ಕಮ್‌ಬ್ಯಾಕ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಶ್ರೇಯಸ್ ಅಯ್ಯರ್
ಭಾರತ-ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ಮಳೆಯಿಂದ ಅರ್ಧಕ್ಕೆ ರದ್ದು
ಹ್ಯಾರಿಸ್ ರೌಫ್ ವೇಗದ ದಾಳಿಗೆ ಶ್ರೇಯಸ್ ಅಯ್ಯರ್ ಬ್ಯಾಟ್ ಪೀಸ್
ಪಲ್ಲೆಕೆಲೆ(ಸೆ.03): 2023ರ ಏಷ್ಯಾಕಪ್ ಟೂರ್ನಿಯ ವೇಳೆ ಟೀಂ ಇಂಡಿಯಾ ಪಾಲಿನ ಅತ್ಯಂತ ಚರ್ಚಾ ವಿಷಯವೆಂದರೆ ಅದು ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್. ಈ ಬ್ಯಾಟಿಂಗ್ ಕ್ರಮಾಂಕದ ಕುರಿತಂತೆ ಕಳೆದ ಕೆಲ ತಿಂಗಳಿನಿಂದಲೂ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಲೇ ಬಂದಿದೆ. ಫಿಟ್ನೆಸ್ ಸಮಸ್ಯೆಯಿಂದ ಕಳೆದ ನಾಲ್ಕೈದು ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಶ್ರೇಯಸ್ ಅಯ್ಯರ್, ಇದೀಗ ಏಷ್ಯಾಕಪ್ ಟೂರ್ನಿಯ ಮೂಲಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಶ್ರೇಯಸ್ ಅಯ್ಯರ್ ಎಂದಿನಂತೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದರಾದರೂ, ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಲು ವಿಫಲರಾದರು.
ಪಾಕಿಸ್ತಾನ ಎದುರು ಎಚ್ಚರಿಕೆಯ ಆರಂಭ ಪಡೆದ ಟೀಂ ಇಂಡಿಯಾ, 7ನೇ ಓವರ್ ಅಂತ್ಯದ ವೇಳೆಗೆ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಈ ವೇಳೆ ಕ್ರೀಸ್‌ಗಿಳಿದ ಶ್ರೇಯಸ್ ಅಯ್ಯರ್ ಮೇಲೆ ತಂಡದಿಂದ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ ಟೀಂ ಮ್ಯಾನೇಜ್‌ಮೆಂಟ್ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳಲು ಶ್ರೇಯಸ್ ಅಯ್ಯರ್ ವಿಫಲರಾದರು. ಶ್ರೇಯಸ್ ಅಯ್ಯರ್ ಕೇವಲ 9 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 14 ರನ್ ಬಾರಿಸಿ ರೌಫ್ ಬೌಲಿಂಗ್‌ನಲ್ಲಿ ಫಖರ್ ಜಮಾನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಭಾರತ-ಪಾಕ್ ವಿಶ್ವಕಪ್ ಟಿಕೆಟ್ ಮಾರಾಟ ಇಂದು: ಬೆಂಗ್ಳೂರು ಪಂದ್ಯದ ಟಿಕೆಟ್ ಸೋಲ್ಡೌಟ್!
ಶ್ರೇಯಸ್ ಅಯ್ಯರ್ ಆರಂಭದಲ್ಲೇ ಎರಡು ಬೌಂಡರಿ ಬಾರಿಸಿದರಾದರೂ, ಅವರು ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ಹ್ಯಾರಿಸ್ ರೌಫ್ ಅವಕಾಶ ನೀಡಲಿಲ್ಲ. 10ನೇ ಓವರ್‌ನಲ್ಲಿ ಹ್ಯಾರಿಸ್ ರೌಫ್, ಶ್ರೇಯಸ್ ಅಯ್ಯರ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಇದಕ್ಕೂ ಮುನ್ನ ಹ್ಯಾರಿಸ್ ರೌಫ್ ಎಸೆದ ಚೆಂಡನ್ನು ರಬಸವಾಗಿ ಬಾರಿಸುವ ಯತ್ನದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟ್ ಮುರಿದು ಹೋಗಿದೆ. ಆದರೆ ಇದಕ್ಕಿಂತ ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಆ ಬಾಲ್ ಬೌಂಡರಿ ಗೆರೆ ದಾಟಿತು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೀಗಿತ್ತು ನೋಡಿ ಆ ಕ್ಷಣ:
Haris rauf breaking iyer bat .. pic.twitter.com/kJhnxzhw4d
— Hamza Wasif (@HamzaWasif7)ಪಾಕ್ ವಿರುದ್ಧ ಭಾರತಕ್ಕೆ ಬ್ಯಾಟಿಂಗ್ ಪ್ರ್ಯಾಕ್ಟಿಸ್!
