Asia Cup Final ಸಿರಾಜ್ ಬಿರುಗಾಳಿಗೆ ಮಂಕಾದ ಲಂಕಾ, ಕೇವಲ 50 ರನ್‌ಗೆ ಆಲೌಟ್!

By Suvarna News  |  First Published Sep 17, 2023, 5:11 PM IST

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಬೆಂಕಿ ಬಿರುಗಾಳಿಗೆ ಶ್ರೀಲಂಕಾ ತಂಡ ತತ್ತರಿಸಿದೆ. ಒಂದೇ ಓವರ್‌ನಲ್ಲಿ 4 ವಿಕೆಟ್ ಕಬಳಿಸಿದ ಸಿರಾಜ್ ಒಟ್ಟು 6 ವಿಕೆಟ್ ಕಿತ್ತು ಶ್ರೀಲಂಕಾ ತಂಡವನ್ನು 50 ರನ್‌ಗೆ ಆಲೌಟ್ ಮಾಡಿದ್ದಾರೆ. ಟ್ರೋಫಿ ಗೆಲುವಿಗೆ ಭಾರತ 51 ರನ್ ಟಾರ್ಗೆಟ್ ನೀಡಿದೆ.


ಕೊಲೊಂಬೊ(ಸೆ.7) 2,0,17, 0,0,4 ಇದು ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಸಿಡಿಸಿದ ರನ್.  ಹಾಲಿ ಚಾಂಪಿಯನ್ ಶ್ರೀಲಂಕಾ ಟ್ರೋಫಿ ಉಳಿಸಿಕೊಳ್ಳುವ ಮೊದಲ ಪ್ರಯತ್ನಕ್ಕೆ ಭಾರಿ ಹಿನ್ನಡೆಯಾಗಿದೆ. ಕಾರಣ  ಮೊದಲ ಓವರ್‌ನಿಂದಲೇ ಭಾರತದ ದಾಳಿಗೆ ಶ್ರೀಲಂಕಾ ಉತ್ತರಿಸಲು ತಡಕಾಡಿತು. ಮೊಹಮ್ಮದ್ ಸಿರಾಜ್ ದಾಳಿ ಆರಂಭಿಸಿದ ಬೆನ್ನಲ್ಲೇ ಶ್ರೀಲಂಕಾ ಕ್ರೀಸ್‌ನಲ್ಲಿ ನಿಲ್ಲಲು ಪರದಾಡಿತು.  ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ50  ರನ್‌ಗೆ ಆಲೌಟ್ ಆಗಿದೆ. ಕೇವಲ 15.2 ಓವರ್‌ಗಳಲ್ಲಿ 50 ರನ್ ಸಿಡಿಸಿ ಎಲ್ಲಾ ವಿಕೆಟ್ ಕಳೆದುಕೊಂಡಿತು ಈ ಮೂಲಕ ಭಾರತಕ್ಕೆ  51 ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದ  ಶ್ರೀಲಂಕಾ ಮಳೆ ಲೆಕ್ಕಾಚಾರ ಹಾಕಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇತ್ತ ಮಳೆ ವಕ್ಕರಿಸಿ ಪಂದ್ಯ ಕೊಂಚ ವಿಳಂಬವಾಗಿ ಆರಂಭಗೊಂಡಿತು. ಆದರೆ ಮೊದಲ ಓವರ್‌ನಿಂದಲೇ ಶ್ರೀಲಂಕಾ ವಿಕೆಟ್ ಪತನ ಆರಂಭಗೊಂಡಿತು. ಮೊದಲ ಓವರ್‌ನಲ್ಲೇ ಜಸ್ಪ್ರೀತ್ ಬುಮ್ರಾ ಕುಸಾಲ್ ಪರೇರಾ ವಿಕೆಟ್ ಕಬಳಿಸಿದರು. ಇತ್ತ ಮೊಹಮ್ಮದ್ ಸಿರಾಜ್ ದಾಳಿ ಆರಂಭಗೊಳ್ಳುತ್ತಿದ್ದಂತೆ ಶ್ರೀಲಂಕಾ ಬೆವರಿಳಿದಿತ್ತು.

