ಏಷ್ಯನ್‌ ಗೇಮ್ಸ್‌ ಮಹಿಳಾ ಕ್ರಿಕೆಟ್‌: ಬಾಂಗ್ಲಾಗೆ ಮಣ್ಣುಮುಕ್ಕಿಸಿದ ಭಾರತ; ಫೈನಲ್‌ಗೆ ಎಂಟ್ರಿ! ಶಫಾಲಿ ಸಿಡಿಲಬ್ಬರದ ಶತಕ

Kannadaprabha News   | Kannada Prabha
Published : Sep 21, 2026, 09:05 AM IST
Shafali Verma

ಸಾರಾಂಶ

ಮಹಿಳಾ ಕ್ರಿಕೆಟ್ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಭಾರತ ಸತತ 2ನೇ ಬಾರಿ ಫೈನಲ್ ಪ್ರವೇಶಿಸಿದೆ. ಶಫಾಲಿ ವರ್ಮಾ ಅವರ ಅಜೇಯ ಶತಕದ ನೆರವಿನಿಂದ ಭಾರತ ಭರ್ಜರಿ ಜಯ ಸಾಧಿಸಿದ್ದು, ಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಇದೇ ವೇಳೆ ಸ್ಮೃತಿ ಮಂಧನಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆ ಬರೆದಿದ್ದಾರೆ.

ನಿಶಿನ್‌: ಗೇಮ್ಸ್‌ನ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ಸತತ 2ನೇ ಬಾರಿ ಫೈನಲ್‌ಗೇರಿದೆ. ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 114 ರನ್‌ ಗೆಲುವು ಲಭಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 4 ವಿಕೆಟ್‌ಗೆ 195 ರನ್‌ ಗಳಿಸಿತು. ಅಭೂತಪೂರ್ವ ಲಯದಲ್ಲಿರುವ ಶಫಾಲಿ ವರ್ಮಾ 49 ಎಸೆತಗಳಲ್ಲಿ 3 ಬೌಂಡರಿ, 9 ಸಿಕ್ಸರ್‌ನೊಂದಿಗೆ ಔಟಾಗದೆ 100 ರನ್‌ ಸಿಡಿಸಿದರು. ಹರ್ಮನ್‌ಪ್ರೀತ್‌ 40, ಸ್ಮೃತಿ ಮಂಧನಾ 19 ರನ್‌ ಬಾರಿಸಿದರು. ದೊಡ್ಡ ಗುರಿ ಬೆನ್ನತ್ತಿದ ಬಾಂಗ್ಲಾ 15.4 ಓವರ್‌ಗಳಲ್ಲಿ 81 ರನ್‌ಗೆ ಆಲೌಟಾಯಿತು. ಶ್ರೀ ಚರಣಿ 2, ನಂದನಿ ಶರ್ಮಾ 3 ವಿಕೆಟ್‌ ಪಡೆದರು.

ಪಾಕ್‌ ಹೊರಕ್ಕೆ:

ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದ ಲಂಕಾ ಫೈನಲ್‌ಗೇರಿತು. ಪಾಕ್‌ 4 ವಿಕೆಟ್‌ಗೆ 177 ರನ್‌ ಗಳಿಸಿದರೆ, ಈ ಮೊತ್ತವನ್ನು ಲಂಕಾ 17.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿ ಗೆದ್ದಿತು. ಫೈನಲ್‌ ಪಂದ್ಯ ಮಂಗಳವಾರ ನಡೆಯಲಿದ್ದು, ಭಾರತಕ್ಕೆ ಲಂಕಾ ಸವಾಲು ಎದುರಾಗಲಿದೆ.

