಯಿದೆಯೋ ಅಷ್ಟು ಜನರನ್ನು ಮಾತ್ರ ಸೇರಿಸಬೇಕು. ಜತೆಗೆ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣ ಸುತ್ತಮುತ್ತ ಹೆಚ್ಚಿನ ಜನಸಂದಣಿ ಸೇರದಂತೆ ನೋಡಿಕೊಳ್ಳಬೇಕು. ಪೊಲೀಸರು ಎಲ್ಲ ಸಹಕಾರ ನೀಡುತ್ತಾರಾದರೂ, ಜನರ ನಿಯಂತ್ರಣ ಆಯೋಜಕರದ್ದಾಗಿರುತ್ತದೆ. ಜತೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು. ಕ್ರೀಡಾಕೂಟದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೂ ಅದಕ್ಕೆ ಆಯೋಜಕರೇ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಗೃಹ ಇಲಾಖೆ ಕಾರ್ಯದರ್ಶಿ ಕೆ.ವಿ.ಶರತ್‌ಚಂದ್ರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಇತರರಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.