
ದುಬೈ: 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ನೇತೃತ್ವದ ಟೀಂ ಇಂಡಿಯಾ ನಿರೀಕ್ಷೆಯಂತೆಯೇ ಭರ್ಜರಿ ಶುಭಾರಂಭ ಮಾಡಿದೆ. ಯುಎಇ ವಿರುದ್ದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ 9 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಭಾರತದ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಯುಎಇ ತಂಡವು ಕೇವಲ 57 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ ಒಂದು ವಿಕೆಟ್ ಕಳೆದುಕೊಂಡು 4.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.
ಚೈನಾಮನ್ ಸ್ಪಿನ್ನರ್ ಖ್ಯಾತಿಯ ಕುಲ್ದೀಪ್ ಯಾದವ್ ಕೇವಲ 2.1 ಓವರ್‌ಗಳಲ್ಲಿ 7 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾದ ಗೆಲುವಿನ ರೂವಾರಿ ಎನಿಸಿದರು. ಇನ್ನು 2024ರ ಐಸಿಸಿ ಟಿ20 ಬಳಿಕ ಮೊದಲ ಬಾರಿಗೆ ಭಾರತ ಪರ ಟಿ20 ಪಂದ್ಯವನ್ನಾಡಿದ ವೇಗಿ ಬುಮ್ರಾ ಮೂರು ಓವರ್ ಬೌಲಿಂಗ್ ಮಾಡಿ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ಬುಮ್ರಾ, ಯುಎಇ ಎದುರಿನ ಪಂದ್ಯದಲ್ಲಿ ಬರೋಬ್ಬರಿ ಆರು ವರ್ಷಗಳ ಬಳಿಕ ಹೊಸ ಪ್ರಯತ್ನ ಮಾಡಿ ಗಮನ ಸೆಳೆದಿದ್ದಾರೆ.
ಯುಎಇ ಎದುರಿನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಜಸ್ಪ್ರೀತ್ ಬುಮ್ರಾ ಲೀಡ್ ಬೌಲರ್ ಆಗಿದ್ದರೂ ಮೊದಲ ಓವರ್ ಹಾರ್ದಿಕ್ ಪಾಂಡ್ಯ ಎಸೆದರು. ಇನ್ನು ಬುಮ್ರಾ ಎರಡನೇ ಓವರ್ ಎಸೆದರು.
ತಮ್ಮ ಸ್ಪೆಲ್‌ನ ಎರಡನೇ ಓವರ್‌ನಲ್ಲೇ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಯುಎಇ ತಂಡದ ಆರಂಭಿಕ ಬ್ಯಾಟರ್ ಆಲಿಶಾನ್ ಸರೂಫ್ ಅವರನ್ನು ಬಲಿ ಪಡೆಯುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಡುವಲ್ಲಿ ಯಶಸ್ವಿಯಾದರು. ಅಲಿಶಾನ್ ಕೇವಲ 17 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಸ್ಪೋಟಕ 22 ರನ್ ಸಿಡಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದರು. ಆದರೆ ಬುಮ್ರಾ ಕರಾರುವಕ್ಕಾದ ಯಾರ್ಕರ್ ದಾಳಿಗೆ ಅಲಿಶಾನ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು.
ಸಾಮಾನ್ಯವಾಗಿ ಜಸ್ಪ್ರೀತ್ ಬುಮ್ರಾ ಪವರ್‌ಪ್ಲೇನಲ್ಲಿ ಅಂದರೆ ಮೊದಲ ಆರು ಓವರ್‌ಗಳ ಪೈಕಿ ಎರಡು ಓವರ್ ಬೌಲಿಂಗ್ ಮಾಡ್ತಾರೆ. ಇನ್ನುಳಿದ ಎರಡು ಓವರ್‌ಗಳನ್ನು ಇನ್ನಿಂಗ್ಸ್‌ನ ಮಧ್ಯದಲ್ಲಿ ಅಥವಾ ಡೆತ್ ಓವರ್‌ನಲ್ಲಿ ಬುಮ್ರಾ ಎಸೆಯುತ್ತಿದ್ದರು. ಆದರೆ ಸೂರ್ಯಕುಮಾರ್ ಯಾದವ್, ಬುಮ್ರಾಗೆ ಪವರ್ ಪ್ಲೇನಲ್ಲೇ 3 ಓವರ್ ಬೌಲಿಂಗ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಬುಮ್ರಾ ಅವರಿಂದ ಪವರ್‌ಪ್ಲೇನಲ್ಲೇ ಮೂರು ಓವರ್ ಬೌಲಿಂಗ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಾದ ಬಳಿಕ ಬುಮ್ರಾಗೆ ಬೌಲಿಂಗ್ ಮಾಡುವ ಅವಕಾಶವೇ ಸಿಗಲಿಲ್ಲ. ಯಾಕಂದ್ರೆ ಯುಎಇ ತಂಡವು 57 ರನ್ ಗಳಿಸುವಷ್ಟರಲ್ಲಿ ಗಂಟುಮೂಟೆ ಕಟ್ಟಿತು. 2019ರ ಬಳಿ ಜಸ್ಪ್ರೀತ್ ಬುಮ್ರಾ ಇದೇ ಮೊದಲ ಸಲ ಪವರ್‌ಪ್ಲೇನಲ್ಲಿ ಮೂರು ಓವರ್ ಬೌಲಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜಸ್ಪ್ರೀತ್ ಬುಮ್ರಾ 2022ರಿಂದ 2025ರವರೆಗೆ ರೋಹಿತ್ ಶರ್ಮಾ ನಾಯಕತ್ವದಡಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಆಗ ರೋಹಿತ್ ಶರ್ಮಾ ಅವರಿಂದ ಪವರ್‌ಪ್ಲೇನಲ್ಲಿ ಬುಮ್ರಾಗೆ ಮೂರು ಓವರ್ ಬೌಲಿಂಗ್ ಮಾಡಿಸಲು ಸಾಧ್ಯವಾಗಿರಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.