
ದುಬೈ(ಆ.29): ಭಾರತ ಹಾಗೂ ಪಾಕಿಸ್ತಾನ ನಡುವೆ ಭಾನುವಾರ ನಡೆದ ಏಷ್ಯಾಕಪ್ ಟಿ20 ಕ್ರಿಕೆಟ್ ಪಂದ್ಯದಿಂದಾಗಿ ದುಬೈನ ಮುಖ್ಯರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪಂದ್ಯ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆ ಆರಂಭಗೊಂಡ ಪಂದ್ಯಕ್ಕೆ ಮಧ್ಯಾಹ್ನ 2 ಗಂಟೆಯಿಂದಲೇ ಅಭಿಮಾನಿಗಳು ಕ್ರೀಡಾಂಗಣಕ್ಕೆ ಪ್ರವೇಶಿಸಲು ಸರತಿ ಸಾಲಿನಲ್ಲಿ ನಿಂತಿದ್ದರು.
ಕ್ರೀಡಾಂಗಣದ ಸುತ್ತಮುತ್ತ ಸುಮಾರು 3 ಕಿಲೋ ಮೀಟರ್‌ಗಳ ವರೆಗೂ ಟ್ರಾಫಿಕ್ ಜಾಮ್ ಆಗಿದ್ದ ದೃಶ್ಯಗಳು ಕಂಡುಬಂದವು. ಸ್ಥಳೀಯ ಪೊಲೀಸರು, ಭದ್ರತಾ ಸಿಬ್ಬಂದಿ ಕ್ರಿಕೆಟ್ ಅಭಿಮಾನಿಗಳನ್ನು ನಿರ್ವಹಿಸಲು ಭಾರೀ ಶ್ರಮ ವಹಿಸಬೇಕಾಯಿತು. ಸುಡು ಬಿಸಿಲಿನಲ್ಲೂ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ಅಭಿಮಾನಿಗಳು ಕಾಯುತ್ತಾ ನಿಂತಿದ್ದು ಪಂದ್ಯದ ಮಹತ್ವ ಹಾಗೂ ಅಭಿಮಾನಿಗಳಲ್ಲಿ ಇದ್ದ ಉತ್ಸಾಹವನ್ನು ಎತ್ತಿ ತೋರಿಸಿತು.
ಕ್ರೀಡಾಂಗಣದಲ್ಲಿ ಭದ್ರತೆಗಾಗಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅಭಿಮಾನಿಗಳು ನೀರಿನ ಬಾಟಲಿಗಳು, ಬ್ಯಾಗ್, ಪವರ್ ಬ್ಯಾಂಕ್‌ಗಳನ್ನೂ ಕ್ರೀಡಾಂಗಣದ ಒಳಕ್ಕೆ ಕೊಂಡೊಯ್ಯುವಂತಿರಲಿಲ್ಲ.
ಪಾಕ್ ತಂಡಕ್ಕೆ ತೊಂದರೆ!
ಟ್ರಾಫಿಕ್ ಜಾಮ್‌ನಿಂದ ಪಾಕಿಸ್ತಾನ ತಂಡಕ್ಕೂ ಸಮಸ್ಯೆ ಆದ ಪ್ರಸಂಗ ನಡೆಯಿತು. ಹೋಟೆಲ್‌ನಿಂದ ಹೊರಟ ತಂಡದ ಬಸ್ ಟ್ರಾಫಿಕ್‌ನಲ್ಲಿ ಕೆಲ ಸಮಯ ಸಿಲುಕಿತ್ತು. ಈ ಕಾರಣದಿಂದಾಗಿ ಪಾಕಿಸ್ತಾನದ ಆಟಗಾರರು ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ ಕ್ರೀಡಾಂಗಣ ತಲುಪಿತು.
ಬದ್ಧವೈರಿ ಪಾಕಿಸ್ತಾನ ಮಣಿಸಿದ ಟೀಂ ಇಂಡಿಯಾ, ಪಾಂಡ್ಯ ಸಿಕ್ಸರ್‌ಗೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು!
