'ದೋಸ್ತಿ ಮೈದಾನದ ಹೊರಗಡೆ ಇಟ್ಕೊಳ್ಳಿ': ಇಂಡೋ-ಪಾಕ್ ಕ್ರಿಕೆಟಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಗೌತಮ್ ಗಂಭೀರ್

By Naveen Kodase  |  First Published Sep 3, 2023, 1:46 PM IST

ಇಂಡೋ-ಪಾಕ್ ಆಟಗಾರರ ಗೆಳೆತನಕ್ಕೆ ಸಾಕ್ಷಿಯಾದ ಏಷ್ಯಾಕಪ್ ಮ್ಯಾಚ್‌
ಆಟಗಾರರ ನಡೆಯ ಬಗ್ಗೆ ಕಿಡಿಕಾರಿದ ಗೌತಮ್ ಗಂಭೀರ್
ಗೆಳೆತನ ಬೌಂಡರಿ ಗೆರೆಯಾಚೆ ಇಟ್ಟುಕೊಳ್ಳಿ ಎಂದ ಮಾಜಿ ಕ್ರಿಕೆಟಿಗ


ನವದೆಹಲಿ(ಸೆ.03): ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳನ್ನು ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದು ಕರೆಯಲಾಗುತ್ತದೆ. ಇದೀಗ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಬರೋಬ್ಬರಿ 4 ವರ್ಷಗಳ ಬಳಿಕ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಮೂಲಕ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆದರೆ ದುರಾದೃಷ್ಟವಶಾತ್, ಈ ಹೈವೋಲ್ಟೇಜ್ ಪಂದ್ಯವು ಮಳೆರಾಯನ ಅಡಚಣೆಯಿಂದಾಗಿ ಅರ್ಧಕ್ಕೆ ರದ್ದಾಯಿತು. ಹೀಗಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡವು.

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅಲ್ಲೊಂದು ಜಿದ್ದಾಜಿದ್ದಿನ ಪೈಪೋಟಿ ಕಾಣಲು ಸಿಗುತ್ತದೆ. ಅದು ಕಳೆದೆರಡು ದಶಕಗಳಿಂದಲೂ ನಾವೆಲ್ಲರೂ ನೋಡುತ್ತಲೇ ಬಂದಿದ್ದೇವೆ. ಆದರೆ ಇದೀಗ ಏಷ್ಯಾಕಪ್ ಟೂರ್ನಿಯ ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡದ ಆಟಗಾರರು ಮೈದಾನದಾಚೆ ಆತ್ಮೀಯವಾಗಿ ಸ್ನೇಹಿತರಂತೆ ಮಾತುಕತೆ ನಡೆಸಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಕಷ್ಟು ಸಂಚಲನ ಮೂಡಿಸಿವೆ. ಆದರೆ ಈ ನಡೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಗೆ ಇಷ್ಟವಾದಂತೆ ಕಂಡು ಬಂದಿಲ್ಲ. ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ಆಟಗಾರರಲ್ಲಿ ಈ ರೀತಿಯ ಸ್ನೇಹಪರ ವರ್ತನೆ ಸರಿಯಲ್ಲ ಎಂದು ಗೌತಮ್ ಗಂಭೀರ್ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.

Tap to resize

Latest Videos

World Cup 2023: ವಿಶ್ವಕಪ್ ಟೂರ್ನಿಗೆ ಇಂದೇ ಭಾರತ ತಂಡ ಪ್ರಕಟ..? ರೋಹಿತ್ ಪಡೆಯಲ್ಲಿ ಯಾರಿಗೆಲ್ಲಾ ಸ್ಥಾನ?

ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಮುಕ್ತಾಯದ ಬಳಿಕ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಮಿಡ್‌-ಗೇಮ್‌ ಶೋನಲ್ಲಿ ಭಾಗವಹಿಸಿ ಮಾತನಾಡಿದ ಗೌತಮ್ ಗಂಭೀರ್, ಭಾರತ ಕ್ರಿಕೆಟ್ ತಂಡವು 140 ಕೋಟಿ ಜನರನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಸ್ಟೇಡಿಯಂನೊಳಗೆ ಈ ರೀತಿಯ ಫ್ರೆಂಡ್‌ಶಿಪ್‌ನ ವರ್ತನೆ ಸರಿಯಲ್ಲ. ಇಂತಹ ವರ್ತನೆಗಳೇನಿದ್ದರೂ ಮೈದಾನಾದಾಚೆಗಿರಲಿ ಎಂದು ಸಲಹೆ ನೀಡಿದ್ದಾರೆ.

