
ದುಬೈ: 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯು ಇಂದಿನಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆಫ್ಘಾನಿಸ್ತಾನ ಹಾಗೂ ಹಾಂಕಾಂಗ್ ತಂಡಗಳು ಕಾದಾಡಲಿವೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಸೆಪ್ಟೆಂಬರ್ 10ರಂದು ಯುಎಇ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಯುಎಇ ವಿರುದ್ದದ ಮೊದಲ ಪಂದ್ಯಕ್ಕಾಗಿ ದುಬೈನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಈಗಾಗಲೇ ಭರ್ಜರಿ ಪ್ರಾಕ್ಟೀಸ್ ಮಾಡುತ್ತಿದೆ. ಇನ್ನು ಯುಎಇ ಎದುರಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಕೂಡಾ ಬಹುತೇಕ ಕನ್ಫರ್ಮ್ ಆಗಿದೆ. ಈ ಬಗ್ಗೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಕೂಡಾ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಆಟಗಾರರ ಪ್ರಾಕ್ಟೀಸ್ ವೇಳೆ ಮಾತನಾಡಿದ ಟೀಂ ಇಂಡಿಯಾ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, 'ಶಿವಂ ದುಬೆಯಂತಹ ಹುಡುಗ 4 ಓವರ್ ಬೌಲಿಂಗ್ ಮಾಡಬಲ್ಲನು ಎನ್ನುವುದು ನಮಗೆ ತುಂಬಾ ಮುಖ್ಯವಾಗುತ್ತದೆ. ಹೀಗಾಗಿ ನಾವು ಯಾವುದೇ ಅಂಶವನ್ನು ಬಿಡಲು ಬಯಸುವುದಿಲ್ಲ. ನಾನು ಯಾವಾಗಲೂ ಆಲ್ರೌಂಡರ್‌ಗಳಿಗೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಸ್ಕಿಲ್ ಹೀಗೆ ಎರಡೂ ವಿಭಾಗದಲ್ಲೂ ಗಮನ ಹರಿಸಲು ಹೇಳಿದ್ದೇನೆ. ಕೆಲವೊಮ್ಮೆ ಅಭ್ಯಾಸದ ಸಮಯದಲ್ಲಿ ಹುಡುಗರು ತುಂಟರಾಗಿ ಕೇವಲ ಒಂದೇ ವಿಷಯದ ಮೇಲೆ ಗಮನ ಹರಿಸುತ್ತಾರೆ' ಎಂದು ಮಾರ್ಕೆಲ್ ಹೇಳಿದ್ದಾರೆ.
ಇನ್ನು ಮುಂದುವರೆದು, 'ಬೌಲಿಂಗ್‌ನಲ್ಲಿ ಒಮ್ಮೊಮ್ಮೆ ಆರು ಅಥವಾ ಏಳನೇ ಆಯ್ಕೆಯೂ ಕೂಡಾ ಮುಖ್ಯವಾಗುತ್ತದೆ. ಇದಕ್ಕಾಗಿ ನಮಗೆ ಈ ರೀತಿ ಕೆಲಸ ಮಾಡಬಲ್ಲ ಆಟಗಾರ ಬೇಕು. ಆತ ಜವಾಬ್ದಾರಿ ತೆಗೆದುಕೊಂಡು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ನಾಯಕ ಸೂರ್ಯಕುಮಾರ್ ಯಾದವ್ ಇಂತಹ ಆಟಗಾರರಿಗೆ ಜವಾಬ್ದಾರಿ ನೀಡಿದಾಗ ಅವರು ಅದಕ್ಕೆ ಸಿದ್ದರಿರಬೇಕು ಎಂದು ಮಾರ್ನೆ ಮಾರ್ಕೆಲ್ ಹೇಳಿದ್ದಾರೆ. ಈ ಮೂಲಕ ಬೌಲಿಂಗ್ ಕೋಚ್ ಮಾರ್ಕೆಲ್ ಹೇಳಿಕೆಯನ್ನು ಗಮನಿಸಿದರೆ, ಶಿವಂ ದುಬೆ ಕೂಡಾ ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಪಿಚ್ ಬಗ್ಗೆ ಮಾರ್ನೆ ಮಾರ್ಕೆಲ್ ಹೇಳಿದ್ದೇನು?
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆಯಲ್ಲಿ ಈ ಪಿಚ್ ತುಂಬಾ ಹಳೆಯದಾಗಿ ಕಾಣುತ್ತಿತ್ತು. ಯಾಕೆಂದರೆ ಇಲ್ಲಿ ಸಾಕಷ್ಟು ಪಂದ್ಯಗಳು ಆಡಲಾಗಿದೆ. ನಾವು ಈಗಿನ ಪಿಚ್ ನೋಡಿದರೆ, ಹುಲ್ಲು ಜಾಸ್ತಿಯಿದೆ. ಹೀಗಾಗಿ ನಾವು ಯಾವ ರಣತಂತ್ರ ಹಾಗೂ ಸಂಯೋಜನೆಯೊಂದಿಗೆ ಕಣಕ್ಕಿಳಿಯಬೇಕು ಎನ್ನುವುದನ್ನು ತೀರ್ಮಾನಿಸಲಿದ್ದೇವೆ ಎಂದು ಟೀಂ ಇಂಡಿಯಾ ಬೌಲಿಂಗ್ ಕೋಚ್ ಹೇಳಿದ್ದಾರೆ.
ಯುಎಇ ಎದುರಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಹೀಗಿದೆ ನೋಡಿ:
ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್.
ಏಷ್ಯಾಕಪ್ ಟೂರ್ನಿಗೆ ಭಾರತದ ವೇಳಾಪಟ್ಟಿ:
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಸೆಪ್ಟೆಂಬರ್ 10ರಂದು ಯುಎಇ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಸೆಪ್ಟೆಂಬರ್ 14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಾದಾಡಲಿದೆ. ಇನ್ನು ಸೆಪ್ಟೆಂಬರ್ 19ರಂದು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಓಮಾನ್ ತಂಡವನ್ನು ಎದುರಿಸಲಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಎಂಟು ಬಾರಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಹಾಲಿ ಚಾಂಪಿಯನ್ ಭಾರತ 9ನೇ ಏಷ್ಯಾಕಪ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.