
ದುಬೈ: ಏಷ್ಯಾಕಪ್‌ನಲ್ಲಿ ಭಾರತ ದಾಖಲೆಯ 9ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ 17ನೇ ಆವೃತ್ತಿಯ ಟೂರ್ನಿಯ ಫೈನಲ್
ನಲ್ಲಿ ಟೀಂ ಇಂಡಿಯಾ ತನ್ನ ಬದ್ದವೈರಿ ಪಾಕಿಸ್ತಾನ ವಿರುದ್ಧ 5 ವಿಕೆಟ್ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಪಾಕಿಸ್ತಾನದ 3ನೇ ಟ್ರೋಫಿ ಕನಸು ಭಗ್ನಗೊಂಡಿತು. ಗುಂಪು ಹಂತ ಹಾಗೂ ಸೂಪರ್-4ನಲ್ಲಿ ಪಾಕಿಸ್ತಾನವನ್ನು ಸುಲಭದಲ್ಲಿ ಮಣಿಸಿದ್ದ ಭಾರತ ಫೈನಲ್ ಪಂದ್ಯದಲ್ಲಿ ಗೆಲ್ಲಲು ತಿಣುಕಾಡಿತು. ಬದ್ದ ಎದುರಾಳಿ ಪಾಕಿಸ್ತಾನವನ್ನು ಫೈನಲ್‌ನಲ್ಲಿ ಬಗ್ಗುಬಡಿದ ಭಾರತಕ್ಕೆ ಬಿಸಿಸಿಐ ಬಂಪರ್ ಬಹುಮಾನ ಘೋಷಿಸಿದೆ. ಏಷ್ಯಾಕಪ್ ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ನಗದು ಬಹುಮಾನದ 10 ಪಟ್ಟು ಬಹುಮಾನ ಇದೀಗ ಟೀಂ ಇಂಡಿಯಾ ಪಾಲಾಗಿದೆ.
ಏಷ್ಯಾಕಪ್ ಗೆದ್ದ ಭಾರತ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಬಿಸಿಸಿಐ ಬರೋಬ್ಬರಿ ₹21 ಕೋಟಿ ನಗದು ಬಹುಮಾನ ಘೋಷಿಸಿದೆ. ಇದು ಏಷ್ಯಾಕಪ್ ಆಯೋಜಕರಾದ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನಿಂದ ಚಾಂಪಿಯನ್ ತಂಡಕ್ಕೆ ಸಿಗುವ ಮೊತ್ತಕ್ಕಿಂತ 10 ಪಟ್ಟು ಹೆಚ್ಚು. ಟೂರ್ನಿಯ ಬಹುಮಾನ ಮೊತ್ತವಾಗಿ ಭಾರತಕ್ಕೆ ₹2.6 ಕೋಟಿ ಲಭಿಸಿತು. ರನ್ನರ್-ಅಪ್ ಪಾಕಿಸ್ತಾನಕ್ಕೆ ಏಷ್ಯಾ ಕ್ರಿಕೆಟ್ ಮಂಡಳಿಯಿಂದ 1.3 ಕೋಟಿ ರು. ಬಹುಮಾನ ದೊರೆಯಿತು. ಅಭಿಷೇಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಬೌಲಿಂಗ್‌ನಲ್ಲಿ ಆರಂಭದಲ್ಲಿ ಎಡವಿ ಬಳಿಕ ಪುಟಿದೆದ್ದ ಭಾರತ, ಬ್ಯಾಟಿಂಗ್‌ನಲ್ಲೂ ಆರಂಭಿಕ ಕುಸಿತದ ಬಳಿಕ ಚೇತರಿಸಿಕೊಂಡಿತು. ನಿರ್ಣಾಯಕ ಘಟ್ಟದಲ್ಲಿ ತಿಲಕ್ ವರ್ಮಾ, ಶಿವಂ ದುಬೆ ಹೋರಾಟ ತಂಡಕ್ಕೆ ಟ್ರೋಫಿ ತಂದುಕೊಟ್ಟಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ಸ್ಫೋಟಕ ಆರಂಭದ ಹೊರತಾಗಿಯೂ ಕಲೆ ಹಾಕಿದ್ದು 146 ರನ್. ತಂಡ 19.1 ಓವರ್‌ಗಳಲ್ಲೇ ಆಲೌಟಾಯಿತು. ಇದು ಸಣ್ಣ ಮೊತ್ತವೇ ಆಗಿದ್ದರೂ ಪಾಕ್‌ನ ಮಾರಕ ದಾಳಿ ಮುಂದೆ ಭಾರತ ಕುಸಿಯಿತು. ಬಳಿಕ ಪುಟಿದೆದ್ದ ಆದರೆ 19.4 ಓವರ್‌ಗಳಲ್ಲಿ ಜಯಗಳಿಸಿತು.