Latest Videos

undefined

MOHAMMED SIRAJ ಲಂಕೆಗೆ ಬೆಂಕಿಯಿಟ್ಟ ಸಿರಾಜ್..! ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ವೈರಲ್

ಒಂದೇ ಓವರ್‌ನಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದರೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 4 ವಿಕೆಟ್ ಕಬಳಿಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ಸಿರಾಜ್ ಪಾತ್ರರಾಗಿದ್ದಾರೆ. ಸಿರಾಜ್ ದಾಳಿಗೆ ಶ್ರೀಲಂಕಾ 6 ವಿಕೆಟ್ ಪತನಗೊಂಡಿತು. ಇತ್ತ ಹಾರ್ದಿಕ್ ಪಾಂಡ್ಯ ದಾಳಿ ಬಿರುಸುಗೊಂಡಿತು. ಪ್ರಮುಖ 3 ವಿಕೆಟ್ ಕಬಳಿಸಿದರು. ಶ್ರೀಲಂಕಾ 15.2 ಓವರ್‌ಗಳಲ್ಲಿ ಕೇವಲ 50 ರನ್‌ಗೆ ಆಲೌಟ್ ಆಯಿತು. 

ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಪರ ಗರಿಷ್ಠ ರನ್ ಸಿಡಿಸಿದ ಹೆಗ್ಗಳಿಕೆಗೆ ಕುಸಾಲ್ ಮೆಂಡಿಸ್ ಪಾತ್ರರಾಗಿದ್ದಾರೆ. ಕುಸಾಲ್ 17 ರನ್ ಸಿಡಿಸಿ ಔಟಾಗಿದ್ದಾರೆ. ಇನ್ನು ಅಂತಿಮ ಹಂತದಲ್ಲಿ ದುಶಾನ್ ಹೆಮಂತ 13 ರನ್ ಸಿಡಿಸಿದರು. ಇವರಿಬ್ಬರನ್ನು ಬಿಟ್ಟರೆ ಎರಡಂಕಿ ಯಾರೂ ದಾಟಿಲ್ಲ. ನಾಲ್ವರು ಬ್ಯಾಟ್ಸ್‌ಮನ್ ಡಕೌಟ್‌ಗೆ ಬಲಿಯಾಗಿದ್ದಾರೆ. 

ಏಕದಿನ ಫೈನಲ್ ಪಂದ್ಯದಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತ ಅನ್ನೋ ಕುಖ್ಯಾತಿಗೆ ಏಷ್ಯಾಕಪ್ 2023 ಫೈನಲ್ ಪಂದ್ಯ ಗುರಿಯಾಗಿದೆ. ಇದಕ್ಕೂ ಮೊದಲು ಶ್ರೀಲಂಕಾ ವಿರುದ್ಧ ಭಾರತ 54 ರನ್‌ಗೆ ಆಲೌಟ್ ಆಗಿತ್ತು

ಮೊದಲ 3 ಓವರ್‌ನಲ್ಲೇ 5 ವಿಕೆಟ್ ಗೊಂಚಲು ಪಡೆದ ಆರ್‌ಸಿಬಿ ವೇಗಿ! ಸಿರಾಜ್ ದಾಳಿಗೆ, ಲಂಕಾ ಚೆಲ್ಲಾಪಿಲ್ಲಿ

ಏಕದಿನ ಫೈನಲ್ ಪಂದ್ಯದಲ್ಲಿ ದಾಖಲಾದ ಅತ್ಯಲ್ಪ ಮೊತ್ತ 
50 ರನ್, ಶ್ರೀಲಂಕಾ vs ಭಾರತ (2023)
54 ರನ್ ಭಾರತ vs ಶ್ರೀಲಂಕಾ(2000)
78 ಶ್ರೀಲಂಕಾ vs ಪಾಕಿಸ್ತಾನ(2002)
81 ಒಮನ್  vs ನಮಿಬಿಯಾ(2019)
 

click me!