
ದುಬೈ: ಬಹುನಿರೀಕ್ಷಿತ 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯು ಇಂದಿನಿಂದ ಆರಂಭವಾಗುತ್ತಿದೆ. ಆದರೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವುದು ಸೆಪ್ಟೆಂಬರ್ 14ರಂದು ನಡೆಯಲಿರುವ ಪಂದ್ಯವನ್ನು. ಹೌದು, ಸೆಪ್ಟೆಂಬರ್ 14ರಂದು ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದು ಗುರುತಿಸಿಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಹೀಗಾಗಿ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೆಂದರೇ ಹಾಗೆ, ಪ್ರತಿಯೊಬ್ಬ ಆಟಗಾರ ತನ್ನ ದೇಶದ ಗೆಲುವಿಗಾಗಿ ಶಕ್ತಿಮೀರಿ ಹೋರಾಡುತ್ತಾರೆ. ಪಹಲ್ಗಾಂ ಹಾಗೂ ಆಪರೇಷನ್ ಸಿಂದೂರ್ ಬಳಿಕ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೈದಾನದಲ್ಲಿ ಮುಖಾಮುಖಿಯಾಗುತ್ತಿರುವುದರಿಂದ ಸಹಜವಾಗಿಯೇ ಕ್ರಿಕೆಟ್ ಅಭಿಮಾನಿಗಳ ಚಿತ್ತ ಈ ಪಂದ್ಯದ ಮೇಲೆ ನೆಟ್ಟಿದೆ. ಮೈದಾನದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಭಾರತ ತಂಡವು ಪಾಕಿಸ್ತಾನವನ್ನು ಬಗ್ಗುಬಡಿಯುತ್ತಲೇ ಬಂದಿದೆ. ಇದೀಗ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮೊದಲೇ ವೇದಿಕೆ ಮೇಲೆ ಪಾಕ್ ನಾಯಕನಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮೊದಲೇ ಎಲ್ಲಾ 8 ತಂಡಗಳ ಆಟಗಾರರು ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನ ಎದುರಿನ ಪಂದ್ಯದ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದರು. ಸೂರ್ಯಕುಮಾರ್ ಯಾದವ್ ಅವರನ್ನು ಉದ್ದೇಶಿಸಿ ಮಾಧ್ಯಮದವರು, ಭಾರತ-ಪಾಕಿಸ್ತಾನ ನಡುವೆ ಟೆನ್ಷನ್ ಇರುವುದರ ನಡುವೆ ಆಟಗಾರರು ತಮ್ಮ ಸಿಟ್ಟನ್ನು ನಿಯಂತ್ರಿಸಲು ನೀವೇನಾದರೂ ನಿರ್ದೇಶನ ನೀಡಿದ್ದೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸೂರ್ಯ, "ಮೈದಾನಕ್ಕಿಳಿದಾಗ ನಮ್ಮಲ್ಲಿ ಆಕ್ರಮಣಕಾರಿ ಮನೋಭಾವ ಯಾವಾಗಲೂ ಇದ್ದೇ ಇರುತ್ತದೆ. ಆಕ್ರಮಣಕಾರಿ ಮನೋಭಾವ ಇಲ್ಲದೇ ಕ್ರಿಕೆಟ್ ಆಡಲು ಸಾಧ್ಯವೇ ಇಲ್ಲ. ನಾವು ಮುಂದಿನ ಮ್ಯಾಚ್ ಆಡಲು ಉತ್ಸುಕನಾಗಿದ್ದೇನೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಎದುರು ನಮ್ಮ ತಂಡ ಆಕ್ರಮಣಕಾರಿ ಆಟವನ್ನು ಆಡಲಿದೆ ಎನ್ನುವ ಓಪನ್ ವಾರ್ನಿಂಗ್ ಕೊಟ್ಟಿದ್ದಾರೆ ಸೂರ್ಯಕುಮಾರ್ ಯಾದವ್.