ಟೂರ್ನಿಯುದ್ದಕ್ಕೂ ಭಾರತಕ್ಕೆ ಅಬ್ಬರದ ಆರಂಭದ ಒದಗಿಸಿದ್ದ ಅಭಿಷೇಕ್ ಶರ್ಮಾ(5 ರನ್) ಈ ಪಂದ್ಯದಲ್ಲಿ ವಿಫಲರಾದರು. ಕಳಪೆ ಲಯದಿಂದ ಹೊರಬರದ ನಾಯಕ ಸೂರ್ಯ ಕೇವಲ 1 ರನ್‌ಗೆ ಔಟಾದರು. ಗಿಲ್ (12 ರನ್) ಕೂಡಾ ಮಿಂಚಲಿಲ್ಲ. 4 ಓವರ್‌ಗಳಲ್ಲಿ ಕೇವಲ 30 ರನ್‌ಗೆ ಪ್ರಮುಖ ಮೂವರು ಔಟಾಗಿದ್ದರಿಂದ ಭಾರತೀಯ ಪಾಳಯ ಆತಂಕಕ್ಕೊಳಗಾಗಿತ್ತು. ಈ ವೇಳೆ ತಂಡಕ್ಕೆ ನೆರವಾಗಿದ್ದ ತಿಲಕ್. 4ನೇ ವಿಕೆಟ್‌ಗೆ ಸ್ಯಾಮನ್ (24) ಜೊತೆಗೂಡಿ 57 ರನ್ ಸೇರಿಸಿದ ಅವರು, ಬಳಿಕ ದುಬೆ ಜೊತೆಗೂಡಿ ತಂಡವನ್ನು ಗೆಲುವಿನ ದಡ ತಲುಪಿಸಿದರು. 14 ಓವರ್‌ಲ್ಲಿ ಕೇವಲ 83 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ತಂಡ, ಮು೦ದಿನ 2 ಓವರ್ ಗಳಲ್ಲಿ 28 ರನ್ ದೋಚಿ ಪಂದ್ಯವನ್ನು ತನ್ನತ್ತ ಸೆಳೆದುಕೊಂಡಿತು. ದುಬೆ 22 ಎಸೆತಕ್ಕೆ 33 ರನ್ ಸಿಡಿಸಿದರೆ, ತಿಲಕ್ 53 ಎಸೆತಗಳಲ್ಲಿ 69 ರನ್ ಗಳಿಸಿ ಗೆಲುವಿನ ರೂವಾರಿಯಾದರು.
ಇದಕ್ಕೂ ಮುನ್ನ ಪಾಕ್ ಉತ್ತಮ ಆರಂಭ ಬಳಿಕ ಕುಸಿಯಿತು. ಫರ್ಹಾನ್, ಜಮಾನ್ ಸ್ಫೋಟಕ ಆಟವಾಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 9.4 ಓವರ್‌ಗಳಲ್ಲಿ 84 ರನ್ ಸೇರಿಸಿತು. 38 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ನೊಂದಿಗೆ 57 ರನ್ ಸಿಡಿಸಿದ ಫರ್ಹಾನ್, ವರುಣ್‌ಗೆ ವಿಕೆಟ್ ಒಪ್ಪಿಸಿದರು. 35 ಎಸೆತಗಳಲ್ಲಿ 46 ರನ್ ಗಳಿಸಿದ ಫಖರ್ ಕೂಡಾ ವರುಣ್ ಎಸೆತದಲ್ಲಿ ಔಟಾದರು. ಇವರಿಬ್ಬರ ನಿರ್ಗಮನದ ಬಳಿಕ ತಂಡ ಕುಸಿಯಿತು. ಸೈಮ್ ಅಯೂಬ್ 14 ರನ್ ಗಳಿಸಿದರೆ, ನಾಯಕ ಆಘಾ 8, ಹುಸೈನ್ ತಲತ್ 1, ನವಾಜ್ 6, ಹ್ಯಾರಿಸ್ ಸೊನ್ನೆಗೆ ಔಟಾದರು. ಭಾರತದ ಪರ ಕುಲ್ದೀಪ್ ಯಾದವ್ 4 ವಿಕೆಟ್ ಕಿತ್ತರು. ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಸ್ಕೋರ್: ಪಾಕಿಸ್ತಾನ 19.1 ಓವರಲ್ಲಿ 146/10 (ಫರ್ಹಾನ್ 57, ಜಮಾನ್ 46, ಕುಲೀಪ್ 4-30, 2, 2-25, 2-26, ವರುಣ್ 2-30)
ಭಾರತ 19.4 ಓವರಲ್ಲಿ 150/5 (ತಿಲಕ್ 69*, ಸಂಜು 24, ದುಬೆ 33, 3-29)
ಪಂದ್ಯಶ್ರೇಷ್ಠ: ತಿಲಕ್ ವರ್ಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.