ಶಮಿಯನ್ನು ಮನೆಯಲ್ಲಿ ಕೂರಿಸಿದ್ದು ದಿಗ್ಬ್ರಮೆ ಮೂಡಿಸಿತು: ಟೀಂ ಇಂಡಿಯಾ ಆಯ್ಕೆಯನ್ನು ಟೀಕಿಸಿದ ರವಿಶಾಸ್ತ್ರಿ..!

Published : Sep 08, 2022, 01:13 PM IST
ಶಮಿಯನ್ನು ಮನೆಯಲ್ಲಿ ಕೂರಿಸಿದ್ದು ದಿಗ್ಬ್ರಮೆ ಮೂಡಿಸಿತು: ಟೀಂ ಇಂಡಿಯಾ ಆಯ್ಕೆಯನ್ನು ಟೀಕಿಸಿದ ರವಿಶಾಸ್ತ್ರಿ..!

ಸಾರಾಂಶ

* ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್‌ ರೇಸ್‌ನಿಂದ ಹೊರಬಿದ್ದ ಟೀಂ ಇಂಡಿಯಾ * ಟೀಂ ಇಂಡಿಯಾ ಆಯ್ಕೆಯ ಬಗ್ಗೆ ರವಿಶಾಸ್ತ್ರಿ ಟೀಕೆ * ಮೊಹಮ್ಮದ್ ಶಮಿ ಅವರಂತಹ ಆಟಗಾರರು ತಂಡದಲ್ಲಿರಬೇಕಿತ್ತು ಎಂದ ರವಿಶಾಸ್ತ್ರಿ

ದುಬೈ(ಸೆ.08): ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ಅಧಿಕೃತವಾಗಿಯೇ ಏಷ್ಯಾಕಪ್ ಫೈನಲ್‌ ರೇಸ್‌ನಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಆಯ್ಕೆಯ ಕುರಿತಂತೆ ಪ್ರಶ್ನೆಗಳು ಏಳಲಾರಂಭಿಸಿವೆ. ಇನ್ನು ಟೀಂ ಇಂಡಿಯಾ ಮಾಜಿ ಹೆಡ್ ಕೋಚ್ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ, ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡದೇ ಇರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ ಗ್ರೂಪ್‌ ಹಂತದ ಮೊದಲೆರಡು ಪಂದ್ಯಗಳನ್ನು ಗೆದ್ದ ಸೂಪರ್ 4 ಹಂತ ಪ್ರವೇಶಿಸಿದ್ದ ಟೀಂ ಇಂಡಿಯಾ, ಇದಾದ ಬಳಿಕ ಪಾಕಿಸ್ತಾನ ಹಾಗೂ ಶ್ರೀಲಂಕಾ ಎದುರು ಆಘಾತಕಾರಿ ಸೋಲು ಅನುಭವಿಸಿದೆ. ಪಾಕಿಸ್ತಾನ ಎದುರು 181 ರನ್‌ಗಳನ್ನು ರಕ್ಷಿಸಿಕೊಳ್ಳಲು ವಿಫಲವಾಗಿದ್ದ ರೋಹಿತ್ ಶರ್ಮಾ ಪಡೆ, ಸೂಪರ್ 4 ಹಂತದ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಎದುರು 173 ರನ್‌ಗಳನ್ನು ಕಾಪಾಡಿಕೊಳ್ಳಲು ವಿಫಲವಾಗುವ ಮೂಲಕ ನಿರಾಸೆ ಅನುಭವಿಸಿತ್ತು. ಪಾಕಿಸ್ತಾನ ಎದುರು ಭುವನೇಶ್ವರ್ ಕುಮಾರ್‌, 19ನೇ ಓವರ್‌ನಲ್ಲಿ 19 ರನ್ ನೀಡಿ ದುಬಾರಿಯಾಗಿದ್ದರು. ಇನ್ನು ಶ್ರೀಲಂಕಾ ಎದುರು ಭುವಿ 19ನೇ ಓವರ್‌ನಲ್ಲಿ 14 ರನ್ ಬಿಟ್ಟುಕೊಟ್ಟಿದ್ದರು. ಆ ಎರಡು ಪಂದ್ಯಗಳಲ್ಲಿ ಈ ಎರಡು ದುಬಾರಿ ಓವರ್‌ಗಳು ಟೀಂ ಇಂಡಿಯಾ, ಏಷ್ಯಾಕಪ್ ಫೈನಲ್ ಪ್ರವೇಶಿಸುವ ಕನಸನ್ನು ನುಚ್ಚು ನೂರು ಮಾಡಿದ್ದವು.

