
ದುಬೈ: 2025ರ ಏಷ್ಯಾಕಪ್ ಟೂರ್ನಿಯಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ತಂಡವು ಮತ್ತೊಮ್ಮೆ ಭಾರತ ಎದುರು ಮಂಡಿಯೂರಿದೆ. ಗ್ರೂಪ್ ಹಂತದ ಮೊದಲ ಮುಖಾಮುಖಿಯಲ್ಲಿ 7 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದ್ದ ಪಾಕಿಸ್ತಾನ, ಇದೀಗ ಸೂಪರ್-4 ಮುಖಾಮುಖಿಯಲ್ಲಿ 6 ವಿಕೆಟ್ ಅಂತರದ ಸೋಲು ಅನುಭವಿಸಿದೆ. ಈ ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಇದೀಗ ಮತ್ತೊಮ್ಮೆ ಪಾಕಿಸ್ತಾನದ ಗಾಯದ ಮೇಲೆ ಉಪ್ಪು ಸುರಿಯುವಂತ ಕೆಲಸ ಮಾಡಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಮಾತನಾಡಿದ ಸೂರ್ಯಕುಮಾರ್ ಯಾದವ್, ಪಾಕಿಸ್ತಾನವನ್ನು ಇನ್ನಿಲ್ಲದಂತೆ ಕಾಲೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಯಾವುದೇ ಜಿದ್ದಾಜಿದ್ದಿನ ಪೈಪೋಟಿ ಇಲ್ಲ ಎಂದು ಹೇಳಿದ್ದಾರೆ. ಇದು ಸಾಕಷ್ಟು ಅಚ್ಚರಿಗೂ ಕಾರಣವಾಯಿತು. ಆದರೆ ಸೂರ್ಯ ತಾವು ಹೀಗಂದಿದ್ದು ಏಕೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಓರ್ವ ಪತ್ರಕರ್ತ, ಈ ಬಾರಿ ಪಾಕಿಸ್ತಾನ ತಂಡವು ಎಷ್ಟು ಪ್ರತಿಸ್ಫರ್ಧೆ ನೀಡುತ್ತಿದೆ? ಎಂದು ಪ್ರಶ್ನಿಸಿದರು. ಇದಕ್ಕೆ ತಮಾಷೆಯಾಗಿಯೇ ಉತ್ತರಿಸಿದ ಸೂರ್ಯ, ಇನ್ಮೇಲೆ ನೀವು ಈ ರೀತಿ ಭಾರತ-ಪಾಕಿಸ್ತಾನ ನಡುವಿನ ಪೈಪೋಟಿ, ಪ್ರತಿಸ್ಪರ್ಧೆ ಎಂದು ಹೇಳುವುದನ್ನು ನಿಲ್ಲಿಸುವುದೇ ಒಳ್ಳೆಯದ್ದು ಎನಿಸುತ್ತದೆ. ಯಾಕೆಂದರೆ ಪ್ರತಿಸ್ಪರ್ಧೆ ಅಂದ್ರೆ 15-20 ಅಥವಾ 8-7ರ ಹೋರಾಟವಿದ್ದರೇ ಅದನ್ನು ಒಳ್ಳೆಯ ಕ್ರಿಕೆಟ್ ಪ್ರತಿಸ್ಪರ್ಧಿ ಎನ್ನಬಹುದು. ಅದು ಬಿಟ್ಟು ಒಂದೇ ರೀತಿಯ ಫಲಿತಾಂಶ ಪದೇ ಪದೇ ಬಂದರೆ ಅದು ಒಳ್ಳೆಯ ಕ್ರಿಕೆಟ್ ಎನಿಸುತ್ತದೆಯೇ ಹೊರತು, ಪ್ರತಿಸ್ಪರ್ಧೆ ಎನಿಸುವುದಿಲ್ಲ. 3-0, 10-1 ಈ ರೀತಿಯ ಫಲಿತಾಂಶವನ್ನು ನೋಡಿದ ಮೇಲೆ ಇದನ್ನು ಪ್ರತಿಸ್ಪರ್ಧೆ ಎಂದು ಕರೆಯಲು ಸಾಧ್ಯವೇ ಎಂದು ಸೂರ್ಯ ನಗುನಗುತ್ತಾ ಉತ್ತರಿಸಿದ್ದಾರೆ.
ಭಾರತ ಎದುರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಪದೇ ಪದೇ ಸೋಲುತ್ತಲೇ ಬಂದಿದೆ. ಅದರಲ್ಲೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಫಲಿತಾಂಶವನ್ನು ಗಮನಿಸಿದರೆ, ಸೂರ್ಯಕುಮಾರ್ ಯಾದವ್ ಹೇಳಿರುವುದು ಅಕ್ಷರಶಃ ಸತ್ಯ ಎನಿಸಲಿದೆ. ಇದುವರೆಗೂ ಉಭಯ ತಂಡಗಳು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 15 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 12 ಬಾರಿ ಗೆಲುವು ಸಾಧಿಸಿದ್ದರೇ, ಪಾಕಿಸ್ತಾನ ತಂಡವು ಕೇವಲ ಮೂರು ಬಾರಿ ಮಾತ್ರ ಗೆಲುವಿನ ರುಚಿ ಸವಿದಿದೆ. 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಆಡಿದ ಎಲ್ಲಾ ಟಿ20 ಪಂದ್ಯಗಳಲ್ಲೂ ಪಾಕಿಸ್ತಾನಕ್ಕೆ ಸೋಲುಣಿಸಿದೆ.
ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದಲ್ಲಿ ಅನುಭವಿಸಿದ್ದ ಮುಖಭಂಗಕ್ಕೆ ಸೇಡು ತೀರಿಸಿಕೊಳ್ಳಲಿದೆ ಎಂದು ಕೆಲವು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದರು. ಮೊದಲಿಗೆ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡವು ಸಿಕ್ಕ ಜೀವದಾನಗಳನ್ನು ಬಳಸಿಕೊಂಡು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಕೇವಲ 18.5 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಪಾಕ್ ಎದುರು ಮೈ ಚಳಿ ಬಿಟ್ಟು ಬ್ಯಾಟ್ ಬೀಸಿದ ಅಭಿಷೇಕ್ ಶರ್ಮಾ ಕೇವಲ 39 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಸ್ಪೋಟಕ 74 ರನ್ ಚಚ್ಚಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.