Ashes Test: ಕೊನೆಯ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

By Suvarna NewsFirst Published Jan 13, 2022, 3:25 PM IST
Highlights

*  ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ

* ಹೋಬರ್ಟ್‌ ಟೆಸ್ಟ್ ಪಂದ್ಯಕ್ಕೆ ಸ್ಥಾನ ಉಳಿಸಿಕೊಂಡ ಉಸ್ಮಾನ್ ಖವಾಜ

* ಟ್ರಾವಿಡ್ ಹೆಡ್ ಆಡುವ ಹನ್ನೊಂದರ ಬಳಗದಲ್ಲಿರಲಿದ್ದಾರೆ ಎಂದ ಕಮಿನ್ಸ್‌

ಮೆಲ್ಬೊರ್ನ್‌(ಜ.13): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ 2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಕೊನೆಯ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡ (Australia Cricket Team) ಪ್ರಕಟಗೊಂಡಿದ್ದು, ಸಿಡ್ನಿ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ನಲ್ಲೂ ಶತಕ ಚಚ್ಚಿದ ಉಸ್ಮಾನ್ ಖವಾಜ (Usman Khawaja) ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆಯಾಗಿದ್ದು, ಆರಂಭಿಕ ಬ್ಯಾಟರ್‌ ಮಾರ್ಕಸ್ ಹ್ಯಾರಿಸ್ ಬದಲಿಗೆ ಟ್ರಾವಿಸ್ ಹೆಡ್ (Travis Head) ತಂಡ ಕೂಡಿಕೊಂಡಿದ್ದಾರೆ. 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಇದುವರೆಗೂ 4 ಪಂದ್ಯಗಳು ಮುಕ್ತಾಯವಾಗಿದ್ದು, ಆತಿಥೇಯ ಆಸ್ಟ್ರೇಲಿಯಾ ತಂಡವು 3-0 ಅಂತರದಲ್ಲಿ ಈಗಾಗಲೇ ಸರಣಿ ಕೈವಶ ಮಾಡಿಕೊಂಡಿದೆ.

ಹೋಬರ್ಟ್‌ನಲ್ಲಿ ಜನವರಿ 14ರಿಂದ ಆರಂಭವಾಗಲಿರುವ ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ (David Warner) ಜತೆಗೆ ಉಸ್ಮಾನ್ ಖವಾಜ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಟ್ರಾವಿಡ್‌ ಹೆಡ್ ಅನುಪಸ್ಥಿತಿಯಲ್ಲಿ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಖವಾಜ ಎರಡು ಆಕರ್ಷಕ ಶತಕ ಬಾರಿಸುವ ಮೂಲಕ ಆಯ್ಕೆಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಉಸ್ಮಾನ್ ಖವಾಜ ಶತಕದ ಬ್ಯಾಟಿಂಗ್ ಹೊರತಾಗಿಯೂ ಸಿಡ್ನಿ ಟೆಸ್ಟ್ ಪಂದ್ಯವನ್ನು ರೋಚಕವಾಗಿ ಡ್ರಾ ಮಾಡಿಕೊಳ್ಳುವಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವು ಯಶಸ್ವಿಯಾಗಿತ್ತು. ಆರಂಭಿಕ ಬ್ಯಾಟರ್‌ ಮಾರ್ಕಸ್ ಹ್ಯಾರಿಸ್ ಪದೇ ಪದೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ಅವರನ್ನು ಆಡುವ ಹನ್ನೊಂದರ ಬಳಗದಿಂದಲೇ ಕೈಬಿಡಲಾಗಿದೆ.

ಹೋಬರ್ಟ್ ಟೆಸ್ಟ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ತಿಳಿಸಿದ್ದಾರೆಂದು ವರದಿಯಾಗಿದೆ. ಸಿಡ್ನಿ ಟೆಸ್ಟ್ (Sydney Test) ಪಂದ್ಯ ಆರಂಭಕ್ಕೂ ಮುನ್ನ ಟ್ರಾವಿಸ್‌ ಹೆಡ್‌ ಕೋವಿಡ್‌ ಸೋಂಕು (Coronavirus) ತಗುಲಿರುವುದು ದೃಢವಾದ ಹಿನ್ನೆಲೆಯಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದರು. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.

