ಏಷ್ಯಾಕಪ್ ಟೂರ್ನಿಯಲ್ಲಿ ಅದ್ಧೂರಿ ಆರಂಭ ಬಯಸಿದ್ದ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಇದೀಗ ಎದೆಬಡಿತ ಹೆಚ್ಚಾಗಿದೆ. ಕಳಪೆ ಬ್ಯಾಟಿಂಗ್, ದಿಗ್ಗಜರ ವೈಫಲ್ಯದ ನಡುವೆ ಭಾರತ ದಿಟ್ಟ ಹೋರಾಟ ನೀಡಿದೆ. ಪಾಂಡ್ಯ-ಕಿಶನ್ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ 266 ರನ್ ಸಿಡಿಸಿದೆ. ಇದೀಗ ಈ ಟಾರ್ಗೆಟ್ ಭಾರತವನ್ನು ಗೆಲುವಿನ ದಡ ಸೇರಿಸುತ್ತಾ?
ಪಲ್ಲಕೆಲೆ(ಸೆ.02) ಏಷ್ಯಾಕಪ್ ಟೂರ್ನಿಯಲ್ಲಿ ಇಂದಿನ ಹೈವೋಲ್ಟೇಜ್ ಪಂದ್ಯದ ಮೊದಲ ಇನ್ನಿಂಗ್ಸ್ ಭಾರತೀಯ ಅಭಿಮಾನಿಗಳ ನಿರೀಕ್ಷೆಗೆ ತಕ್ಕನಾಗಿರಲಿಲ್ಲ. ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಹೊರತುಪಡಿಸಿದರೆ ಉಳಿದವರ ಬ್ಯಾಟಿಂಗ್ ಅಷ್ಟಕಷ್ಟೆ. ಅಬ್ಬರದ ಸಿಕ್ಸರ್ ಇರಲಿಲ್ಲ. ಪಾಕ್ ವೇಗಿಗಳಿಗೆ ಉತ್ತರ ನೀಡುವ ಭರಾಟೆಯೂ ಟೀಂ ಇಂಡಿಯಾದಲ್ಲಿ ಇರಲಿಲ್ಲ. ಟೀಕೆ, ಟ್ರೋಲ್ ನಡುವೆ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನೆರವಿನಿಂದ ಭಾರತ 266 ರನ್ ಸಿಡಿಸಿ ಆಲೌಟ್ ಆಯಿತು.
ಪಾಕಿಸ್ತಾನಕ್ಕೆ 267 ರನ್ ಟಾರ್ಗೆಟ್ ನೀಡಲಾಗಿದೆ. ಈ ಮೊತ್ತ ಭಾರತ ತಂಡವನ್ನು ಗೆಲುವಿನ ದಡ ಸೇರಿಸುತ್ತಾ? ಏಷ್ಯಾಕಪ್ ಟೂರ್ನಿಯಲ್ಲಿ ಬದ್ಧವೈರಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಶುಭಾರಂಭ ಮಾಡುತ್ತಾ? ಇಂತಹ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪಲ್ಲಕೆಲೆಯಲ್ಲಿನ ಮಳೆ, ಪಿಚ್ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ನಿರೀಕ್ಷೆಯಂತೆ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ.
ಪಾಕ್ ವಿರುದ್ಧ ಭಾರತದ ಕಳಪೆ ಆಟ ಟ್ರೋಲ್ ನಡುವೆ ದಾಖಲೆ ಬರೆದ ಪಾಂಡ್ಯ-ಕಿಶನ್!
ಪಾಕಿಸ್ತಾನದ ಮಾರಕ ದಾಳಿಗೆ ಟೀಂ ಇಂಡಿಯಾ ವಿಕೆಟ್ ಕೈಚೆಲ್ಲಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿತ್ತು. ನಾಯಕ ರೋಹಿತ್ ಶರ್ಮಾ 11 ರನ್ ಸಿಡಿಸಿ ನಿರ್ಗಮಿಸಿದ್ದರು. ವಿರಾಟ್ ಕೊಹ್ಲಿ ಕೇವಲ 4 ರನ್ ಸಿಡಿಸಿ ಔಟಾಗಿದ್ದರು. ಇನ್ನು ಶ್ರೇಯಸ್ ಅಯ್ಯರ್ 14 ರನ್ ದಾಟಲಿಲ್ಲ. ಶುಭಮನ್ ಗಿಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿದ್ದರೂ 10 ರನ್ ದಾಟಲಿಲ್ಲ.