ಸ್ಟೇಡಿಯಂ ಭರ್ತಿ
10 ತಿಂಗಳ ಬಳಿಕ ಮುಖಾಮುಖಿಯಾದ ಬದ್ಧವೈರಿಗಳ ಆಟವನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ದುಬೈ ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿತ್ತು. ಭದ್ರತೆ ದೃಷ್ಟಿಯಿಂದ ಕೆಲ ಆಸನಗಳನ್ನು ಖಾಲಿ ಇರಿಸಲಾಗಿತ್ತು. ಪಂದ್ಯದ ಟಿಕೆಟ್ ಮಾರಾಟ ಆನ್‌ಲೈನ್ ಮತ್ತು ಬಾಕ್ಸ್ ಆಫೀಸ್‌ನಲ್ಲಿ ನಡೆಯಿತು. ಎರಡೂ ಕಡೆ ಮಾರಾಟ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಟಿಕೆಟ್‌ಗಳು ಖಾಲಿಯಾಗಿದ್ದವು. ದುಬಾರಿ ಮೊತ್ತ ನೀಡಿ ಸಾವಿರಾರು ಜನ ಟಿಕೆಟ್‌ಗಳನ್ನು ಖರೀದಿ ಮಾಡಿದ್ದರು. ಕಳೆದ ವರ್ಷ ಇದೇ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಟಿ20 ವಿಶ್ವಕಪ್ ಪಂದ್ಯ ನಡೆದಾಗಲೂ ಕ್ರೀಡಾಂಗಣ ಭರ್ತಿಯಾಗಿತ್ತು.
ಮುಂದುವರಿದ ಭಾರತ ತಂಡದ ಪ್ರಯೋಗ: ಹೊರಗುಳಿದ ಪಂತ್!
ದುಬೈ: ಟಿ20 ವಿಶ್ವಕಪ್‌ಗೆ ಕೆಲವೇ ವಾರಗಳು ಬಾಕಿ ಇದ್ದರೂ ಭಾರತ ತಂಡ ತನ್ನ ಪ್ರಯೋಗಗಳನ್ನು ಮುಂದುವರಿಸಿದೆ. ತನ್ನ ಯೋಜನೆಯ ಭಾಗಿವಾಗಿ ಏಷ್ಯಾಕಪ್‌ನ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೆ ಪ್ರಮುಖ ಆಟಗಾರ ರಿಷಭ್ ಪಂತ್‌ರನ್ನು ಹೊರಗಿಡಲಾಯಿತು. ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಲು ತಂಡದ ಆಡಳಿತ ನಿರ್ಧರಿಸಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತಾದರೂ, ಈ ಸುಳಿವನ್ನು ನಾಯಕ ರೋಹಿತ್ ಶರ್ಮಾ ಮುಂಚಿತವಾಗಿಯೇ ನೀಡಿದ್ದರು. ಟೂರ್ನಿಯುದ್ದಕ್ಕೂ ಭಾರತ ಇನ್ನಷ್ಟುಪ್ರಯೋಗಗಳನ್ನು ನಡೆಸುವ ನಿರೀಕ್ಷೆ ಇದ್ದು, ವಿಶ್ವಕಪ್‌ಗೆ ಸೂಕ್ತ ತಂಡ ಸಿದ್ಧಪಡಿಸಿಕೊಳ್ಳಲು ಯತ್ನಿಸಲಿದೆ.
ರೋಹಿತ್‌ಗೆ 7ನೇ ಏಷ್ಯಾಕಪ್: ದಾಖಲೆ!
ಭಾರತದ ನಾಯಕ ರೋಹಿತ್ ಶರ್ಮಾ 7ನೇ ಬಾರಿಗೆ ಏಷ್ಯಾಕಪ್‌ನಲ್ಲಿ ಆಡುತ್ತಿದ್ದು, ಹೊಸ ದಾಖಲೆ ಬರೆದಿದ್ದಾರೆ. ಅತಿಹೆಚ್ಚು ಬಾರಿ ಏಷ್ಯಾಕಪ್‌ನಲ್ಲಿ ಆಡಿದ ಭಾರತೀಯ ಆಟಗಾರ ಎನ್ನುವ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಸಚಿನ್ ತೆಂಡುಲ್ಕರ್, ಎಂ.ಎಸ್.ಧೋನಿ ತಲಾ 6 ಬಾರಿ ಏಷ್ಯಾಕಪ್ ಟೂರ್ನಿಗಳಲ್ಲಿ ಆಡಿದ್ದರು. ಇನ್ನು ಟೂರ್ನಿಯಲ್ಲಿ 28ನೇ ಪಂದ್ಯವಾಡಿದ ರೋಹಿತ್, ಅತಿಹೆಚ್ಚು ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಲಂಕಾದ ಮಹೇಲಾ ಜಯವರ್ಧನೆ ಅವರೊಂದಿಗೆ ಜಂಟಿ ಮೊದಲ ಸ್ಥಾನಕ್ಕೇರಿದರು. 2008ರಲ್ಲಿ ರೋಹಿತ್ ಮೊದಲ ಬಾರಿಗೆ ಏಷ್ಯಾಕಪ್‌ನಲ್ಲಿ ಆಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.