Ashes Test: ಕೊನೇ ವಿಕೆಟ್ ಗೆ ಇಂಗ್ಲೆಂಡ್ ಹೋರಾಟ, ಸಿಡ್ನಿ ಟೆಸ್ಟ್ ರೋಚಕ ಡ್ರಾ! 

ಆಸ್ಟ್ರೇಲಿಯಾ ತಂಡವು ಈ ಬಾರಿಯ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್‌ನ ಜತೆಗೆ ಬೌಲಿಂಗ್‌ನಲ್ಲೂ ಬಲಿಷ್ಠ ಪ್ರದರ್ಶನ ತೋರುವ ಮೂಲಕ ಇಂಗ್ಲೆಂಡ್ ತಂಡವನ್ನು ಇನ್ನಿಲ್ಲದಂತೆ ಕಾಡಿದೆ. ಆದರೆ ಕೊನೆಯ ಟೆಸ್ಟ್ ಪಂದ್ಯದಲ್ಲಿ ಯಾವೆಲ್ಲ ಬೌಲರ್‌ಗಳು ಆಸ್ಟ್ರೇಲಿಯಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.

ವೇಗದ ಬೌಲಿಂಗ್ ವಿಭಾಗದಲ್ಲಿ ನಾಯಕ ಪ್ಯಾಟ್ ಕಮಿನ್ಸ್‌ಗೆ ಸಾಕಷ್ಟು ಆಯ್ಕೆಗಳಿದ್ದು, ಸ್ವತಃ ಕಮಿನ್ಸ್ ಜತೆಗೆ ಜೇ ರಿಚರ್ಡ್‌ಸನ್‌, ಸ್ಕಾಟ್ ಬೊಲ್ಯಾಂಡ್‌, ಮಿಚೆಲ್ ಸ್ಟಾರ್ಕ್‌, ಮಿಚೆಲ್ ಮಾರ್ಶ್‌, ಕ್ಯಾಮರೋನ್ ಗ್ರೀನ್‌ ಸೇರಿದಂತೆ ಸಾಕಷ್ಟು ಆಯ್ಕೆಗಳಿವೆ. ಈಗಾಗಲೇ ಟೆಸ್ಟ್ ಸರಣಿ ಕೈಚೆಲ್ಲಿ ಕಂಗಾಲಾಗಿರುವ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡದ ಮೇಲೆ ಸವಾರಿ ಮಾಡಲು ಕಮಿನ್ಸ್ ನೇತೃತ್ವದ ಕಾಂಗರೂ ಪಡೆ ತುದಿಗಾಲಿನಲ್ಲಿ ನಿಂತಿದೆ.

ಹೋಬರ್ಟ್‌ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಹೀಗಿದೆ ನೋಡಿ:

ಪ್ಯಾಟ್ ಕಮಿನ್ಸ್‌(ನಾಯಕ), ಸ್ಟೀವ್ ಸ್ಮಿತ್(ಉಪನಾಯಕ), ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ, ಮಾರ್ಕಸ್‌ ಹ್ಯಾರಿಸ್, ಕ್ಯಾಮರೋನ್ ಗ್ರೀನ್‌, ಟ್ರಾವಿಸ್ ಹೆಡ್, ಸ್ಕಾಟ್ ಬೊಲ್ಯಾಂಡ್, ಜೋಶ್ ಇಂಗ್ಲಿಶ್, ಉಸ್ಮಾನ್ ಖವಾಜ, ನೇಥನ್ ಲಯನ್, ಮಿಚೆಲ್ ಮಾರ್ಶ್‌, ಮಿಚೆಲ್ ನೀಸರ್, ಜೇ ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್‌, ಮಿಚೆಲ್ ಸ್ವೆಪ್ಸನ್‌, ಡೇವಿಡ್ ವಾರ್ನರ್.
 

click me!