
ದುಬೈ(ಆ.28): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿಂದು ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿಂದು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ಇದೇ ಪಂದ್ಯವು ವಿರಾಟ್ ಕೊಹ್ಲಿ ಪಾಲಿಗೆ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿದ್ದು, ಈ ಪಂದ್ಯಕ್ಕೆ ಸಜ್ಜಾಗಿರುವ ವಿರಾಟ್ ಕೊಹ್ಲಿಗೆ ಆಪ್ತಮಿತ್ರ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ವಿಶೇಷ ವಿಡಿಯೋ ಸಂದೇಶದ ಮೂಲಕ ಶುಭ ಹಾರೈಸಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ದ ಕಣಕ್ಕಿಳಿದರೇ, ಟೆಸ್ಟ್, ಏಕದಿನ ಹಾಗೂ ಟಿ20 ಹೀಗೆ ಮೂರು ಮಾದರಿಯ ಕ್ರಿಕೆಟ್‌ನಲ್ಲೂ 100 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಭಾರತದ ಮೊದಲ ಹಾಗೂ ಒಟ್ಟಾರೆ ಜಗತ್ತಿನ ಎರಡನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ನ್ಯೂಜಿಲೆಂಡ್‌ನ ರಾಸ್ ಟೇಲರ್ ಎಲ್ಲಾ 3 ಮಾದರಿಯಲ್ಲೂ 100 ಪಂದ್ಯವಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಈ ಕುರಿತಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ರಿಕೆಟಿಗ ಹಾಗೂ ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ಎಬಿ ಡಿವಿಲಿಯರ್ಸ್, 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ನನ್ನ ಆತ್ಮೀಯ ಗೆಳೆಯ ವಿರಾಟ್ ಕೊಹ್ಲಿ, ಭಾರತ ಪರ ಮೂರು ಮಾದರಿಯ ಕ್ರಿಕೆಟ್‌ನಲ್ಲಿ 100 ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದು, ಈ ಸಂದರ್ಭದಲ್ಲಿ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಎಬಿಡಿ ವಿಡಿಯೋ ಸಂದೇಶ ರವಾನಿಸಿದ್ದಾರೆ.
ಇದೊಂದು ಅದ್ಭುತ ಸಾಧನೆ ವಿರಾಟ್. ನಿಮ್ಮ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆಯಿದೆ. ನಿಮ್ಮ ನೂರನೇ ಟಿ20 ಪಂದ್ಯಕ್ಕೆ ನಮ್ಮ ಶುಭ ಹಾರೈಕೆಗಳು. ನಾವೆಲ್ಲರೂ ಈ ಪಂದ್ಯವನ್ನು ವೀಕ್ಷಿಸುತ್ತೇವೆ ಎಂದು ಎಬಿ ಡಿವಿಲಿಯರ್ಸ್, ಕಿಂಗ್ ಕೊಹ್ಲಿಗೆ ಹುರಿದುಂಬಿಸಿದ್ದಾರೆ.
ಮೈದಾನದೊಳಗೆ ಹಾಗೂ ಮೈದಾನದಾಚೆಗೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಕಳೆದೊಂದು ದಶಕದಿಂದ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಂಡಿದ್ದ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಜತೆಗೂಡಿ ಹಲವಾರು ಸ್ಮರಣೀಯ ಇನಿಂಗ್ಸ್‌ಗಳನ್ನಾಡುವ ಮೂಲಕ ಆರ್‌ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ದಶಕಗಳ ಕಾಲ ಈ ಜೋಡಿ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದು, ಒಬ್ಬರನ್ನೊಬ್ಬರು ಬೆಂಬಲಿಸಿಕೊಂಡೇ ಬಂದಿದ್ದಾರೆ.
3 ಮಾದರಿಯಲ್ಲೂ 100 ಪಂದ್ಯ: ಹೊಸ ಮೈಲಿಗಲ್ಲು ನೆಡಲು ಕಿಂಗ್ ಕೊಹ್ಲಿ ರೆಡಿ..!
2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಈವರೆಗೆ 99 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ 50.12ರ ಬ್ಯಾಟಿಂಗ್ ಸರಾಸರಿಯಲ್ಲಿ 30 ಅರ್ಧಶತಕ ಸಹಿತ ಒಟ್ಟು 3,308 ರನ್ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ವಿರಾಟ್ ಕೊಹ್ಲಿ 102 ಟೆಸ್ಟ್, 262 ಏಕದಿನ ಪಂದ್ಯಗಳನ್ನಾಡಿದ್ದಾರೆ.
ವಿರಾಟ್ ಕೊಹ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ವಿಫಲವಾಗುತ್ತಲೇ ಬಂದಿದ್ದಾರೆ. ಫಾರ್ಮ್ ಕೊರತೆಯಿಂದಾಗಿ ಕೆಲ ಸರಣಿಯಿಂದಲೂ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದರು. ಇದೀಗ ಬರೋಬ್ಬರಿ 6 ವಾರಗಳ ವಿಶ್ರಾಂತಿ ಬಳಿಕ ವಿರಾಟ್ ಕೊಹ್ಲಿ ಇಂದು ಮೈದಾನಕ್ಕಿಳಿಯಲು ಸಜ್ಜಾಗಿದ್ದು, ತಮ್ಮ ನೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ದೊಡ್ಡ ಮೊತ್ತ ಸಿಡಿಸಲಿ ಎನ್ನುವುದು ಅಪಾರ ಅಭಿಮಾನಿಗಳ ಹಾರೈಕೆಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.