"ರಾಷ್ಟ್ರೀಯ ತಂಡದ ಪರವಾಗಿ ನೀವು ಕ್ರಿಕೆಟ್ ಆಡುತ್ತಿದ್ದೀರಾ ಎಂದರೆ ಎದುರಾಳಿ ತಂಡದ ಆಟಗಾರರ ಜತೆಗಿನ ಗೆಳೆತನವನ್ನು ಬೌಂಡರಿ ಗೆರೆಯಾಚೆಗೆ ಇಟ್ಟು ಮೈದಾನದೊಳಗೆ ಬನ್ನಿ. ಯಾಕೆಂದರೆ ಪಂದ್ಯದಲ್ಲಿ ಎದುರಾಳಿಯನ್ನು ಎದುರಿಸುವುದು ಮುಖ್ಯವಾಗುತ್ತದೆ. ಹೀಗಾಗಿ ದೋಸ್ತಿಯನ್ನು ಹೊರಗಿಡಬೇಕಾಗುತ್ತದೆ. ಉಭಯ ತಂಡಗಳ ಆಟಗಾರರ ಕಣ್ಣುಗಳಲ್ಲಿ ಆಕ್ರಮಣಕಾರಿ ಮನೋಭಾವ ಇರಬೇಕಾಗುತ್ತದೆ. 6-7 ಗಂಟೆಗಳ ಪಂದ್ಯ ಮುಕ್ತಾಯದ ಬಳಿಕ ನೀವೂ ಎಷ್ಟು ಬೇಕಾದರೂ ನಿಮ್ಮ ಗೆಳೆತನವನ್ನು ಮುಂದುವರೆಸಿ. ಯಾಕೆಂದರೆ ಕ್ರಿಕೆಟ್ ಆಡುವ ಆ 6-7 ಗಂಟೆಗಳು ಸಾಕಷ್ಟು ಮುಖ್ಯವಾಗುತ್ತವೆ. ಯಾಕೆಂದರೆ ನೀವು ಕೇವಲ ನಿಮ್ಮನ್ನು ಮಾತ್ರ ಅಲ್ಲಿ ಪ್ರತಿನಿಧಿಸುತ್ತಿರುವುದಿಲ್ಲ ಬದಲಾಗಿ ನೀವು ಕೋಟ್ಯಾಂತರ ಭಾರತೀಯರನ್ನು ಪ್ರತಿನಿಧಿಸುತ್ತಿರುತ್ತೀರಾ ಎನ್ನುವುದು ಜ್ಞಾಪಕವಿರಲಿ" ಎಂದು ಗೌತಮ್ ಗಂಭೀರ್ ವಾರ್ನಿಂಗ್ ನೀಡಿದ್ದಾರೆ.

Asia Cup 2023: ಹ್ಯಾರಿಸ್ ರೌಫ್ ದಾಳಿಗೆ ಶ್ರೇಯಸ್ ಅಯ್ಯರ್ ಬ್ಯಾಟ್ ಪೀಸ್ ಪೀಸ್..! ವಿಡಿಯೋ ವೈರಲ್

ಭಾರತ-ಪಾಕ್ ಮೊದಲ ಪಂದ್ಯ ಮಳೆಯಿಂದ ಅರ್ಧಕ್ಕೆ ರದ್ದು..!

ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಮೊದಲ ಪಂದ್ಯ ಮಳೆಯಿಂದ ರದ್ದಾಗಿದೆ. ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಪಾಕ್ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 66 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.

ಈ ವೇಳೆ 5ನೇ ವಿಕೆಟ್‌ಗೆ ಜತೆಯಾದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿ 5ನೇ ವಿಕೆಟ್‌ಗೆ ಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಇಶಾನ್ ಕಿಶನ್ 82 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 87 ರನ್ ಸಿಡಿಸಿದರು. ಅಂತಿಮವಾಗಿ ಟೀಂ ಇಂಡಿಯಾ 48.5 ಓವರ್‌ಗಳಲ್ಲಿ 266 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತದ ಇನಿಂಗ್ಸ್‌ ಮುಕ್ತಾಯದ ಬೆನ್ನಲ್ಲೇ ಪಲ್ಲೆಕೆಲೆಯಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಪಂದ್ಯವನ್ನು ರದ್ದು ಮಾಡಲಾಯಿತು.

click me!