ICC Test Rankings: ಕೆಲ ಹೊತ್ತು ಟೆಸ್ಟಲ್ಲಿ ನಂ.1 ಆಗಿದ್ದ ಭಾರತ! ಮತ್ತೆ ಎರಡನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

Published : Feb 16, 2023, 10:12 AM IST
ICC Test Rankings: ಕೆಲ ಹೊತ್ತು ಟೆಸ್ಟಲ್ಲಿ ನಂ.1 ಆಗಿದ್ದ ಭಾರತ! ಮತ್ತೆ ಎರಡನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

ಸಾರಾಂಶ

ಐಸಿಸಿ ನೂತನ ಪರಿಷ್ಕೃತ ಟೆಸ್ಟ್‌ ರ‍್ಯಾಂಕಿಂಗ್‌ ಪ್ರಕಟ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದ ಟೀಂ ಇಂಡಿಯಾ ಕೆಲವೇ ಗಂಟೆಗಳಲ್ಲಿ ಮತ್ತೆ ಎರಡನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

ದುಬೈ(ಫೆ.16): ಭಾರತ ಕ್ರಿಕೆಟ್‌ ತಂಡ ಬುಧವಾರ ಟೆಸ್ಟ್‌ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ, ಮೊದಲ ಬಾರಿಗೆ ಏಕಕಾಲದಲ್ಲಿ ಎಲ್ಲಾ ಮೂರೂ ಮಾದರಿಯಲ್ಲಿ ವಿಶ್ವ ನಂ.1 ಸ್ಥಾನ ಹೊಂದಿದ ಸಾಧನೆಗೈದು ಸಂಭ್ರಮಿಸಿತ್ತು. ಮಧ್ಯಾಹ್ನ 1.30ರ ವೇಳೆಗೆ ಪರಿಷ್ಕತ ರ‍್ಯಾಂಕಿಂಗ್‌‌ ಪಟ್ಟಿಯನ್ನು ಐಸಿಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಆದರೆ ಸಂಜೆ 7.30ರ ವೇಳೆಗೆ ಮತ್ತೊಮ್ಮೆ ಬದಲಾದ ಪಟ್ಟಿಯಲ್ಲಿ ಆಸ್ಪ್ರೇಲಿಯಾ ನಂ.1 ಸ್ಥಾನಕ್ಕೆ ಮರಳಿತು. ಐಸಿಸಿಯ ಈ ಎಡವಟ್ಟಿಗೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಭಾರೀ ಟ್ರೋಲ್‌ ಮಾಡಿದ್ದಾರೆ.

ಆಸ್ಪ್ರೇಲಿಯಾ ವಿರುದ್ಧ ಕಳೆದ ವಾರ ನಾಗ್ಪುರದಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್‌್ಸ ಹಾಗೂ 132 ರನ್‌ಗಳ ಬೃಹತ್‌ ಗೆಲುವು ಸಾಧಿಸಿತ್ತು. ಇದರೊಂದಿಗೆ ತಂಡದ ರೇಟಿಂಗ್‌ ಅಂಕವೂ ಹೆಚ್ಚಿತು. ಐಸಿಸಿ ಮೊದಲು ಪ್ರಕಟಿಸಿದ ಪಟ್ಟಿಯಲ್ಲಿ ಭಾರತ 115 ರೇಟಿಂಗ್‌ ಅಂಕ ಹೊಂದಿದ್ದರೆ, ಆಸ್ಪ್ರೇಲಿಯಾ 111 ಅಂಕ ಗಳಿಸಿತ್ತು. ಆದರೆ ಬದಲಾದ ಪಟ್ಟಿಯಲ್ಲಿ ಆಸ್ಪ್ರೇಲಿಯಾದ ರೇಟಿಂಗ್‌ ಅಂಕ 126ಕ್ಕೆ ಏರಿಕೆಯಾಗಿದ್ದು, ಭಾರತ 115 ಅಂಕಗಳನ್ನು ಹೊಂದಿದೆ. 2ನೇ ಟೆಸ್ಟ್‌ನಲ್ಲಿ ಭಾರತ ಗೆದ್ದರೆ ಟೆಸ್ಟ್‌ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರುವ ಸಾಧ್ಯತೆ ಇದೆ.