ಭಾರತ ಕ್ರಿಕೆಟ್ ತಂಡದ ಆಯ್ಕೆಯ ಕುರಿತಂತೆ ವಿಶ್ಲೇಷಣೆ ಮಾಡಿರುವ ರವಿಶಾಸ್ತ್ರಿ, ಭಾರತ ಕ್ರಿಕೆಟ್ ತಂಡವು ಕನಿಷ್ಠ ಓರ್ವ ಅನುಭವಿ ವೇಗಿಯ ಕೊರತೆಯನ್ನು ಅನುಭವಿಸಿತು. ಜಸ್ಪ್ರೀತ್ ಬುಮ್ರಾ, ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದ ಹಿನ್ನೆಲೆಯಲ್ಲಿ, ಅನುಭವಿ ವೇಗಿ ಮೊಹಮ್ಮದ್ ಶಮಿಗೆ ತಂಡದಲ್ಲಿ ಮಣೆ ಹಾಕಬೇಕಿತ್ತು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

Asia Cup 2022 ಟೀಂ ಇಂಡಿಯಾ ದುಸ್ಥಿತಿಗೆ ಕಾರಣಗಳೇನು?

ನೀವು ಗೆಲ್ಲಬೇಕೆಂದುಕೊಂಡಿದ್ದರೇ, ಒಳ್ಳೆಯ ರೀತಿಯಲ್ಲಿ ಸಿದ್ದತೆಯನ್ನು ನಡೆಸಬೇಕು. ನನ್ನ ಪ್ರಕಾರ, ಏಷ್ಯಾಕಪ್ ಟೂರ್ನಿಗೆ ಇನ್ನೂ ಒಳ್ಳೆಯ ರೀತಿಯಲ್ಲಿ ತಂಡವನ್ನು ಆಯ್ಕೆ ಮಾಡಬಹುದಿತ್ತು. ಅದರಲ್ಲೂ ಮುಖ್ಯವಾಗಿ ವೇಗದ ಬೌಲರ್‌ಗಳ ವಿಚಾರದಲ್ಲಂತೂ, ಇಲ್ಲಿನ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಇನ್ನೂ ಒಳ್ಳೆಯ ಆಯ್ಕೆ ಮಾಡಬಹುದಿತ್ತು. ಇಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ಸಿಗಲಿಲ್ಲ. ಭಾರತ ತಂಡವು ಕೇವಲ ನಾಲ್ವರು ವೇಗಿಗಳೊಂದಿಗೆ ಇಲ್ಲಿಗೆ ಬಂದಿದ್ದು ನನಗಂತೂ ಅಚ್ಚರಿ ಮೂಡಿಸಿತು. ತಂಡಕ್ಕೆ ಇನ್ನು ಒಬ್ಬ ಹೆಚ್ಚುವರಿ ವೇಗಿಯ ಅಗತ್ಯವಿತ್ತು. ಮೊಹಮ್ಮದ್ ಶಮಿಯವರಂತ ವೇಗಿಯು ಸುಮ್ಮನೆ ಮನೆಯಲ್ಲಿ ಕೂರುವಂತೆ ಮಾಡಿದ್ದು, ನನ್ನಲ್ಲಿ ದಿಗ್ಬ್ರಮೆ ಮೂಡಿಸಿತು ಎಂದು ರವಿಶಾಸ್ತ್ರಿ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 173 ರನ್‌ ಗಳಿಸಿತ್ತು. ಇನ್ನು ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಪಥುಮ್ ನಿಸ್ಸಾಂಕ ಹಾಗೂ ಕುಸಾಲ್ ಮೆಂಡೀಸ್ ಜೋಡಿ 97 ರನ್‌ಗಳ ಜತೆಯಾಟ ನಿಭಾಯಿಸಿತು. ಇದಾದ ಬಳಿಕ ಮಧ್ಯದಲ್ಲಿ ಯುಜುವೇಂದ್ರ ಚಹಲ್‌ ಹಾಗೂ ರವಿಚಂದ್ರನ್ ಅಶ್ವಿನ್‌ ವಿಕೆಟ್ ಕಬಳಿಸಿದರಾದರೂ, ಡೆತ್ ಓವರ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದು, ಟೀಂ ಇಂಡಿಯಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!
ವಿಜಯ್‌ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