66 ರನ್‌ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಅಲ್ಪ ಮೊತ್ತಕ್ಕೆ ಆಲೌಟ್ ಭೀತಿ ಎದುರಿಸಿತ್ತು. ಪಾಕಿಸ್ತಾನ ವಿರುದ್ಧವೇ ಹೀಗಾಯಿತಲ್ಲ ಎಂದು ಅಭಿಮಾನಿಗಳು ಟೀಂ ಇಂಡಿಯಾಗೆ ಹಿಡಿ ಶಾಪ ಹಾಕಲು ಆರಂಭಿಸಿದ್ದರು. ಮೆಮ್ಸ್, ಟ್ರೋಲ್ ಹರಿದಾಡಿತು. ಆದರೆ ಪ್ರಮುಖ 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟದಿಂದ ನಿಧಾನವಾಗಿ ತಿರುಗೇಟು ನೀಡಲು ಆರಂಭಿಸಿತು.
ಪಾಕ್ ವಿರುದ್ಧ ಗಳಿಸಿದ್ದು 11 ರನ್ ಮಾತ್ರ, ಆದರೂ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ!
5ನೇ ವಿಕೆಟ್‌ಗೆ ಈ ಜೋಡಿ 135 ರನ್ ಜೊತೆಯಾಟ ನೀಡಿತು. ಈ ಮೂಲಕ ಭಾರತ ಹಾಗೂ ಪಾಕಿಸ್ತಾನ ಏಕದಿನ ಕ್ರಿಕೆಟ್‌ನಲ್ಲಿ 5ನೇ ವಿಕೆಟ್‌ಗೆ ದಾಖಲಾದ ಎರಡನೇ ಗರಿಷ್ಠ ಜೊತೆಯಾಟ ಅನ್ನೋ ದಾಖಲೆ ಬರೆಯಿತು. ಇಬ್ಬರು ಹಾಫ್ ಸೆಂಚುರಿ ಸಿಡಿಸಿದರು. ಆದರೆ ಇಬ್ಬರೂ ಸೆಂಚುರಿ ಮಿಸ್ ಮಾಡಿಕೊಂಡರು. ಇಶಾನ್ ಕಿಶನ್ 81 ಎಸೆತದಲ್ಲಿ 82 ರನ್ ಸಿಡಿಸಿ ಔಟಾದರು. ಇತ್ತ ಹಾರ್ದಿಕ್ ಪಾಂಡ್ಯ 90 ಎಸೆತದಲ್ಲಿ 87 ರನ್ ಸಿಡಿಸಿ ಔಟಾದರು.
ರವೀಂದ್ರ ಜಡೇಜಾ ಅಬ್ಬರಸಿಲ್ಲ. ಜಡೇಜಾ 14 ರನ್ ಸಿಡಿಸಿ ಔಟಾದರು. ಶಾರ್ದೂಲ್ ಠಾಕೂರ್ 3 ರನ್‌ಗೆ ಸುಸ್ತಾದರು. ಕುಲ್ದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಹೋರಾಟದಿಂದ ಭಾರತ 250ರ ಗಡಿ ದಾಟಿತು. ಕುಲ್ದೀಪ್ 4 ರನ್ ಸಿಡಿಸಿ ಔಟಾದರು. ಬುಮ್ರಾ 16 ರನ್ ಸಿಡಿಸಿ ಔಟಾಗುವ ಮೂಲಕ ಭಾರತ 48.5 ಓವರ್‌ನಲ್ಲಿ 266 ರನ್‌ಗೆ ಆಲೌಟ್ ಆಯಿತು.