ಅಂ.ರಾ. ಟಿ20 ರನ್‌: ಸ್ಮೃತಿ ಈಗ ನಂ.1

ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಗರಿಷ್ಠ ರನ್ ಗಳಿಕೆ ಪಟ್ಟಿಯಲ್ಲಿ ಸ್ಮೃತಿ ಈಗ ವಿಶ್ವದಲ್ಲೇ ಅಗ್ರಸ್ಥಾನಕ್ಕೇರಿದ್ದಾರೆ. ಅವರು 4,788 ರನ್‌ ಗಳಿಸಿದ್ದು, ನ್ಯೂಜಿಲೆಂಡ್‌ನ ಸುಜೀ ಬೇಟ್ಸ್‌(4758 ರನ್‌) ಅವರನ್ನು ಹಿಂದಿಕ್ಕಿದರು. ಸ್ಮೃತಿ ಈಗಾಗಲೇ ಮಹಿಳಾ ಅಂ.ರಾ. ಕ್ರಿಕೆಟ್‌ನ ಗರಿಷ್ಠ ರನ್‌ ಗಳಿಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ನಿಕಿ ಮಿಂಚು: ಗೆದ್ದ ಭಾರತ ಎ

ಮುಲ್ಲಾನ್‌ಪುರ: ಕರ್ನಾಟಕ ನಿಕಿ ಪ್ರಸಾದ್‌ ಆಲ್ರೌಂಡ್‌ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ‘ಎ’ ಮಹಿಳಾ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ ‘ಎ’ 4 ವಿಕೆಟ್‌ ಜಯಗಳಿಸಿತು. ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 46.5 ಓವರ್‌ಗಳಲ್ಲಿ 235 ರನ್‌ಗೆ ಆಲೌಟಾಯಿತು. ನಿಕಿ, ವೈಷ್ಣವಿ ತಲಾ 3 ವಿಕೆಟ್‌ ಕಿತ್ತರು. ಸ್ಪರ್ಧಾತ್ಮಕ ಗುರಿಯನ್ನು ಭಾರತ 41.1 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿ ಗೆದ್ದಿತು. ತೇಜಲ್‌ ಹಸಬ್ನಿಸ್‌ 81, ಅನುಷ್ಕಾ 55, ನಿಕಿ ಔಟಾಗದೆ 32 ರನ್‌ ಗಳಿಸಿದರು.

ಆಸೀಸ್‌ ಸರಣಿ ಕ್ಲೀನ್‌ಸ್ವೀಪ್‌

ಹರಾರೆ: ಜಿಂಬಾಬ್ವೆ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 1 ವಿಕೆಟ್‌ ರೋಚಕ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ. ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 8 ವಿಕೆಟ್‌ಗೆ 271 ರನ್‌ ಕಲೆಹಾಕಿತು. ಕ್ರೇಗ್‌ ಎರ್ವಿನ್‌ 59, ನಾಯಕ ಸಿಕಂದರ್‌ ರಝಾ ಔಟಾಗದೆ 81 ರನ್‌ ಸಿಡಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸೀಸ್‌ 49.5 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟದಲ್ಲಿ ಗೆದ್ದಿತು. ಜೋಶ್‌ ಇಂಗ್ಲಿಸ್‌ 103 ರನ್‌ ಸಿಡಿಸಿದರು. ಕೊನೆಯಲ್ಲಿ ನೇಥನ್‌ ಎಲ್ಲಿಸ್(ಔಟಾಗದೆ 36) ತಂಡವನ್ನು ಗೆಲ್ಲಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೃನಾಲ್, ಭುವಿ, ಪಾಟೀದಾರ್ ಮಾಡಿದ ಅಪರಾಧ ಏನು? ಬಿಸಿಸಿಐ ಹೆಂಗೆಲ್ಲ ದ್ರೋಹ ಮಾಡ್ತಿದೆ ನೋಡಿ..
ಐಪಿಎಲ್ ಟೈಟಲ್ ಸ್ಪಾನ್ಸರ್ ಶಾಪ, ಡಿಎಲ್ಎಫ್, ಪೆಪ್ಸಿ, ವಿವೋ, ಡ್ರೀಮ್11 ಸಾಲಿಗೆ ಸೇರಿತಾ ಟಾಟಾ?