ಪಲ್ಲಕೆಲೆ: ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಹಣಾಹಣಿ ಮಳೆಗೆ ಬಲಿಯಾಯಿತು. ವಿಶ್ವಕಪ್ ಸಿದ್ಧತೆಗೆ ಈ ಟೂರ್ನಿಯನ್ನು ಬಳಸಿಕೊಳ್ಳುತ್ತಿರುವ ಎರಡೂ ತಂಡಗಳು ಕೆಲ ಧನಾತ್ಮಕ ಬೆಳವಣಿಗೆಗಳನ್ನು ಕಂಡವು. ಬಹಳ ಸಮಯದ ಬಳಿಕ ಭಾರತದ ಮಧ್ಯಮ ಕ್ರಮಾಂಕ ದಿಟ್ಟ ಹೋರಾಟ ಪ್ರದರ್ಶಿಸಿದರೆ, ಪಾಕಿಸ್ತಾನದ ವೇಗಿಗಳು ಲಯ ಮುಂದುವರಿಸಿದರು.
4 ವರ್ಷ ಬಳಿಕ ಏಕದಿನ ಮಾದರಿಯಲ್ಲಿ ಮುಖಾಮುಖಿಯಾದ ಬದ್ಧವೈರಿಗಳ ನಡುವೆ ನಿರೀಕ್ಷೆಯಂತೆಯೇ ಭರ್ಜರಿ ಸ್ಪರ್ಧೆ ಏರ್ಪಟ್ಟಿತ್ತು. ಆಗಾಗ ಮಳೆ ಸುರಿದ ಹೊರತಾಗಿಯೂ ಮೊದಲ ಇನ್ನಿಂಗ್ಸ್ ಪೂರ್ತಿಗೊಂಡಿತು. ಆದರೆ ಪಂದ್ಯ ಪೂರ್ತಿಯಾಗಲು ಮಳೆರಾಯ ಅವಕಾಶ ನೀಡಲಿಲ್ಲ.
ಅಭಿಮಾನಿಗಳಿಗೆ ನಿರಾಸೆ, ಮಳೆಯಿಂದ ಭಾರತ-ಪಾಕಿಸ್ತಾನ ಪಂದ್ಯ ರದ್ದು!
ಆರಂಭಿಕ ಆಘಾತಕ್ಕೆ ಗುರಿಯಾದರೂ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಉತ್ಕೃಷ್ಟ ಗುಣಮಟ್ಟದ ಬ್ಯಾಟಿಂಗ್ ನೆರವಿನಿಂದ ಭಾರತ 48.5 ಓವರಲ್ಲಿ 266 ರನ್‌ಗೆ ಆಲೌಟ್ ಆಯಿತು. ಆದರೆ ನಿರಂತರ ಮಳೆಯಿಂದಾಗಿ ಪಾಕಿಸ್ತಾನದ ಬ್ಯಾಟಿಂಗ್ ಆರಂಭಗೊಳ್ಳಲಿಲ್ಲ. ಪಂದ್ಯ ರದ್ದುಗೊಂಡ ಪರಿಣಾಮ, ಎರಡೂ ತಂಡಗಳಿಗೆ ಅಂಕ ಹಂಚಲಾಯಿತು. ಮೊದಲ ಪಂದ್ಯದಲ್ಲಿ ನೇಪಾಳವನ್ನು ಸುಲಭವಾಗಿ ಸೋಲಿಸಿದ್ದ ಪಾಕಿಸ್ತಾನ ಮತ್ತೊಂದು ಅಂಕ ಸೇರ್ಪಡೆಯೊಂದಿಗೆ ಸೂಪರ್-4 ಹಂತಕ್ಕೆ ಪ್ರವೇಶಿಸಿತು. ನೇಪಾಳ ವಿರುದ್ಧ ಭಾರತ ಗೆದ್ದರೆ ಸೂಪರ್-4ಗೇರಲಿದೆ.