Ind vs Pak: T20I ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆಯಲು ರೋಹಿತ್ ಶರ್ಮಾಗೆ ಬೇಕಿದೆ ಕೇವಲ 10 ರನ್‌..!

By Naveen KodaseFirst Published Aug 28, 2022, 4:48 PM IST
Highlights

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿಂದು ಭಾರತ ಪಾಕಿಸ್ತಾನ ಕಾದಾಟ
ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ
ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆಯಲು ರೆಡಿಯಾದ ರೋಹಿತ್ ಶರ್ಮಾ

ದುಬೈ(ಆ.28): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ನಾಯಕನಾಗಿ ಹಾಗೂ ಆರಂಭಿಕನಾಗಿ ಯಶಸ್ವಿಯಾಗಲು ಎದುರು ನೋಡುತ್ತಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿಂದ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಸೆಣಸಾಡಲಿವೆ. ಕಳೆದ ವರ್ಷ ಇದೇ ಮೈದಾನದಲ್ಲಿ ನಡೆದ ಐಸಿಸಿ ಟಿ20  ವಿಶ್ವಕಪ್ ಕಾದಾಟದಲ್ಲಿ ಭಾರತ ತಂಡವು ಪಾಕಿಸ್ತಾನ ಎದುರು 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಇದೀಗ ಟೀಂ ಇಂಡಿಯಾ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಇನ್ನು ಇದೇ ವೇಳೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಇನ್ನು ಇದೇ ಪಂದ್ಯವು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಆಡುತ್ತಿರುವ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಎನಿಸಿರುವುದರಿಂದಾಗಿ ಎಲ್ಲರ ಚಿತ್ತ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನತ್ತ ನೆಟ್ಟಿದೆ. ಇದರ ಹೊರತಾಗಿಯೂ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ನೆಡಲು ಸಜ್ಜಾಗಿದ್ದಾರೆ. 

ಹೌದು, ಸದ್ಯ ನ್ಯೂಜಿಲೆಂಡ್ ಅನುಭವಿ ಆರಂಭಿಕ ಬ್ಯಾಟರ್‌ ಮಾರ್ಟಿನ್ ಗಪ್ಟಿಲ್‌, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 3,497 ರನ್‌ ಬಾರಿಸುವ ಮೂಲಕ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 3,487 ರನ್ ಬಾರಿಸಿದ್ದು, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 10 ರನ್ ಬಾರಿಸಿದರೇ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಗಪ್ಟಿಲ್‌ ಹಿಂದಿಕ್ಕಿ ರೋಹಿತ್ ಶರ್ಮಾ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಲಿದ್ದಾರೆ. ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 99 ಟಿ20 ಪಂದ್ಯಗಳಿಂದ 3,308 ರನ್‌ ಬಾರಿಸಿದ್ದಾರೆ.

Asia Cup 2022 ವಿರಾಟ್ ಕೊಹ್ಲಿ 100 T20I ಪಂದ್ಯಕ್ಕೆ ಶುಭ ಹಾರೈಸಿದ ಆಪ್ತಮಿತ್ರ ಎಬಿ ಡಿವಿಲಿಯರ್ಸ್‌..!

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ಜಡೇಜಾ/ಕಾರ್ತಿಕ್‌, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಹಲ್‌, ಅಶ್‌ರ್‍ದೀಪ್‌ ಸಿಂಗ್‌, ಆವೇಶ್‌ ಖಾನ್‌.

ಪಾಕಿಸ್ತಾನ: ಮೊಹಮದ್‌ ರಿಜ್ವಾನ್‌, ಬಾಬರ್‌ ಆಜಂ(ನಾಯಕ), ಫಖರ್‌ ಜಮಾನ್‌, ಇಫ್ತಿಕರ್‌ ಅಹ್ಮದ್‌, ಕುಶ್‌ದಿಲ್‌ ಶಾ, ಆಸಿಫ್‌ ಅಲಿ, ಶದಾಬ್‌ ಖಾನ್‌, ಮೊಹಮದ್‌ ನವಾಜ್‌, ಹಸನ್‌ ಅಲಿ, ಹ್ಯಾರಿಸ್‌ ರೌಫ್‌, ಮೊಹಮದ್‌ ಹಸ್ನೈನ್‌.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

click me!