
ಬೆಂಗಳೂರು (ಆ. 8): ದ್ವೀಪರಾಷ್ಟ್ರ ಶ್ರೀಲಂಕಾದ ಆತಿಥ್ಯದಲ್ಲಿ ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದೆ. ಗಾಯಾಳುವಾಗಿರುವ ಜಸ್‌ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಏಷ್ಯಾಕಪ್ ಟೂರ್ನಿಗೆ ಅಲಭ್ಯರಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಗಾಯದ ಕಾರಣ ಆಯ್ಕೆಗೆ ಲಭ್ಯರಿರಲಿಲ್ಲ. ಅವರು ಪ್ರಸ್ತುತ ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಏಷ್ಯಾಕಪ್ ಟಿ20 ಸರಣಿಗೆ ಮೂವರು ಆಟಗಾರರನ್ನು ಮೀಸಲು ಆಟಗಾರರಾಗಿ ಹೆಸರಿಸಲಾಗಿದ್ದು, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಹಾಗೂ ದೀಪಕ್ ಚಹರ್ ಅನ್ನು ಬಿಸಿಸಿಐ ಹೆಸರಿಸಿದೆ. ಏಷ್ಯಾಕಪ್ ಟಿ20 ಟೂರ್ನಿ ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿದ್ದು, ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದದ ವಿರುದ್ಧ ಆಗಸ್ಟ್ 28 ರಂದು ಆಡಲಿದೆ. ಆದರೆ, ಏಷ್ಯಾಕಪ್‌ನ ಮಹತ್ವದ ಪಂದ್ಯಕ್ಕೂ ಮುನ್ನವೇ ಜಸ್‌ಪ್ರೀತ್ ಬುಮ್ರಾ ಅಲಭ್ಯತೆ ಭಾರತಕ್ಕೆ ದೊಡ್ಡ ಪೆಟ್ಟು ನೀಡಿದೆ. ಭಾರತ ತಂಡ ಏಷ್ಯಾಕಪ್‌ನಲ್ಲಿ ಎ ಗುಂಪಿನಲ್ಲಿದ್ದು, ಪಾಕಿಸ್ತಾನ ಅಲ್ಲದೆ ಅರ್ಹತಾ ಸುತ್ತಿನಿಂದ ಬಂದ ತಂಡವೊಂದರ ವಿರುದ್ಧ ಆಡಲಿದೆ. ಬಿ ಗುಂಪಿನಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳಿವೆ. ಆಗಸ್ಟ್ 27 ರಿಂದ ಸೆಪ್ಟೆಂಬರ್ 11ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿದೆ.
ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರನ್ನು 15 ಸದಸ್ಯರ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಮುಂಬರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಈ ಇಬ್ಬರೂ ಸ್ಟಾರ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಈ ಆಯ್ಕೆ ಮಾಡಲಾಗಿದೆ. ಭಾರತ ತಂಡ ಮಾಜಿ ನಾಯಕರಾಗಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಐದು ಪಂದ್ಯಗಳ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದರು. ಇನ್ನು ರೋಹಿತ್ ಶರ್ಮ್, ಕೋವಿಡ್ ಪಾಸಿಟಿವ್ ಹಾಗೂ ಆ ಬಳಿಕ ಎದುರಾದ ಗಾಯದ ಸಮಸ್ಯೆಯ ಬಳಿಕ ಹಲವು ದಿನದ ನಂತರ ತಂಡಕ್ಕೆ ವಾಪಸಾಗಿದ್ದಾರೆ.
ರಾಷ್ಟ್ರೀಯ ಆಯ್ಕೆ ಸಮಿತಿ ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ ಅವರನ್ನು ಉಳಿಸಿಕೊಂಡಿದ್ದು, ಇತರ ಆಯ್ಕೆಗಳಾದ ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮನ್ಸ್‌ಗೆ ವಿಶ್ರಾಂತಿ ನೀಡುವ ತೀರ್ಮಾನ ಮಾಡಿದೆ. ಇನ್ನು ತಂಡದ 2ನೇ ಲೆಗ್ ಸ್ಪಿನ್ನರ್ ಆಗಿ ರವಿ ಬಿಷ್ಣೋಯ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಬುಮ್ರಾ ಹಾಗೂ ಹರ್ಷಲ್ ಪಟೇಲ್ ಅನುಪಸ್ಥಿತಿಯಲ್ಲಿ ಹಲವು ತಂಡಗಳ ಟೂರ್ನಿಯಲ್ಲಿ ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್ ಹಾಗೂ ವೇಗದ ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮೂಲಕ ವೇಗದ ಬೌಲಿಂಗ್ ವಿಭಾಗವನ್ನು ನಿಭಾಯಿಸಲಿದೆ.
ಕಾಮನ್ವೆಲ್ತ್ ಪದಕ ವಿಜೇತ ಸಂಕೇತ್ ಶಸ್ತ್ರಚಿಕಿತ್ಸೆಗೆ ನೆರವಾದ ಭಾರತ ಸರ್ಕಾರ..!
ಇಶಾನ್ ಕಿಶನ್ ಇಲ್ಲ: ತಂಡದಿಂದ ಹೊರಬಿದ್ದಿರುವ ಪ್ರಮುಖ ಆಟಗಾರರ ಪೈಕಿ, ಇಶಾನ್ ಕಿಶನ್ ಪ್ರಮುಖರಾಗಿದ್ದಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಅವರು ಆಡಿದ್ದರು. ಇದರಿಂದಾಗಿ ಅಗ್ರ 5 ಬ್ಯಾಟಿಂಗ್ ವಿಭಾಗದಲ್ಲಿ ಏಕೈಕ ಎಡಗೈ ಬ್ಯಾಟ್ಸ್‌ಮನ್ ಆಗಿ ರಿಷಭ್ ಪಂತ್ ಅವರನ್ನು ಮಾತ್ರ ಹೊಂದಿರಲಿದೆ. ರವೀಂದ್ರ ಜಡೇಜಾ ನಂತರದ ಕ್ರಮಾಂಕದಲ್ಲಿ ಇಳಿಯುವ ಬ್ಯಾಟ್ಸ್‌ಮನ್ ಆಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಗಮನಸೆಳೆದಿರುವ ಟೀಮ್ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಗೆ ಏಷ್ಯಾಕಪ್‌ನಲ್ಲಿ ಇರುವ ನಾಲ್ಕು ಸ್ಪಿನ್ ಬೌಲಿಂಗ್ ಆಯ್ಕೆಯಲ್ಲಿ ಒಬ್ಬರಾಗಿದ್ದಾರೆ. ಅಶ್ವಿನ್ ಅಲ್ಲದೆ, ಯಜುವೇಂದ್ರ ಚಾಹಲ್, ರವಿ ಬಿಷ್ಣೋತ್ ಹಾಗೂ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಲಿ ಚಾಂಪಿಯನ್ ತಂಡ ಎನಿಸಿದೆ.
Commonwealth Games ಚಿನ್ನ ಗೆದ್ದ ಶರತ್ ಕಮಲ್, ಬೆಳ್ಳಿಗೆ ತೃಪ್ತಿಪಟ್ಟ ಭಾರತ ಹಾಕಿ ತಂಡ..!
ಏಷ್ಯಾಕಪ್‌ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ಕ್ಯಾಪ್ಟನ್), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿ.ಕೀ), ದಿನೇಶ್ ಕಾರ್ತಿಕ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಆರ್ಶ್‌ದೀಪ್ ಸಿಂಗ್, ಅವೇಶ್ ಖಾನ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.