ಇದೇ ಮೊದಲ ಬಾರಿಗೆ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಭಾರತ ನಂ.1

ಹಲವು ತಿಂಗಳಿಂದ ಟಿ20 ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಭಾರತ, ಕಳೆದ ತಿಂಗಳು ನ್ಯೂಜಿಲೆಂಡ್‌ ವಿರುದ್ಧದ ಸರಣಿಯನ್ನು 3-0 ಅಂತರದಲ್ಲಿ ಗೆದ್ದು ಏಕದಿನ ರ‍್ಯಾಂಕಿಂಗ್‌‌ ಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿತ್ತು.

ಟೆಸ್ಟ್‌: ಅಶ್ವಿನ್‌ ನಂ.2 ಬೌಲರ್‌

ಆಸ್ಪ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 8 ವಿಕೆಟ್‌ ಕಬಳಿಸಿದ ಭಾರತದ ಆರ್‌.ಅಶ್ವಿನ್‌, ಐಸಿಸಿ ಟೆಸ್ಟ್‌ ಬೌಲರ್‌ಗಳ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿರುವ ಆಸ್ಪ್ರೇಲಿಯಾದ ಪ್ಯಾಟ್‌ ಕಮಿನ್ಸ್‌ಗಿಂತ 21 ರೇಟಿಂಗ್‌ ಅಂಕ ಹಿಂದಿದ್ದು, 2ನೇ ಟೆಸ್ಟ್‌ನಲ್ಲೂ ಉತ್ತಮ ಪ್ರದರ್ಶನ ತೋರಿದರೆ 2017ರ ಬಳಿಕ ಮೊದಲ ಬಾರಿಗೆ ಟೆಸ್ಟ್‌ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಇದೇ ವೇಳೆ ರವೀಂದ್ರ ಜಡೇಜಾ 16ನೇ ಸ್ಥಾನಕ್ಕೇರಿದ್ದಾರೆ. ಇನ್ನು ಬ್ಯಾಟರ್‌ಗಳ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ ರೋಹಿತ್‌ ಶರ್ಮಾ 2 ಸ್ಥಾನ ಏರಿಕೆ ಕಂಡು 8ನೇ ಸ್ಥಾನ ಪಡೆದಿದ್ದಾರೆ. ಆಸೀಸ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ರೋಹಿತ್‌ ಶರ್ಮಾ ಶತಕ ಬಾರಿಸಿದ್ದರು.

ಸ್ಪಿನ್ನ​ರ್ಸ್ ಎದುರು ವಿರಾಟ್ ಕೊಹ್ಲಿ ಹೆಚ್ಚುವರಿ ಅಭ್ಯಾಸ

ನವದೆಹಲಿ: ಆಸ್ಪ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ಬುಧವಾರ ಭಾರತ ತಂಡ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನೆಟ್ಸ್‌ ಅಭ್ಯಾಸ ನಡೆಸಿತು. ತಂಡದ ಇತರ ಸದಸ್ಯರಿಗಿಂತ ಅರ್ಧಗಂಟೆ ಮೊದಲೇ ಕ್ರೀಡಾಂಗಣಕ್ಕೆ ಆಗಮಿಸಿದ ವಿರಾಟ್‌ ಕೊಹ್ಲಿ ನೆಟ್ಸ್‌ನಲ್ಲಿ ಸ್ಪಿನ್ನರ್‌ಗಳನ್ನು ಹೆಚ್ಚಾಗಿ ಎದುರಿಸಿದರು. ಆರಂಭದಲ್ಲಿ ಡೆಲ್ಲಿ ತಂಡದ ಸ್ಪಿನ್ನರ್‌ ಹೃತಿಕ್‌ ಶೋಕೀನ್‌ರ ಬೌಲಿಂಗ್‌ ಎದುರಿಸಿದ ಕೊಹ್ಲಿಗೆ ಬಳಿಕ ಟೀಂ ಇಂಡಿಯಾದ ನೆಟ್‌ ಬೌಲರ್‌ಗಳಾಗಿರುವ ಸ್ಪಿನ್ನರ್‌ಗಳಾದ ಸೌರಭ್‌ ಕುಮಾರ್‌, ಪುಲ್ಕಿತ್‌ ನಾರಂಗ್‌ ಬೌಲ್‌ ಮಾಡಿದರು. ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ, ಯುವ ಸ್ಪಿನ್ನರ್‌ ಟಾಡ್‌ ಮರ್ಫಿಗೆ ಔಟಾಗಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?
ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!