ಯಾರೊಬ್ಬರಿಗೂ ಕೊಹ್ಲಿಗೆ ಸಿಕ್ಕಷ್ಟು ಸುದೀರ್ಘ ಅವಕಾಶ ಸಿಕ್ಕಿಲ್ಲ: ಮತ್ತೆ ವಿರಾಟ್ ಕಾಲೆಳೆದ ಗಂಭೀರ್..!

By Naveen KodaseFirst Published Sep 10, 2022, 12:33 PM IST
Highlights

ವಿರಾಟ್ ಕೊಹ್ಲಿ ಶತಕದ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಗೌತಮ್ ಗಂಭೀರ್
ಬರೋಬ್ಬರಿ 1020 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಕೊಹ್ಲಿ
ಕೊಹ್ಲಿಗೆ ಸಿಕ್ಕಷ್ಟು ಅವಕಾಶ ಯಾವೊಬ್ಬ ಆಟಗಾರನಿಗೂ ಸಿಕ್ಕಿಲ್ಲ ಎಂದ ಗಂಭೀರ್

ದುಬೈ(ಸೆ.10): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಆಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಆಕರ್ಷಕ 122 ರನ್‌ ಬಾರಿಸುವ ಮೂಲಕ ಕೊನೆಗೂ ಶತಕದ ಬರ ನೀಗಿಸಿಕೊಂಡಿದ್ದಾರೆ. ಇದರೊಂದಿಗೆ ಬರೋಬ್ಬರಿ 1020 ದಿನಗಳ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಇದಷ್ಟೇ ಅಲ್ಲದೇ ಅಂರಾತಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮೊದಲ ಶತಕ ಬಾರಿಸುವಲ್ಲಿಯೂ ಯಶಸ್ವಿಯಾದರು. ದುಬೈ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಶತಕ ಹಾಗೂ ಭುವನೇಶ್ವರ್ ಕುಮಾರ್ ನಡೆಸಿದ ಮಾರಕ ದಾಳಿಯ ನೆರವಿನಿಂದ ಆಫ್ಘಾನಿಸ್ತಾನ ಎದುರು ಟೀಂ ಇಂಡಿಯಾ 101 ರನ್‌ಗಳ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಹೊರತಾಗಿಯೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್, ವಿರಾಟ್ ಕೊಹ್ಲಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗೆ ಶತಕ ಬಾರಿಸಲು ಸಿಕ್ಕಷ್ಟು ಸುದೀರ್ಘ ಅವಕಾಶ ಯೊವೊಬ್ಬ ಆಟಗಾರನಿಗೂ ಸಿಕ್ಕಿಲ್ಲ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ನವೆಂಬರ್ 23, 2019ರಂದು ಕೋಲ್ಕತಾದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು. ಆ ಬಳಿಕ ಮತ್ತೊಂದು ಶತಕಕ್ಕೆ 1020 ದಿನ ಕಾಯಬೇಕಾಯಿತು. 70 ಹಾಗೂ 71ನೇ ಶತಕದ ನಡುವೆ ವಿರಾಟ್‌ 72 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 2,708 ರನ್‌ ಗಳಿಸಿದ್ದರು. 26 ಅರ್ಧಶತಕ ಬಾರಿಸಿದ್ದ ಅವರ ವೈಯಕ್ತಿಕ ಗರಿಷ್ಠ ಮೊತ್ತ ಔಟಾಗದೆ 94 ರನ್‌ ಆಗಿತ್ತು. ಆದರೆ ಬರೋಬ್ಬರಿ 1020 ದಿನಗಳ ಬಳಿಕ ಕೊನೆಗೂ ವಿರಾಟ್ ಕೊಹ್ಲಿ, ಮೂರಂಕಿ ಮೊತ್ತ ದಾಖಲಿಸುವ ಮೂಲಕ ಎಲ್ಲಾ ಟೀಕಾಕಾರರಿಗೆ ಬ್ಯಾಟ್‌ ಮೂಲಕವೇ ಉತ್ತರಿಸಿದ್ದರು.  

ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೂ ಮುನ್ನ 6 ವಾರಗಳ ಕಾಲ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ, ಯುಎಇನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭರ್ಜರಿಯಾಗಿಯೇ ಫಾರ್ಮ್‌ಗೆ ಮರಳಿದ್ದರು. ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, 2  ಅರ್ಧಶತಕ ಹಾಗೂ ಒಂದು ಶತಕ ಸಹಿತ ಒಟ್ಟಾರೆ 276 ರನ್ ಗಳಿಸಿ, ಟೂರ್ನಿಯ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದಾರೆ. ಇನ್ನು ಇದೆಲ್ಲದರ ನಡುವೆ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಪ್ರದರ್ಶನದ ಕುರಿತಂತೆ ಮತ್ತೊಮ್ಮೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Asia Cup 2022 ಶತಕ ಸಿಡಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಖಡಕ್ ವಾರ್ನಿಂಗ್ ನೀಡಿದ ವಿರಾಟ್ ಕೊಹ್ಲಿ..!

ಮೂರು ವರ್ಷಗಳು ಎಂದರೇ ಕ್ರಿಕೆಟ್‌ನಲ್ಲಿ ಸಾಕಷ್ಟು ದೀರ್ಘ ಸಮಯ. ಅದೇನು ಕೇವಲ ಮೂರು ತಿಂಗಳಲ್ಲ. ನಾನು ಅವರ ಪ್ರದರ್ಶನದ ಬಗ್ಗೆ ವಿಮರ್ಶೆ ಮಾಡುತ್ತಿಲ್ಲ. ಅವರು ಈ ಹಿಂದೆ ಸಾಕಷ್ಟು ರನ್ ಗುಡ್ಡೆ ಹಾಕಿರುವುದರಿಂದ ಅವರಿಗೆ ಇಷ್ಟು ಅವಕಾಶ ಸಿಕ್ಕಿದೆ. ಆದರೆ ಯಾವುದೇ ಯುವ ಕ್ರಿಕೆಟಿಗನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಶತಕ ಬಾರಿಸಲು ಮೂರು ವರ್ಷಗಳ ಕಾಲ ಅವಕಾಶ ಸಿಗಲಿದೆ ಎಂದು ನನಗನಿಸುತ್ತಿಲ್ಲ ಎಂದು ಗೌತಮ್ ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೀವು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೇ ತಂಡದ ಪಾಲಿಗೆ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದು ಒಳ್ಳೆಯ ಸುದ್ದಿ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಭಾರತ ಡ್ರೆಸ್ಸಿಂಗ್ ರೂಂನಲ್ಲಿರುವ ಯಾರಾದರೊಬ್ಬರು ಮೂರು ವರ್ಷಗಳ ಕಾಲ ಶತಕ ಬಾರಿಸದೇ ತಂಡದಲ್ಲಿದ್ದಾರೆ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ. ರವಿಚಂದ್ರನ್ ಅಶ್ವಿನ್‌, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಅವರನ್ನು ಸಹಾ ತಂಡದಿಂದ ಕೈಬಿಡಲಾಗಿತ್ತು. ಆದರೆ ಮೂರು ವರ್ಷಗಳಿಂದ ಶತಕ ಬಾರಿಸದಿದ್ದರೂ ವಿರಾಟ್ ಕೊಹ್ಲಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಟೀಂ ಇಂಡಿಯಾ, ಏಷ್ಯಾಕಪ್ ಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದು, ವಿರಾಟ್ ಕೊಹ್ಲಿ ತವರಿನಲ್ಲಿ ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಎದುರು ಕಣಕ್ಕಿಳಿಯುವ ನಿರೀಕ್ಷೆಯಿದೆ. ಇದಾದ ಬಳಿಕ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಆಸ್ಟ್ರೇಲಿಯಾದತ್ತ ಪ್ರವಾಸ ಕೈಗೊಳ್ಳಲಿದೆ.

click me!