ಏಷ್ಯಾಕಪ್ ಟೂರ್ನಿಗೆ ಭಾರತದ ವೇಳಾಪಟ್ಟಿ:
ಟೀಂ ಇಂಡಿಯಾ, ಸೆಪ್ಟೆಂಬರ್ 10ರಂದು ಯುಎಇ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಸೆಪ್ಟೆಂಬರ್ 14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಾದಾಡಲಿದೆ. ಇನ್ನು ಸೆಪ್ಟೆಂಬರ್ 19ರಂದು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಓಮಾನ್ ತಂಡವನ್ನು ಎದುರಿಸಲಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಎಂಟು ಬಾರಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.
ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಫಲಿತಾಂಶ:
1984ರ ಏಷ್ಯಾಕಪ್: ಭಾರತಕ್ಕೆ 54 ರನ್ ಅಂತರದ ಜಯ
1988ರ ಏಷ್ಯಾಕಪ್: ಭಾರತಕ್ಕೆ 4 ವಿಕೆಟ್ ಅಂತರದ ಜಯ
1995ರ ಏಷ್ಯಾಕಪ್: ಪಾಕಿಸ್ತಾನಕ್ಕೆ 97 ರನ್ ಅಂತರದ ಜಯ
1997ರ ಏಷ್ಯಾಕಪ್: ಯಾವುದೇ ಫಲಿತಾಂಶವಿಲ್ಲ
2000ರ ಏಷ್ಯಾಕಪ್: ಪಾಕಿಸ್ತಾನಕ್ಕೆ 44 ರನ್ ಅಂತರದ ಜಯ
2004ರ ಏಷ್ಯಾಕಪ್: ಪಾಕಿಸ್ತಾನಕ್ಕೆ 59 ರನ್ ಅಂತರದ ಜಯ
2008ರ ಏಷ್ಯಾಕಪ್: ಭಾರತಕ್ಕೆ 6 ವಿಕೆಟ್ ಅಂತರದ ಜಯ
2008ರ ಏಷ್ಯಾಕಪ್: ಪಾಕಿಸ್ತಾನಕ್ಕೆ 8 ವಿಕೆಟ್ ಅಂತರದ ಜಯ
2010ರ ಏಷ್ಯಾಕಪ್: ಭಾರತಕ್ಕೆ 3 ವಿಕೆಟ್ ಅಂತರದ ಜಯ
2012ರ ಏಷ್ಯಾಕಪ್: ಭಾರತಕ್ಕೆ 6 ವಿಕೆಟ್ ಅಂತರದ ಜಯ
2014ರ ಏಷ್ಯಾಕಪ್: ಪಾಕಿಸ್ತಾನಕ್ಕೆ ಒಂದು ವಿಕೆಟ್ ಅಂತರದ ಜಯ
2016ರ ಏಷ್ಯಾಕಪ್: ಭಾರತಕ್ಕೆ 5 ವಿಕೆಟ್ ಅಂತರದ ಜಯ (ಟಿ20 ಮಾದರಿ)
2018ರ ಏಷ್ಯಾಕಪ್: ಭಾರತಕ್ಕೆ 8 ವಿಕೆಟ್ ಅಂತರದ ಜಯ
2018ರ ಏಷ್ಯಾಕಪ್: ಭಾರತಕ್ಕೆ 9 ವಿಕೆಟ್ ಅಂತರದ ಜಯ
2022ರ ಏಷ್ಯಾಕಪ್: ಭಾರತಕ್ಕೆ 5 ವಿಕೆಟ್ ಅಂತರದ ಜಯ(ಟಿ20 ಮಾದರಿ)
2022ರ ಏಷ್ಯಾಕಪ್: ಪಾಕಿಸ್ತಾನಕ್ಕೆ 5 ವಿಕೆಟ್ ಅಂತರದ ಜಯ(ಟಿ20 ಮಾದರಿ)
2023ರ ಏಷ್ಯಾಕಪ್: ಮೊದಲ ಮುಖಾಮುಖಿಯಲ್ಲಿ ಯಾವುದೇ ಫಲಿತಾಂಶವಿಲ್ಲ
2023ರ ಏಷ್ಯಾಕಪ್: ಭಾರತಕ್ಕೆ 228 ರನ್ ಅಂತರದ ಭಾರೀ ಜಯ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.