ಕೂದಲೆಳೆ ಅಂತರದಲ್ಲಿ ಅಪರೂಪದ ವಿಶ್ವದಾಖಲೆ ಮಿಸ್ ಮಾಡಿಕೊಂಡ ಟೀಂ ಇಂಡಿಯಾ!

Published : Sep 11, 2025, 04:20 PM IST
asia cup 2025

ಸಾರಾಂಶ

ಏಷ್ಯಾಕಪ್‌ನಲ್ಲಿ ಯುಎಇ ವಿರುದ್ಧ ಟೀಂ ಇಂಡಿಯಾ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಭಾರತ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿದೊಡ್ಡ ಅಂತರದ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ದುಬೈ: 2025ರ ಏಷ್ಯಾಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ ನಿರೀಕ್ಷೆಯಂತೆಯೇ ಭರ್ಜರಿ ಶುಭಾರಂಭ ಮಾಡಿದೆ. ಯುಎಇ ಎದುರು ತಾನಾಡಿದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ 'ಎ' ಗುಂಪಿನಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿದೊಡ್ಡ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಒಟ್ಟಾರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ಬರೆಯುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ವಿಶ್ವದಾಖಲೆ ಹೊಸ್ತಿಲಲ್ಲಿ ಎಡವಿದ ಟೀಂ ಇಂಡಿಯಾ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಬಾಲ್ ಅಂತರದ ಗೆಲುವು ದಾಖಲಿಸಿದ ವಿಶ್ವದಾಖಲೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಹೆಸರಿನಲ್ಲಿದೆ. ಇಂಗ್ಲೆಂಡ್ ತಂಡವು 2024ರಲ್ಲಿ ಓಮಾನ್ ವಿರುದ್ದ ನಡೆದ ಪಂದ್ಯದಲ್ಲಿ 101 ಎಸೆತಗಳನ್ನು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿತ್ತು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆ ಇದುವರೆಗೂ ಇಂಗ್ಲೆಂಡ್ ಹೆಸರಿನಲ್ಲಿಯೇ ಅಚ್ಚಳಿಯದೇ ಉಳಿದಿದೆ. ಇದೀಗ ಏಷ್ಯಾಕಪ್ ಟೂರ್ನಿಯಲ್ಲಿ ಯುಎಇ ನೀಡಿದ್ದ 58 ರನ್‌ಗಳ ಗುರಿಯನ್ನು ಕೇವಲ 4.3 ಓವರ್‌ಗಳಲ್ಲಿ ತಲುಪಿತು. ಈ ಮೂಲಕ ಭಾರತ ತಂಡವು ಅತಿದೊಡ್ಡ ಬಾಲುಗಳ ಅಂತರದ ಗೆಲುವು ದಾಖಲಿಸಿತು. ಅಂದರೆ ಭಾರತ ತಂಡವು 27 ಎಸೆತಗಳನ್ನು ಎದುರಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ 93 ಎಸೆತಗಳು ಇರುವಂತೆ ಗೆಲುವು ದಾಖಲಿಸಿತು. ಆದರೆ ಇಂಗ್ಲೆಂಡ್ ರೆಕಾರ್ಡ್ ಬ್ರೇಕ್ ಮಾಡುವ ಅವಕಾಶವನ್ನು ಸೂರ್ಯಕುಮಾರ್ ಯಾದವ್ ಪಡೆ ಮಿಸ್ ಮಾಡಿಕೊಂಡಿತು. ಮೂರು ಓವರ್‌ನಲ್ಲಿ ಭಾರತ ಗುರಿ ಬೆನ್ನತ್ತಿದ್ದರೇ, ವಿಶ್ವದಾಖಲೆ ಭಾರತ ಕ್ರಿಕೆಟ್ ತಂಡದ ಪಾಲಾಗುತ್ತಿತ್ತು.

ಪವರ್‌ ಪ್ಲೇನೊಳಗೆ ಗೆದ್ದು ಬೀಗಿದ ಭಾರತ:

ಏಷ್ಯಾಕಪ್ ಟೂರ್ನಿಯಲ್ಲಿ ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಕುಲ್ದೀಪ್ ಯಾದವ್ ಹಾಗೂ ಶಿವಂ ದುಬೆ ಮಾರಕ ದಾಳಿಗೆ ತತ್ತರಿಸಿದ ಯುಎಇ ತಂಡವು ಕೇವಲ 13.1 ಓವರ್‌ಗಳಲ್ಲಿ 57 ರನ್‌ಗಳಿಗೆ ಸರ್ವಪತನ ಕಂಡಿತು. ಕುಲ್ದೀಪ್ ಯಾದವ್ 4 ವಿಕೆಟ್ ಹಾಗೂ ಶಿವಂ ದುಬೆ 3 ವಿಕೆಟ್‌, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಕಬಳಿಸುವ ಮೂಲಕ ಯುಎಇ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಅಭಿಷೇಕ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಗೆಲುವಿನ ರೂವಾರಿಗಳಾದರು. ಅಭಿಷೇಕ್ ಶರ್ಮಾ 16 ಎಸೆತಗಳನ್ನು ಎದರಿಸಿ ಎರಡು ಬೌಂಡರಿ ಹಾಗೂ ಮೂರು ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ 30 ರನ್ ಸಿಡಿಸಿದರು. ಇನ್ನು ಶುಭ್‌ಮನ್ ಗಿಲ್ ಅಜೇಯ 20 ರನ್ ಬಾರಿಸಿದರೆ, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅಜೇಯ 7 ರನ್ ಗಳಿಸಿದರು.

ಇದೀಗ ಭಾರತ ಕ್ರಿಕೆಟ್ ತಂಡವು ಸೆಪ್ಟೆಂಬರ್ 14ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಸೂರ್ಯಕುಮಾರ್ ಯಾದವ್ ಪಡೆ ಬಹುತೇಕ ಸೂಪರ್ 4 ಹಂತಕ್ಕೆ ಅಧಿಕೃತವಾಗಿ ಲಗ್ಗೆಯಿಡಲಿದೆ. ಸದ್ಯ ಟೀಂ ಇಂಡಿಯಾದ ಪ್ರದರ್ಶನ ಗಮನಿಸಿದರೆ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